ಗದಗ

ನರಗುಂದ ಬಂದ್ ಯಶಸ್ವಿ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಆ. 14
ಕಳಸಾ-ಬಂಡೂರಿ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ ಖಂಡಿಸಿ ರೈತ ಸಂಘ ಹಾಗೂ ಕಳಸಾ-ಬಂಡೂರಿ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್‌ಗೆ ನರಗುಂದದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗ್ಗೆಯಿಂದಲೇ ವಾಹನ ಸಂಚಾರ ಹಾಗೂ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಹಲವಾರು ಗಂಟೆಗಳ ಕಾಲ ರಸ್ತೆ ತಡೆ ನಡೆಸುವ ಮೂಲಕ ಹೋರಾಟಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಸತತವಾಗಿ ಭೀಕರ ಬರ ಎದುರಿಸುತ್ತಿರುವ ರೈತ ಸಮುದಾಯ ಕಂಗಾಲಾಗಿದೆ. ರೈತರಿಗೆ ಅನುಕೂಲವಾಗುವ ಕಳಸಾ-ಬಂಡೂರಿ ನಾಲಾ ಯೋಜನೆ ಕಾಮಗಾರಿ ವಿಳಂಬವಾಗಿದ್ದು, ರೈತರಿಗೆ ಮತ್ತಷ್ಟು ತೊಂದರೆಯಾಗಿದೆ. ಇದನ್ನು ಖಂಡಿಸಿ ಉತ್ತರ ಕರ್ನಾಟಕದ 4 ಜಿಲ್ಲೆಗಳಲ್ಲಿ ಕರೆ ನೀಡಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ತರಾಟೆ: ಅಧಿವೇಶನದಲ್ಲಿ ಕಳಸಾ-ಬಂಡೂರಿ ಕಾಮಗಾರಿಗೆ ರು. 10ರಿಂದ 20 ಕೋಟಿ ಮೀಸಲಿಟ್ಟದ್ದರೆ ಕಾಮಗಾರಿ ಮುಗಿಸಲು ಸಾಧ್ಯವಾಗುತ್ತಿತ್ತು. ಆದರೆ, ನೂತನ ಸರ್ಕಾರ ಬಂದ ಮೇಲೆ ಈ ಕ್ಷೇತ್ರ ಶಾಸಕರು ಯಾವ ಕಳಸಾ-ಬಂಡೂರಿ, ಯಾವ ಹಳ್ಳ? ಇದೊಂದು ಭ್ರಮ ಎಂದು ರೈತರನ್ನು ದಾರಿ ತಪ್ಪಿಸುತ್ತಿರುವುದು ಖಂಡನೀಯ. ಈ ಯೋಜನೆಯೇ ಉಪಯುಕ್ತವಲ್ಲ ಎಂದು ಹೇಳಿಕೆ ನೀಡಿದ ಅವರು, ಮಂಗಳವಾರ ಅವರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಕಾಮಗಾರಿ ಸ್ಥಳಕ್ಕೆ ಏಕೆ ಭೇಟಿ ನೀಡಿದ್ದರು. ಈ ರೀತಿ ರೈತರನ್ನು ಮೋಸ ಮಾಡುವುದನ್ನು ತಕ್ಷಣವೇ ನಿಲ್ಲಿಸಿ ಎಂದು ಪರೋಕ್ಷವಾಗಿ ಶಾಸಕ ಬಿ.ಆರ್. ಯಾವಗಲ್ಲ ಅವರನ್ನು ತರಾಟೆಗೆ ತೆಗೆದುಕೊಂಡರು. ಕಳಸಾ-ಬಂಡೂರಿ ಯುವ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಹೋರಾಟ ರೂಪರೇಷೆಗಳು ಹಾಗೂ ಇದಕ್ಕೆ ಸಹಕರಿಸಿದ ರೈತರು, ಕಾರ್ಮಿಕರನ್ನು ಅಭಿನಂದಿಸಿದರು.
ಬಂದ್ ಯಶ್ವಸಿ: ಬುಧವಾರ ಕರೆ ನೀಡಿದ್ದ ಬಂದ್ ನರಗುಂದ ತಾಲೂಕಿನಲ್ಲಿ ಸಂಪೂರ್ಣ ಯಶಸ್ವಿಯಾಯಿತು. ಬುಧವಾರ ಸಂತೆಯ ದಿನವಾಗಿದ್ದರಿಂದ ಬಸ್ ಸಂಚಾರವಿಲ್ಲದೇ ಸಾರ್ವಜನಿಕರು ತೀರಾ ಪರದಾಡುವಂತಾಯಿತು. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರ ಪಾಡಂತೂ ಹೇಳ ತೀರದಾಗಿತ್ತು. ಪಟ್ಟಣದಲ್ಲಿ ಎಲ್ಲ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿ ಹೋರಾಟಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸಿದರು.
ಹೋರಾಟದಲ್ಲಿ ರೈತ ಮುಖಂಡ ವಸಂತಕುಮಾರ, ಬಸವರಾಜ ಕಾಂಬಳೆ, ತಾಲೂಕು ಅಧ್ಯಕ್ಷ ಬಸವರಾಜ ಸಾಬಳೆ, ಇಂದುದಾರ ಅಂಗಡಿ, ಬಸವಗೌಡ ಚಿಕ್ಕನಗೌಡರ, ಚಳಪ್ಪ ನಾಯ್ಕರ, ರುದ್ರಪ್ಪ ಗಾಣಿಗೇರ, ಅಲ್ಲಿಸಾಬ ನದಾಫ್, ರವಿ ಓಡೆಯರ, ಉಮೇಶ ಕುಡನ್ನವರ, ಚಂದ್ರು ಪವಾರ, ಕೆ.ಬಿ. ಕೆಂಚನಗೌಡ್ರ, ಅರ್ಜುನಗೌಡ ಪಾಟೀಲ, ನಾಗರಾಜ ಪೂಜಾರ, ಮಲ್ಲಿಕಾರ್ಜುನ ಐನಾಪುರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು.

