ಗದಗ

ನಿರ್ವಹಣೆಯಿಲ್ಲದೆ ಹಾಳಾದ ಬೋಟ್

Published On :

ಕನ್ನಡಪ್ರಭ ವಾರ್ತೆ, ನರಗುಂದ, ಆ. 20
2007 ಹಾಗೂ 2009ರಲ್ಲಿ ಪದೇಪದೇ ಮಲಪ್ರಭಾ ಹಾಗೂ ಬೆಣ್ಣಿಹಳ್ಳಕ್ಕೆ ಅತಿಯಾದ ಪ್ರವಾಹ ಬಂದ ಹಿನ್ನೆಲೆಯಲ್ಲಿ ತೊಂದರೆ ಅನುಭವಿಸುವ ಸಾರ್ವಜನಿಕರ ರಕ್ಷಣೆಗಾಗಿ, ತಾಲೂಕು ಆಡಳಿತವೇ ಲಕ್ಷಾಂತರ ಹಣ ಖರ್ಚು ಮಾಡಿ ಬೋಟ್‌ಗಳನ್ನು ಖರೀದಿಸಿದ್ದು, ಸದ್ಯ ಬೋಟ್‌ಗಳ ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗಿ ಹೋಗುತ್ತಿವೆ.
ಈ ಬಗ್ಗೆ ಗಮನ ನೀಡಬೇಕಾದ ತಾಲೂಕು ಆಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಪಟ್ಟಣದ ಹಳೇ ತಹಸೀಲ್ದಾರ್ ಕಾರ್ಯಾಲಯದ ಆವರಣದ ಹಿಂಬದಿಯಲ್ಲಿ ಈ ಬೋಟ್‌ಗಳನ್ನು ಇಡಲು ನಿರ್ಮಿಸಲಾಗಿರುವ ಬೋಟ್‌ನ ಶೆಡ್‌ನಲ್ಲಿ ಕಳೆದ ಹಲವು ತಿಂಗಳಿಂದ ಸರಿಯಾದ ನಿರ್ವಹಣೆ ಇಲ್ಲದೇ ಇರುವುದರಿಂದ ಇದರಲ್ಲಿ ಇರಿಸಲಾಗಿರುವ 2 ಬೋಟ್‌ಗಳೂ ತುಕ್ಕು ಹಿಡಿದಿವೆ. ಈಗ ತಹಸೀಲ್ದಾರ್ ಕಚೇರಿಯು ಮಿನಿ ವಿಧಾನಸೌಧಕ್ಕೆ ಸ್ಥಳಾಂತರವಾದ ಹಿನ್ನೆಲೆಯಲ್ಲಿ ಈ ಶೆಡ್ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿರುವುದರಿಂದ ಶೆಡ್ ಸೇರಿದಂತೆ ಅಲ್ಲಿ ಇಡಲಾಗಿರುವ ಬೋಟ್‌ಗಳು ದುಸ್ಥಿತಿಗೆ ತಲುಪಿವೆ.
ಪ್ರವಾಹದ ವೇಳೆ ಬಳಕೆ: ಈ ಹಿಂದೆ ಅಂದಿನ ಶಾಸಕ ಸಿ.ಸಿ. ಪಾಟೀಲ ಅವರು ಸರ್ಕಾರದ ಮೇಲೆ ಒತ್ತಡ ತಂದು ಈ ತಾಲೂಕಿಗೆ ಪ್ರತಿ ವರ್ಷ ಪದೇಪದೇ ನದಿ ಹಾಗೂ ಹಳ್ಳಗಳ ಪ್ರವಾಹಕ್ಕೆ ಗ್ರಾಮಸ್ಥರು ಸಿಲುಕಿ ತೊಂದರೆ ಅನುಭವಿಸುತ್ತಿದ್ದು, ಇದರಲ್ಲಿ ಸಿಲುಕಿದ ಜನರನ್ನು ರಕ್ಷಣೆ ಮಾಡುವ ಸದುದ್ದೇಶದಿಂದ ತಾಲೂಕಿಗೆ ಬೋಟ್‌ಗಳನ್ನು ನೀಡುವಂತೆ ಮನವಿ ಮಾಡಿ ಸರ್ಕಾರದಿಂದ 2 ಬೋಟ್‌ಗಳನ್ನು ತಂದಿದ್ದರು. ಇವುಗಳನ್ನು ಸಂರಕ್ಷಿಸಲು ತಹಸೀಲ್ದಾರ್ ಕಚೇರಿಯ ಹಿಂಭಾಗದಲ್ಲಿ ಶೆಡ್ ನಿರ್ಮಾಣ ಮಾಡಿ ಇಡಲಾಗಿತ್ತು.
