ಗದಗ

ನೇಪಥ್ಯಕ್ಕೆ ಸರಿಯಿತೇ ಎಂಟಾಣೆ!

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 21
ವದಂತಿಗಳು ಸಾರ್ವಜನಿಕರನ್ನು ಎಷ್ಟೊಂದು ಗೊಂದಲಕ್ಕೀಡು ಮಾಡಿ, ಅವಾಂತರ ಸೃಷ್ಟಿಸುತ್ತಿವೆ ಎಂದರೆ, ಒಂದು ವಾರದಿಂದ 50 ಪೈಸೆ ನಾಣ್ಯಗಳು ನಡೆಯುವುದಿಲ್ಲ. ಅವುಗಳನ್ನು ರಿಜರ್ವ್ ಬ್ಯಾಂಕ್ ಹಿಂದೆ ಪಡೆದಿದೆ ಎನ್ನುವ ವದಂತಿ ದಿನೇ ದಿನೇ ಜೋರಾಗುತ್ತಿದೆ. ಇದರಿಂದ ಕೆಲ ಸಣ್ಣ ವ್ಯಾಪಾರಸ್ಥರಿಗೆ ಅನುಕೂಲವಾಗಿದ್ದರೆ, ನಿರ್ವಾಹಕರಿಗೆ ಸಾಕಷ್ಟು ಸಮಸ್ಯೆಯಾಗಿದೆ.
ಈ ಗೊಂದಲ ಸಣ್ಣ ವ್ಯಾಪಾರಸ್ಥರಿಗೆ ಹಾಗೂ ಭಿಕ್ಷುಕರಿಗೆ ಹೆಚ್ಚಿನ ಲಾಭ ಮಾಡುತ್ತಿದ್ದು, ಸಾರ್ವಜನಿಕರು 50 ಪೈಸೆಯ ನಾಣ್ಯ ನೀಡಿದರೆ ಅದು ನಡೆಯುವುದಿಲ್ಲ. ಏನೇ ಖರೀದಿಸಿದರೂ ಒಂದು ರುಪಾಯಿ ಮೇಲೆ, ನಾವು ಮರಳಿ 50 ಪೈಸೆ ಚಿಲ್ಲರೆ ನಿಮಗೆ ಕೊಟ್ಟರೂ ಅದು ನಡೆಯುವುದಿಲ್ಲ ಎನ್ನುವ ಮೂಲಕ ಪರಿಸ್ಥಿತಿ ಲಾಭ ಪಡೆಯುತ್ತಿದ್ದಾರೆ. ಇನ್ನು ಭಿಕ್ಷಕರಿಗೆ 50 ಪೈಸೆ ನೀಡಿದರೆ, ಇದು ನಡೆಯುವುದಿಲ್ಲ ಎಂದು ಹೇಳುವ ಮೂಲಕ ತಾವು ಲಾಭ ಮಾಡಿಕೊಳ್ಳುವುದರೊಟ್ಟಿಗೆ, ಸಾರ್ವಜನಿಕರಲ್ಲಿ ಮತ್ತಷ್ಟು ಗೊಂದಲಕಾರಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ.
ನಿರ್ವಾಹಕರಿಗೆ ತೊಂದರೆ: ಮುಖ್ಯವಾಗಿ ಸಮಸ್ಯೆ ಎದುರಿಸುತ್ತಿರುವವರು ನಿರ್ವಾಹಕರು, ಸರ್ಕಾರ ಬಸ್ ಪ್ರಯಾಣ ದರವನ್ನು ಸ್ಟೇಜ್‌ಗಳ ಮೇಲೆ ನಿಗದಿ ಮಾಡುವುದರಿಂದ 50 ಪೈಸೆಯ ಅವಶ್ಯಕತೆ ಹೆಚ್ಚಾಗಿ ಬರುತ್ತದೆ. ಅದರಲ್ಲಿಯೂ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಬಸ್ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುವ ಬಸ್‌ಗಳಲ್ಲಿ ಇದು ತೀವ್ರ. ಕೆಲವೊಮ್ಮೆ ಸಾರ್ವಜನಿಕರೇ 50 ಪೈಸೆ ನಾಣ್ಯ ಚಲಾವಣೆಯಲ್ಲಿ ಇಲ್ಲ ಎಂದು ಹೇಳಿ ಹಣವನ್ನೇ ನೀಡುವುದಿಲ್ಲ. ನಿರ್ವಾಹ ಕರು 50 ಪೈಸೆ ಕೊಡಲು ಹೋದರೆ ಇದು ನಡೆಯುವುದಿಲ್ಲ ಎನ್ನುವುದು ಸಾಮಾನ್ಯವಾಗಿದೆ.
ಮೌಲ್ಯ ಕಳೆದುಕೊಳ್ಳುತ್ತಿದೆಯೇ?: ಈ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಇಂದಿನ ಬೆಲೆ ಏರಿಕೆಯ ದಿನದಲ್ಲಿ 50 ಪೈಸೆ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ ಎನ್ನುವುದು ಸ್ಪಷ್ಟ. ಚಾಕ್‌ಲೇಟ್, ಚಿವಿಂಗ್ ಗಮ್ ಸೇರಿದಂತೆ ಸಣ್ಣ ಬೆಲೆಯ ವಸ್ತುಗಳನ್ನು ಕಂಪನಿಗಳು ಸದ್ದಿಲ್ಲದೇ ಹೆಚ್ಚಿಸಿಕೊಂಡು ರು. 1, ರು. 2 ಮಾಡಿರುವುದರಿಂದ ಒಂದೆಡೆ, 50 ಪೈಸೆ ಸದ್ದಿಲ್ಲದೇ ಮೌಲ್ಯ ಕಳೆದುಕೊಳ್ಳುತ್ತಿದೆ. ಆದರೆ, ಇದನ್ನು ರಿಜರ್ವ್ ಬ್ಯಾಂಕ್ ಅಧಿಕೃತವಾಗಿ ಹಿಂದೆ ಪಡೆದಿರುವ ಕುರಿತು ಘೋಷಣೆ ಮಾಡುವವರೆಗೂ ಅದಕ್ಕೆ ಮೌಲ್ಯವಿದೆ. ಈ ಹಿಂದೆಯೂ 25 ಪೈಸೆಯ ನಾಣ್ಯದ ವಿಷಯವಾಗಿ ಮೊದ ಮೊದಲು ಸಾರ್ವಜನಿಕರಿಂದಲೇ ನಾಣ್ಯದ ಮೌಲ್ಯದ ಬಗ್ಗೆ ಅಪಖ್ಯಾತಿ ಪ್ರಾರಂಭವಾಗುತ್ತಿದ್ದಂತೆ ಮುಂದೆ ರಿಜರ್ವ್ ಬ್ಯಾಂಕ್ ಅದನ್ನು ಹಿಂದಕ್ಕೆ ಪಡೆಯಿತು. ಈಗ ಆ ಸರದಿ 50 ಪೈಸೆಗೆ ಬಂದಿದ್ದು, ಸದ್ಯದಲ್ಲಿಯೇ 50 ಪೈಸೆ ನಾಣ್ಯ ದೂರವಾದರೂ ಆಶ್ಚರ್ಯ ಪಡಬೇಕಾಗಿಲ್ಲ.

