ಪೊರಕೆಗೆ ಹೈಟೆಕ್ ಟಚ್
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಆ. 18
ವಿದೇಶಿ ಕಂಪನಿಗಳು ತಯಾರಿಸುತ್ತಿರುವ ಪೊರಕೆಗೆ ಸರಿಸಾಟಿಯಾಗುವಂತೆ ಈಚಲು ಮರದ ಗರಿಗಳಿಂದ ಪೊರಕೆಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಜನರ ಗಮನ ಸೆಳೆಯುತ್ತಿವೆ.
ದೇಶ ವಿದೇಶಿ ಕಂಪನಿಯ ಬೃಹತ್ ಉದ್ಯಮಿಗಳು ದೇಶದ ಆರ್ಥಿಕತೆಯನ್ನು ಕೊಳ್ಳೆ ಹೊಡೆಯುತ್ತಿದ್ದು, ವಿದೇಶಿ ಕಂಪನಿಗಳು ಎಲ್ಲ ರಂಗಗಳನ್ನು ಪ್ರವೇಶಿಸಿ ನಮ್ಮ ಸ್ವದೇಶಿ ಉತ್ನನ್ನಗಳ ಮೇಲೆ ಸವಾರಿ ಮಾಡುತ್ತಿರುವ ಈ ಸಂದರ್ಭದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಶಿಗ್ಲಿ ಗ್ರಾಮದಲ್ಲಿ ದೇಶಿ ವಸ್ತುಗಳನ್ನು ಆಕರ್ಷಕವಾಗಿ ತಯಾರಿಸುತ್ತಿರುವುದು ಹೆಮ್ಮೆಯ ಸಂಗತಿ.
ಹಿಂದಿನ ಕಾಲದಲ್ಲಿ ಗುಡ್ಡ ಮತ್ತು ಅಡವಿಗಳಲ್ಲಿ ಸಿಗುತ್ತಿದ್ದ ಹುಲ್ಲುಗಳಿಂದ ಹಾಗೂ ಈಚಲು ಗರಿಗಳಿಂದ ಸಣ್ಣ ಸಣ್ಣ ಕಸಬರಿಗೆ (ಪೊರಕೆ) ಗಳನ್ನು ತಯಾರಿಸಿ ಮಾರಾಟ ಮಾಡಿ ಬಂದ ಹಣದಿಂದ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ ಆಧುನಿಕತೆಯ ಬಿರುಗಾಳಿಗೆ ಸಿಲುಕಿದ ಈ ಗೃಹ ಉದ್ಯಮ ಬಹುರಾಷ್ಟ್ರೀಯ ಕಂಪನಿಗಳು ತಯಾರಿಸುತ್ತಿರುವ ಉದ್ದನೆಯ ಹುಲ್ಲಿನ ಪೊರಕೆಗಳು ದೇಶದಲ್ಲಿ ಬಳಕೆಗೆ ಬಂದ ಮೇಲೆ ನಮ್ಮ ದೇಶಿ ಪೊರಕೆಗೆ ಬೇಡಿಕೆ ಕಡಿಮೆಯಾಗಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿದ್ದವು.
ಈಚಲು ಗರಿಗಳಿಂದ ಉದ್ದನೆಯ ಪೊರಕೆ: ಈ ಉದ್ಯೋಗ ಅವಲಂಬಿಸಿ ಜೀವನ ನಿರ್ವಹಣೆ ಮಾಡುತ್ತಿದ್ದ ಜನರು ಇಂದು ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಶಿಗ್ಲಿಯಲ್ಲಿನ ಹಿಂದುಳಿದ ಜನಾಂಗವಾದ ಕುಂಚಿಕೊರವರು ಮಾತ್ರ ಇದೇ ಪೊರಕೆ ತಯಾರಿಕೆಗೆ ಆಧುನಿಕತೆಯ ಸ್ಪರ್ಶ ನೀಡಿ, ವಿದೇಶಿ ಕಂಪನಿಗಳು ತಯಾರು ಮಾಡುತ್ತಿರುವ ಮಾದರಿಯಲ್ಲಿ ಈಚಲು ಗರಿಗಳಿಂದ ಉದ್ದನೆಯ ಪೊರಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಈ ಪೊರಕೆಗಳನ್ನು ರಾಜ್ಯದ ಮೈಸೂರು ಹಾಗೂ ವಿವಿಧ ಜಿಲ್ಲೆಗಳಲ್ಲಿ ಮಾರಾಟ ಮಾಡಿ ಉತ್ತಮ ಬದುಕು ಸಾಗಿಸುತ್ತಿದ್ದಾರೆ. ಶಿಗ್ಲಿ ಗ್ರಾಮದ ನಿವಾಸಿಗಳಾದ ವೆಂಕಟೇಶ ಗಾಳೆಪ್ಪ ಗೌಳಿ, ಗಾಳೆಪ್ಪ ವೆಂಕಪ್ಪ ಗೌಳಿ, ದ್ಯಾಮಣ್ಣ ಹುಳ್ಳಿಕುಪ್ಪಿ ಮುಂತಾದವರು ಈಚಲು ಗಿಡದ ಗರಿಗಳಿಂದ ಆಧುನಿಕ ರೀತಿಯಲ್ಲಿ ಪೊರಕೆಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಗದಗ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ದೊರೆಯುವ ಈಚಲು ಗಿಡದ ಗರಿಗಳನ್ನು ಕೊಯ್ದು ತಂದು, ಅವುಗಳನ್ನು ತಮಗೆ ಬೇಕಾದ ರೀತಿಯಲ್ಲಿ ಕತ್ತರಿಸಿ, ನಂತರ ಬಿಸಿಲಿನಲ್ಲಿ ಹದಕ್ಕೆ ಬರುವ ರೀತಿಯಲ್ಲಿ ಒಣಗಿಸುತ್ತಾರೆ. ನಂತರ ಆ ಗರಿಗಳನ್ನು ಪ್ಲಾಸ್ಟಿಕ್ ಹಿಡಿಕೆಗಳಲ್ಲಿ ತುಂಬಿಸಿ, ಕಚ್ಚಾ ಪೊರಕೆಯನ್ನು ತಯಾರಿಸಿ, ವಿದ್ಯುತ್ ಚಾಲಿತ ಮೋಟಾರ್ಕ್ಕೆ ಮೊಳೆಯನ್ನು ಸಿಕ್ಕಿಸಿರುವ ರೀತಿಯಲ್ಲಿ ತಯಾರಿಸಿದ ಸಾಧನವೊಂದಕ್ಕೆ ಆ ಪೊರಕೆಗಳನ್ನು ಹಿಡಿದು ಈಚಲು ಗರಿಗಳು ಒಡೆದು ಟಿಸಿಲಾಗುವಂತೆ ಮಾಡುತ್ತಾರೆ. ಹೀಗೆ ಮಾಡಿದರೆ ಪೊರಕೆಗಳು ಕಸ ಗುಡಿಸಲು ಸಿದ್ಧವಾಗುತ್ತವೆ ಎನ್ನುತ್ತಾರೆ ಪೊರಕೆ ತಯಾರಕ ವೆಂಕಪ್ಪ ಗೌಳಿ.
-ಅಶೋಕ ಸೊರಟೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