ಲಕ್ಷಾಂತರ ಮೌಲ್ಯದ ಬೋಟ್: ಈ ಶೆಡ್‌ನಲ್ಲಿ ಇಡಲಾಗಿರುವ 2 ಬೋಟ್‌ಗಳು ಲಕ್ಷಾಂತರ ಮೌಲ್ಯದ್ದಾಗಿವೆ. ಪ್ರವಾಹದ ಸಂದರ್ಭದಲ್ಲಿ ಆಪತ್ಬಾಂಧವನಾಗಿ ಕಾರ್ಯ ಸಲ್ಲಿಸುವ ಈ ಬೋಟ್‌ನ್ನು ತಹಸೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿ ಸಂರಕ್ಷಿಸಿ, ಅಗತ್ಯ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಬೇಕು. ಆದರೆ, ಇಲ್ಲಿಯವರೆಗೂ ಈ ಬೋಟ್‌ಗಳ ರಕ್ಷಣೆಗೆ ಆದ್ಯತೆ ನೀಡದೇ ಇರುವುದರಿಂದ ಈ ಬೋಟ್‌ಗಳು ಇಂದು ತುಕ್ಕು ಹಿಡಿಯುತ್ತಿವೆ. ಇದರಿಂದಾಗಿ ಲಕ್ಷಾಂತರ ಮೌಲ್ಯದ ಬೋಟ್‌ಗಳು ಹಾಳಾಗಿ ಹೋಗುತ್ತಿದರೂ ತಹಸೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಇವುಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳದೇ ಇರುವುದು ಈ ಭಾಗದ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ತಹಸೀಲ್ದಾರ್ ಕಚೇರಿ ಸ್ಥಳಾಂತರ: ಕಳೆದ ಕೆಲವು ದಿನಗಳ ಹಿಂದೆ ಬೋಟ್‌ನ ಮುಂಭಾಗದಲ್ಲಿದ್ದ ತಹಸೀಲ್ದಾರ್ ಕಚೇರಿಯನ್ನು ಹೊಸದಾಗಿ ನಿರ್ಮಾಣಗೊಂಡ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ತಹಸೀಲ್ದಾರ್ ಕಚೇರಿಯನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಈ ಬೋಟ್‌ಗಳನ್ನು ಸ್ಥಳಾಂತರಿಸುವ ಕಾರ್ಯವಾಗಬೇಕಿತ್ತು. ಈ ಬೋಟ್‌ಗಳನ್ನು ಮಿನಿ ವಿಧಾನಸೌಧದಲ್ಲಿಯೇ ಇರಿಸಿಕೊಳ್ಳುವ, ಇಲ್ಲವೇ ಮಿನಿ ವಿಧಾನಸೌಧದ ಪಕ್ಕದಲ್ಲಿ ಪ್ರತ್ಯೇಕ ಶೆಡ್ ನಿರ್ಮಿಸಿ ಇರಿಸಬಹುದಾಗಿತ್ತು. ಆದರೆ ಈ ಕಾರ್ಯ ಇಂದಿಗೂ ಆಗಿಲ್ಲ.
ಕಳ್ಳರ ಕಾಟ: ಬೋಟ್‌ಗಳನ್ನು ಇರಿಸಲಾಗಿರುವ ಶೆಡ್‌ನಲ್ಲಿ ಯಾವುದೇ ರೀತಿಯ ವ್ಯವಸ್ಥಿತ ಭದ್ರತೆ ಇಲ್ಲದೇ ಇರುವುದರಿಂದ ಕಳ್ಳರು ಶೆಡ್‌ಒಳಗೆ ಹೋಗಿ ಬೋಟ್‌ನ ಬಿಡಿಭಾಗಗಳನ್ನು ಕಳವು ಮಾಡಿದ್ದಾರೆ. ಈ ಶೆಡ್‌ಗೆ ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಬೋಟ್‌ನ ರಕ್ಷಣೆಯಂತೂ ಕಷ್ಟಸಾಧ್ಯವಾಗಿದೆ. ಈ ಶೆಡ್‌ಗೆ ಸರಿಯಾದ ಬಾಗಿಲು ಇಲ್ಲದೇ ಇರುವುದರಿಂದ ಶೆಡ್‌ನ ಮುಂಭಾಗದಲ್ಲಿ ಮುಳ್ಳಿನ ಬೇಲಿಯನ್ನು ಹಚ್ಚಲಾಗಿದೆ. ಬೋಟ್‌ಗಳಿಗೆ ಸೂಕ್ತ ರಕ್ಷಣೆ ಇಲ್ಲದೇ ಇರುವುದರಿಂದ ಕಳ್ಳರು ಬೋಟ್‌ನ ಬಿಡಿ ಭಾಗಗಳನ್ನು ಕಳವು ಮಾಡಿಕೊಂಡು ಹೋಗುವ ಸಾಧ್ಯತೆ ಇದ್ದು, ಈ ಕುರಿತು ತಹಸೀಲ್ದಾರ್ ಅವರು ಈಗಲಾದರೂ ಎಚ್ಚೆತ್ತು ಬೋಟ್‌ಗಳ ಸಂರಕ್ಷಣೆಗೆ ಮುಂದಾಗಬೇಕಿದೆ.

 ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.