ಗದಗ

ಮರಳು ಅಕ್ರಮ ಮಾಫಿಯಾ

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 16
ಮರಳು ಅಕ್ರಮ ದಂಧೆಗೂ ಗದುಗಿಗೂ ಅವಿನಾಭವ ನಂಟಿದೆ. ಕೆಲ ವರ್ಷಗಳಿಂದ ಮರಳು ಅಕ್ರಮ ದಂಧೆ ಹಾಗೂ ಅದರಲ್ಲಿರುವ ಕೆಲ ಪ್ರಭಾವಿಗಳೇ ರಾಜಕೀಯ ನಿಯಂತ್ರಣ ಮಾಡುತ್ತಿದ್ದಾರೆ ಎನ್ನುವುದು ಬಹಿರಂಗ. ಆದರೆ, ಕೆಲ ದಿನಗಳಿಂದ ಮರಳು ಅಕ್ರಮ ದಂಧೆ ನಡೆಸುವವರು ನದಿಗಳನ್ನು ಬಿಟ್ಟು, ನದಿ ಪಕ್ಕದ ಹೊಲಗಳು ಹಾಗೂ ಜಿಲ್ಲೆಯಲ್ಲಿರುವ ಹಳ್ಳಗಳತ್ತ ಮುಖ ಮಾಡಿದ್ದು, ಈ ಹಿಂದೆ ಕೆಲ ಪ್ರಭಾವಿಗಳು ಪರೋಕ್ಷವಾಗಿ ದಂಧೆ ಮಾಡುತ್ತಿದ್ದಾರೆ. ಆದರೀಗ ನೇರವಾಗಿಯೇ ದಂಧೆಗೆ ಇಳಿದಿದ್ದಾರೆ.
ಜಿಲ್ಲೆಯ ಮರಳು ದಂಧೆ ನಡೆಯುತ್ತಿರುವುದು ತುಂಗಭದ್ರಾ ನದಿಯಲ್ಲಿ ಹಾಗೂ ಮಲಪ್ರಭಾ ನದಿಯಲ್ಲಿ. ಆದರೆ, ಕೆಲ ದಿನಗಳಿಂದ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಈ ಮರಳು ಅಕ್ರಮ ದಂಧೆ ನಡೆಸುತ್ತಿದ್ದ ಪ್ರಭಾವಿಗಳ ಬಾಯಿಗೆ ಮಣ್ಣು ಬಿದ್ದಿದೆ. ಇನ್ನು ಮಲಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ನದಿ ಪಾತ್ರದಲ್ಲಿ ಇಂದಿಗೂ ದಂಧೆ ನಡೆಯುತ್ತಿದೆ. ಆದರೆ, ತುಂಗಭದ್ರಾ ನದಿಯಲ್ಲಿನ ಪ್ರಮಾಣದಷ್ಟಿಲ್ಲ ಎನ್ನುವುದು ಕೊಂಚ ನೆಮ್ಮದಿ ವಿಷಯ.
ನದಿ ಪಕ್ಕದ ಹೊಲಗಳಿಗೆ ಬೇಡಿಕೆ: ಜಿಲ್ಲೆಯ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿಯ ಅಕ್ಕಪಕ್ಕದಲ್ಲಿರುವ ಹೊಲಗಳಿಗೀಗ ಭಾರಿ ಬೇಡಿಕೆ ಬಂದಿದೆ. ನದಿ ಹರಿಯುವ ವೇಳೆಯಲ್ಲಿ ಹಾಗೂ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಾಗ ಹೊಲಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗುಣಮಟ್ಟದ ಮರಳು ಉಳಿದು ಹೋಗುತ್ತದೆ. ಅಂತಹ ಹೊಲಗಳಲ್ಲಿ ಸಾಕಷ್ಟು ಪ್ರಮಾಣದ ಮರಳಿದೆ. ಸದ್ಯದಲ್ಲಿ ಅಪಾರ ಪ್ರಮಾಣ ನೀರು ಹರಿಯುತ್ತಿರುವುದರಿಂದ ಮರಳು ದಂಧೆ ಸ್ಥಗಿತಗೊಂಡಿದೆ. ನದಿ ಇಕ್ಕೆಲಗಳ ಹೊಲಗಳ ರೈತರಿಗೆ ದುಂಬಾಲು ಬಿದ್ದು ಈ ಮರಳು ದಂಧೆ ಮಾಡುವವರು ಹೊಲಗಳನ್ನು ಲೀಜ್ ಆಧಾರದಲ್ಲಿ ಪಡೆದುಕೊಳ್ಳುತ್ತಿದ್ದಾರೆ.