ರೋಣದಲ್ಲಿ ರೈತರ ಪ್ರತಿಭಟನೆ
ರೋಣ: ಕಳಸಾ-ಬಂಡೂರಿ ನಾಲಾ ಯೋಜನೆಗೆ ಕಾಮಗಾರಿ ವಿಳಂಬ ಖಂಡಿಸಿ ಮತ್ತು ಮಲಪ್ರಭಾ ನದಿಗೆ ಮಹಾದಾಯಿ ನದಿ ಜೋಡಣೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ, ಕಳಸಾ-ಬಂಡೂರಿ ಹೋರಾಟ ಸಮಿತಿ, ಕನ್ನಡ ರಕ್ಷಣಾ ವೇದಿಕೆ, ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಸೇರಿದಂತೆ ವಿವಿಧ ಸಂಘಟನೆ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲೋಕನಗೌಡ ಗೌಡರ, ಅಮೀನಪಾಷಾ, ಅಮರೇಶ್ವರ ಬೂದಿಹಾಳ ಮಾತನಾಡಿ, ಕಳಸಾ-ಬಂಡೂರಿ ಕಾಮಗಾರಿಯು ಸ್ಥಗಿತಗೊಂಡಿದ್ದು, ಅದನ್ನು ಪುನಃ ಪ್ರಾರಂಭಿಸಬೇಕು. ಮಲಪ್ರಭಾ ನದಿ ವ್ಯಾಪ್ತಿಯಲ್ಲಿ ಮೂರು ವರ್ಷಗಳಿಂದ ಬರಗಾಲದ ಸಮಸ್ಯೆ ಎದುರಾಗಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಪೂರ್ಣಗೊಂಡ ಕಳಸಾ-ಬಂಡೂರಿ ಯೋಜನೆ ಮತ್ತು ಮಲಪ್ರಭಾ ನದಿಗೆ ಮಹಾದಾಯಿ ನದಿ ಜೋಡಣೆ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕನ್ನಡ ರಕ್ಷಣಾ ವೇದಿಕೆಯ ಮುತ್ತಣ್ಣ ಅನವಾಲ, ರೇಣುಕಾ ನಾಯ್ಕರ ಮಾತನಾಡಿ, ಅನೇಕ ವರ್ಷಗಳಿಂದ ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆಯು ಅನುಷ್ಠಾನಗೊಳ್ಳದೆ ನೆನೆಗುದಿಗೆ ಬಿದ್ದಿದೆ. ರಾಜಕೀಯ ಪಕ್ಷಗಳು ಈ ಯೋಜನೆಯ ವಿಷಯವನ್ನಾಡಿ ರಾಜಕೀಯ ಮಾಡುತ್ತಿವೆ. ಜನಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆಯಿಂದ ಯೋಜನೆಯು ಅನುಷ್ಠಾನಗೊಳ್ಳುತ್ತಿಲ್ಲ. ಸಾರ್ವಜನಿಕರು, ರೈತರು ಮುಂಬರುವ ದಿನಗಳಲ್ಲಿ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಕ್ರಮ ಕೈಗೊಳ್ಳಿ: ನೆನೆಗುದಿಗೆ ಬಿದ್ದಿರುವ ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆಯನ್ನು ಪುನಃ ಪ್ರಾರಂಭಿಸುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರ್ಯ ಕೈಗೊಳ್ಳಬೇಕು. ಮತ್ತೆ ವಿಳಂಬ ನೀತಿ ಅನುಸರಿಸಿದ್ದಲ್ಲಿ ಮುಂಬರುವ ದಿನಗಳಲ್ಲಿ ರೈತ ಸಂಘಟನೆ, ಕಳಸಾ-ಬಂಡೂರಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿ ತಹಸೀಲ್ದಾರ್ ಎಂ.ಬಿ. ಪಾಟೀಲಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಸಿದ್ಧಾರೂಢ ಮಠದಿಂದ ಪ್ರಾರಂಭವಾಗಿ ಸೂಡಿ ವೃತ್ತ, ಮುಲ್ಲಾನ ಬಾವಿ ಮತ್ತು ಪೋತದಾರ ರಾಜನಕಟ್ಟೆ ಹತ್ತಿರ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು.
ಮಹ್ಮದ ಮೂಲಿಮನಿ, ಸಿದ್ದು ಅಂದಾನಗೌಡ್ರ, ಡಾ. ಆಜಯಕುಮಾರ ಬ್ಯಾಳಿ, ಸಿದ್ದಪ್ಪ ಕಟ್ಟಿಮನಿ, ದೊಡ್ಡಬಸಪ್ಪ ನವಲಗುಂದ, ಮಹಾದೇವಪ್ಪ ನವಲಗುಂದ, ನಿಂಗಪ್ಪ ನವಲಗುಂದ, ಲೀಲಾ ಚಿತ್ರಗಾರ, ಉಷಾದೇವಿ ಶಾಂತಸ್ವಾಮಿಮಮಠ, ವಿ.ಎಸ್. ಶಿರೋಳ, ಅಂದಪ್ಪ ಮಾಳಗಿ, ಬಾಬುಗೌಡ ಅಯ್ಯನಗೌಡ್ರ, ಫಕೀರಪ್ಪ ಗೋಧಿ, ಫಕೀರಪ್ಪ ಅಕ್ಕಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.