ಗದಗ

ಮೀಸಲಾತಿ ಪ್ರಕಟ: ರಾಜಕೀಯ ಬಿರುಸು

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ.24
ಚುನಾವಣೆ ಮುಗಿದು 6 ತಿಂಗಳ ನಂತರ ಕಾಂಗ್ರೆಸ್ ಸರ್ಕಾರ ಕೊನೆಗೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಅದರಂತೆ ಸ್ಥಳೀಯ ಪಪಂ ಅಧ್ಯಕ್ಷ ಸ್ಥಾನ ಎಸ್ಸಿಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ.
ಇದೀಗ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಹೊಂದಿದ್ದು, ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಜಿಪಂ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಜಿಲ್ಲಾ ಅಧ್ಯಕ್ಷ ವಿ.ವಿ. ಕಪ್ಪತ್ತನವರ ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ತೀವ್ರ ಸ್ಪರ್ಧೆಯೊಡ್ಡಿ ಜೆಡಿಎಸ್ 7 ಸ್ಥಾನ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದಿಲ್ಲಿ ಗಮನಾರ್ಹ.
ಸ್ಥಳೀಯ ಪಪಂನಲ್ಲಿ ಒಟ್ಟು 17 ಸ್ಥಾನಗಳಿದ್ದು, ಅದರಲ್ಲಿ ಜೆಡಿಎಸ್ 7, ಕಾಂಗ್ರೆಸ್ 5, ಬಿಜೆಪಿ 3, ಬಿಎಸ್ಸಾರ್1 ಹಾಗೂ 1 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ವಿಧಾನ ಪರಿಷತ್ತಿನ ಚುನಾವಣೆ ಮತ್ತು 2 ಲೋಕಸಭಾ ಉಪ ಚುನಾವಣೆಯಲ್ಲಿ ಆಗಲೇ ವಿರೋಧ ಪಕ್ಷಗಳು ಒಂದು ರೀತಿ ಜನತಾ ಪರಿವಾರವನ್ನು ಸಂಘಟಿಸಿದ್ದು, ಅದೇ ರೀತಿ ಬಿಜೆಪಿ, ಜೆಡಿಎಸ್ ಮತ್ತು ಬಿಎಸ್ಸಾರ್ ಕೈಗೂಡಿಸಿದರೆ ಶಿರಹಟ್ಟಿ ಪಪಂ ಮೈತ್ರಿಕೂಟದ ಪಾಲಾಗುವುದರಲ್ಲಿ ಸಂಶಯವಿಲ್ಲ.
ಸದ್ಯ ಬಿಜೆಪಿ ಪಕ್ಷದ ನಾಗರಾಜ ಲಕ್ಕುಂಡಿ, ಜೆಡಿಎಸ್ ಪಕ್ಷದ ಸುಜಾತಾ ಗೋಡೆಣ್ಣವರ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ತಮ್ಮ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿ.ವಿ. ಕಪ್ಪತ್ತನವರ ಪಕ್ಷಗಳ ಮೈತ್ರಿ ಕುರಿತು ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂಬುದರ ಮೇಲೆ ನಿರ್ಣಯ ಹೊರಬೀಳಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಮುಖಂಡರದೇ ಅಂತಿಮ ತಿರ್ಮಾನ: ಜೆಡಿಎಸ್ ಮತ್ತು ಬಿಜೆಪಿ ಪಕ್ಷದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದು, ಸರ್ಕಾರದ ನಿಯಮದಂತೆ ಮೀಸಲಾತಿ ಕ್ಷೇತ್ರದಿಂದಲೇ ಸುಜಾತಾ ಗೋಡೆಣ್ಣವರ ಆಯ್ಕೆಗೊಂಡಿದ್ದು, ಕಾಂಗ್ರೆಸ್ ಹೊರತುಪಡಿಸಿ ಜೆಡಿಎಸ್, ಬಿಜೆಪಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ ಮೊದಲ ಅವಧಿಯನ್ನು 15 ತಿಂಗಳ ಕಾಲ ಮಿತಿ ನಿಗದಿ ಮಾಡಿ ಅಧಿಕಾರ ಹಂಚಿಕೆ ಮಾಡಿ ಸುಜಾತಾ ಗೋಡೆಣ್ಣವರಗೆ ಮೊದಲ ಆದ್ಯತೆ ನೀಡಲಾಗುವುದು. ಉಪಾಧ್ಯಕ್ಷ ಸ್ಥಾನದ ಕುರಿತು ಎಲ್ಲ ಮುಖಂಡರು ಸಭೆ ಸೇರಿ ತೀರ್ಮಾನಿಸಲಾಗುವುದು ಎಂದರು.
ಕಾಂಗ್ರೆಸ್ ಅಸಹಾಯಕ: ಸದ್ಯ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಶಿರಹಟ್ಟಿ ಪುರಸಭೆಯಲ್ಲಿ ಕೇವಲ 5 ಸ್ಥಾನ ಗೆಲುವು ಸಾಧಿಸಿದ್ದು, ಅಧಿಕಾರ ಹಿಡಿಯಬೇಕು ಎನ್ನುವ ಕನಸು ಆ ಪಕ್ಷಕ್ಕೆ ಅಸಹಾಯಕತೆ ಸಾಕ್ಷಿಯಾಗಿದೆ. ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಸಮರ್ಪಕ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಸದಸ್ಯರಿಗೆ ಈ ಸ್ಥಿತಿ ನಿರ್ಮಾಣವಾಗಿದ್ದು, ರಾಜಕೀಯದಲ್ಲಿ ಯಾವುದು ಅನಿಶ್ಚಿತವಲ್ಲ, ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಪಕ್ಷ ಯಾವ ತಂತ್ರಗಾರಿಕೆ ಅನುಸರಿಸುತ್ತದೆ ಎನ್ನುವುದನ್ನು ಕಾಯ್ದು ನೋಡಬೇಕು.

ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.