ಸಂಗ್ರಹ ಮರಳಿಗೆ ಭಾರಿ ಬೇಡಿಕೆ: ಮಲೆನಾಡಿನಲ್ಲಿ ಮಳೆ ತೀವ್ರವಾಗುತ್ತಿದ್ದಂತೆ ಜಾಗ್ರತರಾಗುವ ಮರಳ ಮಾಫಿಯಾಗಳು ಸಾಧ್ಯವಾದಷ್ಟು ಮರಳನ್ನು ತೆಗೆದು ಬೇರೆಡೆ ಸಂಗ್ರಹಿಸಿಟ್ಟಿದ್ದಾರೆ. ಸಂಗ್ರಹಿಸಿದ ಮರಳನ್ನೇ ಈಗ ಮಾರಾಟ ಮಾಡುತ್ತಿದ್ದು, ಈ ಮರಳಿಗೀಗ ಅಪಾರ ಪ್ರಮಾಣದ ಬೇಡಿಕೆ ಬಂದಿದೆ. ಪ್ರತಿ ಲಾರಿಗೆ 10 ರಿಂದ 15 ಸಾವಿರಕ್ಕೆ ಮಾರಾಟವಾಗುತ್ತಿದ್ದ ಮರಳೀಗ 18 ರಿಂದ 22 ಸಾವಿರದವರೆಗೆ ಮಾರಾಟವಾಗುತ್ತಿದೆ. ಇದನ್ನು ಯಾವೊಬ್ಬ ಅಧಿಕಾರಿಗಳೂ ಕೇಳುತ್ತಿಲ್ಲ. ಸರ್ಕಾರಿ ಸ್ಟಾಕ್ ಯಾರ್ಡ್‌ಗಳಲ್ಲಿ ಮರಳಿಲ್ಲ ಎನ್ನುತ್ತಾರೆ. ಆದರೆ, ನಿತ್ಯ ನೂರಾರು ಲಾರಿಗಳು ಮರಳು ತುಂಬಿಕೊಂಡು ಸಾಗುತ್ತವೆ.
ಹುಬ್ಬಳ್ಳಿ-ಧಾರವಾಡಕ್ಕೆ: ಜಿಲ್ಲೆಯ ಶೇ. 85ರಷ್ಟು ಮರಳು ಹುಬ್ಬಳ್ಳಿ, ಧಾರವಾಡಕ್ಕೆ ಸಾಗಾಟವಾಗುತ್ತದೆ. ಇದರಲ್ಲಿ ಲೋಕೋಪಯೋಗಿ, ಗಣಿ ಮತ್ತು ಭೂವಿಜ್ಞಾನ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ನಾವು ಎಷ್ಟೊಂದು ಬಾರಿ ಮೌಖಿಕವಾಗಿ ತಿಳಿಸಿದರೂ ಕೆಲ ಲಾರಿಗಳನ್ನು ಸೀಜ್ ಮಾಡಿದಂತೆ ದಾಖಲೆಗಳಲ್ಲಿ ತೋರಿಸಿ, ಮಾಧ್ಯಮಕ್ಕೆ ಹೇಳಿಕೆ ನೀಡುತ್ತಾರೆ. ಒಳಗೊಳಗೆ ಈ ಮರಳು ಮಾಫಿಯಾದವರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ನಾವು ಬಹಿರಂಗವಾಗಿ ಮಾತನಾಡುವಂತಿಲ್ಲ. ನಮ್ಮ ಜೀವಕ್ಕೆ ಭಯವಿದೆ ಎಂದು ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದ ಯುವಕರು 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಹಳ್ಳಗಳತ್ತ ಮುಖ
ನದಿಗಳಲ್ಲಿ ಮರಳು ಲಭ್ಯತೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ 23ಕ್ಕೂ ಹೆಚ್ಚು ದೊಡ್ಡಹಳ್ಳಗಳು, 17ಕ್ಕೂ ಹೆಚ್ಚು ಚಿಕ್ಕಹಳ್ಳಗಳು ಹಾಗೂ 140 ಸಣ್ಣ ಹಳ್ಳಗಳಿಗೆ ಲಗ್ಗೆ ಇಟ್ಟಿರುವ ಈ ಮರಳು ಮಾಫಿಯಾಗಳು ಅಲ್ಲಿನ ಮರಳನ್ನು (ಕಡಿಮೆ ಗುಣಮಟ್ಟವಿದ್ದರೂ) ಯಥೇಚ್ಛವಾಗಿ ಎತ್ತುವಳಿ ಮಾಡುತ್ತಿದ್ದಾರೆ. ಇದರಿಂದ ಅಕ್ಕ ಪಕ್ಕದಲ್ಲಿರುವ ರೈತರ ಹೊಲಗಳಿಗೆ ಸಾಕಷ್ಟು ಹಾನಿಯಾಗುತ್ತಿದೆ. ಇದನ್ನು ಪ್ರಶ್ನಿಸಿದ ಕೆಲ ರೈತರ ಮೇಲೆ ಆಡಳಿತರೂಢ ಪಕ್ಷದ ಕೆಲ ಪ್ರಭಾವಿಗಳು ಹಲ್ಲೆ ಮಾಡಿದ ಘಟನೆಯೂ ರೋಣ ತಾಲೂಕಿನ ಗಜೇಂದ್ರಗಡ ಸಮೀಪದ ಹಳ್ಳಿಗಳಲ್ಲಿ ವರದಿಯಾಗಿದೆ.

- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.