ನಾವ್ ಬಸ್‌ನ್ಯಾಗ್ ಚಿಲ್ರೆ ಕೊಟ್ರ...(50 ಪೈಸೆ) ತೊಗೊಳೊದಿಲ್ಲರ್ರೀ, ಅವ್ರ ಕೊಡುದಿಲ್ಲರ್ರೀ... ಕೇಳಿದ್ರ ಅವು ಬಂದ್ ಆಗ್ಯಾವಂತಲ್ಲಾ, ಅಂತ ನಮ್ಮನ್ನ ಕೇಳತಾರ್ರೀ.. 50 ಪೈಸೆ ಸಲುವಾಗಿ ನಾವ್ ನೌಕ್ರಿ ಮಾಡುದು ವಜ್ಜೆ ಆಗೈತ್ರಿ...
-ಪಿ.ಎಸ್. ಜಾಧವ

ನಿರ್ವಾಹಕ
ನಮ್ಮ ಅಂಗ್‌ಡ್ಯಾಗೂ 50 ಪೈಸೆ ಸಮಸ್ಯೆ ದೊಡ್ದೈತ್ರಿ... ನಮ್ದ ಸಣ್ಣ ಅಂಗ್‌ಡಿ.. ಸ್ವಲ್ಪ ವ್ಯಾಪಾರ, ಆದ್ರ 50 ಪೈಸೆ ಕೆಲ್ವ ಮಂದಿ ತೊಗೊಂತಾರಿ.. ಮತ್ ಕೆಲ್ವ್ ಮಂದಿ ಇಸ್ಕೋಳ್ಳುದಿಲ್ಲರ್ರೀ... ಹಂಗಾಗಿ ದೊಡ್ಡ ಸಮಸ್ಯೆ ಆಗೈತ್ರಿ..

-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.