ಗದಗ

ಅಕ್ರಮವಾಗಿ ಸಸಿ ಸಾಗಾಣಿಕೆ?

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 18
ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ತಾಲೂಕಿನ ಶೆಟ್ಟಿಕೇರಿ ಸಸ್ಯಪಾಲನಾಲಯದಲ್ಲಿ ಬೆಳೆಸಲಾದ ಅಪಾರ ಪ್ರಮಾಣದ ಬೆಲೆ ಬಾಳುವ ತೇಗದ ಸಸಿಗಳನ್ನು ಖಾಸಗಿ ವ್ಯಕ್ತಿಗಳು ಯಾವುದೇ ಲಿಖಿತ ಮಾಹಿತಿ ಇಲ್ಲದೇ ಭಾನುವಾರ ಟ್ರ್ಯಾಕ್ಟರ್‌ನಲ್ಲಿ ತುಂಬಿ ಸಾಗಿಸುತ್ತಿರುವ ಸಂಗತಿ ತಿಳಿದು ಬಂದಿದೆ.
ಸಸ್ಯಪಾಲನಾಲಯದಲ್ಲಿ ತೇಗ, ಹೊಂಗೆ, ಬೇವು, ಸಾಗವಾನಿ ಸೇರಿದಂತೆ ಸುಮಾರು ರು. 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಸಿಗಳನ್ನು ಬೆಳೆಸಿದ್ದು, ಜವಾಬ್ದಾರಿಯುತ ಅಧಿಕಾರಿಗಳು ಇಲ್ಲಿ ಇರದೇ, ಮೌಖಿಕವಾಗಿ ಖಾಸಗಿ ವ್ಯಕ್ತಿಗಳನ್ನು ಕಳುಹಿಸಿ ಸಸಿಗಳನ್ನು ಸಾಗಿಸುವ ಕಾರ್ಯದಲ್ಲಿ ತೊಡಗಿಸಿದ್ದು, ಸಸಿಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿದೆ. ನಿಮ್ಮ ಸಂಗಡ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಯಾರಿದ್ದಾರೆ ಎಂದು ಸಸಿ ಸಾಗಿಸುತ್ತಿರುವವರನ್ನು ಕೇಳಿದರೆ ಅವರು ಉತ್ತರಿಸಲು ತಡಕಾಡುತ್ತಾರೆ. ಇವರು ಸರಿಯಾಗಿ ಹೇಳದೇ ಇರುವುದು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮ ಮತ್ತು ಪಟ್ಟಣ ಸೇರಿದಂತೆ 4500 ಹೆಕ್ಟೇರ್ ಪ್ರದೇಶದ ರೈತರ ಜಮೀನಿನಲ್ಲಿ ಜಲಾನಯನ ಇಲಾಖೆ ವತಿಯಿಂದ ಬದು ನಿರ್ಮಿಸಿದ್ದು, ಕೆಲವೊಂದು ಪ್ರದೇಶದಲ್ಲಿ ಕಾಟಾಚಾರಕ್ಕೆ ಎಂಬಂತೆ ಸಸಿ ನೆಟ್ಟು ಕೈತೊಳೆದುಕೊಂಡಿದ್ದು, ಜಲಾನಯನ ಇಲಾಖೆ ತಾಲೂಕು ಅಧಿಕಾರಿ ದೀಕ್ಷಿತ ಇದ್ಯಾವುದನ್ನು ಗಮನಿಸದೇ ವಾರಕ್ಕೊಮ್ಮೆ ಇಲಾಖೆಗೆ ಬರುತ್ತಿದ್ದು, ರೈತರ ಹೊಲದಲ್ಲಿ ಬದು ಮತ್ತೆ ನೆಲಸಮವಾಗಿರುವುದು ಕಂಡುಬರುತ್ತಿದೆ.
ನಿಖರ ಮಾಹಿತಿ ಇಲ್ಲ: ಯಾವ ಪ್ರದೇಶದಲ್ಲಿ ಎಷ್ಟು ಸಸಿಗಳನ್ನು ನೆಡಲಾಗಿದೆ. ಸಸ್ಯಪಾಲನಾಲಯದಿಂದ ನಿತ್ಯ ಎಷ್ಟು ಸಸಿಗಳು ಸಾಗಾಣಿಕೆ ಆಗುತ್ತಿವೆ. ಉಳಿದ ಸಸಿಗಳೆಷ್ಟು ಎಂಬುವುದರ ನಿಖರ ಮಾಹಿತಿ ಇಲಾಖೆಗೆ ಸಂಬಂಧಿಸಿದ ಯಾವುದೇ ಹಂತದ ಅಧಿಕಾರಿಗಳಿಂದಲೂ ಹೇಳಲು ಸಾಧ್ಯವಿಲ್ಲದ ರೀತಿಯಲ್ಲಿ ಸಸ್ಯಪಾಲನಾಲಯ ಕಾರ್ಯನಿರ್ವಹಿಸುವಂತೆ ಕಾಣುತ್ತಿದೆ. ಇಷ್ಟೆಲ್ಲ ಲೋಪಗಳು ಕಂಡುಬಂದರೂ ಇಲಾಖೆಗೆ ಸಂಬಂಧಿಸಿದ ಸಿಬ್ಬಂದಿ ಇತ್ತ ಗಮನ ಹರಿಸದಿರುವುದು ಸಂಶಯಕ್ಕೆ ಕಾರಣವಾಗಿದೆ.
-ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.