ಕಾಲುವೆ ಇದ್ದರೂ ನೀರಿಲ್ಲ
ನರಗುಂದ: ಗದಗ ಜಿಲ್ಲೆಯಲ್ಲಿಯೇ ಕಾಲುವೆ ನೀರಾವರಿಯನ್ನು ಹೊಂದಿರುವ ಏಕೈಕ ತಾಲೂಕು ಎನ್ನುವ ಹೆಗ್ಗಳಿಕೆಯನ್ನು ಹೊಂದಿರುವ ನರಗುಂದ ತಾಲೂಕಿನ ರೈತರ ಸಮಸ್ಯೆಗಳಿಗೆ ಮುಕ್ತಿಯೇ ಇಲ್ಲದಂತಾಗಿದೆ.
ಹಲವಾರು ವರ್ಷಗಳಿಂದ ಕಾಲುವೆಗಳಿಗೆ ನೀರುಣಿಸುವ ಮಲಪ್ರಭಾ ಜಲಾಶಯ ಭರ್ತಿಯಾಗದೇ ಇರುವುದು ಒಂದು ಸಮಸ್ಯೆಯಾದರೆ, ಕಾಲುವೆಗಳ ದುಸ್ಥಿತಿಯಿಂದ ಕಾಲುವೆಗಳಿಗೆ ಹರಿಸಿದ ನೀರು ಸಮರ್ಪಕವಾಗಿ ರೈತರ ಜಮೀನುಗಳನ್ನು ತಲುಪದೇ ಇರುವುದರಿಂದ ನೀರಾವರಿ ಸೌಲಭ್ಯ ಹೊಂದಿದ್ದರೂ ಪ್ರಯೋಜನವಾಗದೇ ಈ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಕಾಲುವೆಯಲ್ಲಿ ಜಾಲಿಕಂಟಿ: 12ನೇ ಮುಖ್ಯ ಕಾಲವೆಯ 4 ಆರ್ ಚಿಕ್ಕ ಕಾಲುವೆ ಇದು ನರಗುಂದದಿಂದ-ರೋಣಕ್ಕೆ ಹೋಗುವ ದಾರಿಗೆ ಹೊಂದಿಕೊಂಡ ಕಾಲುವೆಯಲ್ಲಿ ಜಾಲಿ ಕಂಟಿ ಮತ್ತು ಇತರೆ ಕಸ ಬೆಳೆದು ನಿಂತಿದೆ. ಆದರೆ, 1976 ರಿಂದ 2001ರವರಗೆ ನೀರಾವರಿ ಇಲಾಖೆ ಮೂಲಕ ಸರ್ಕಾರವೇ ಈ ಎಲ್ಲ ಕಾಲವೆಗಳ ದುರಸ್ತಿ ಸೇರಿದಂತೆ ರೈತರಿಗೆ ನೀರು ಮುಟ್ಟಿಸುವ ಕಾರ್ಯ ಉತ್ತಮವಾಗಿ ನಡೆದಿತ್ತು. ಆದರೆ 2001-02ನೇ ಸಾಲಿನಿಂದ ಆಗಿನ ನೀರಾವರಿ ಸಚಿವ ಎಚ್.ಕೆ.ಪಾಟೀಲರು ಮಹಾರಾಷ್ಟ್ರ ರಾಜ್ಯದ ಮಾದರಿಯಲ್ಲಿ ನೀರು ಬಳಕೆದಾರರ ಸಂಘ ರಚನೆ ಮಾಡಿದ್ದಾರೆ. ಈ ಸಂಘ ಪ್ರತಿ ರೈತನ 1 ಎಕರೆಗೆ ರು. 100 ನೀರಿನ ಕರ ವಸೂಲಿ ಮಾಡಬೇಕು. ಇದರಲ್ಲಿ ರು. 60 ಕಾಲುವೆ ದುರಸ್ತಿಗೆ ಬಳಸಿಕೊಳ್ಳಬೇಕು. ಉಳಿದ ರು. 40 ಸರ್ಕಾರಕ್ಕೆ ಕಟ್ಟಬೇಕೆಂದು ಹೇಳಿ ಸಂಘ ರಚನೆ ಮಾಡಿದಾಗಿನಿಂದ ಕಾಲುವೆಗಳಲ್ಲಿ ಜಾಲಿಕಂಟಿ ಬೆಳೆದು ನಿಂತಿವೆ. ಕೆಲವು ಕಾಲವೆಗಳು ದುರಸ್ತಿ ಇಲ್ಲದೇ ನಶಿಸಿ ಹೋಗುವ ಸ್ಥಿತಿಗೆ ಬಂದಿವೆ. ನೀರು ಬಳಕೆದಾರರ ಸಂಘದವರನ್ನು ಕೇಳಿದರೆ ನಾವು ಎಲ್ಲಿಂದ ಸ್ವಚ್ಛ ಮಾಡಿಸಬೇಕು. ರೈತರಿಂದ ವಂತಿಗೆ ವಸೂಲಿ ಆಗಿಲ್ಲ. ಸಾಕಷ್ಟು ಸಲ ಸರ್ಕಾರಕ್ಕೆ ಚಿಕ್ಕ ಕಾಲುವೆ ದುರಸ್ತಿಗೆ ಹಣ ಕೊಡಬೇಕೆಂದು ಕೇಳಿದರೂ ಯಾವುದೇ ಪ್ರಯೋಜನವಾಗದ್ದರಿಂದ ಕೆಳ ಭಾಗದ ರೈತರ ಸ್ಥಿತಿ ಹೇಳ ತೀರದಾಗಿದೆ ಎನ್ನುತ್ತಾರೆ.
ರೈತರಿಂದಲೇ ಕಾಲುವೆ ದುರಸ್ತಿ: ನೀರು ಬಳಕೆದಾರರ ಸಂಘಗಳಾದ ನಂತರ ರೈತರು ತಮ್ಮ ಹೊಲಗಳ ಮೇಲೆ ಪಟ್ಟಿ ಹಾಕಿಕೊಂಡು ಕಾಲುವೆ ಸ್ವಚ್ಛಗೊಳಿಸಿಕೊಂಡಿದ್ದಾರೆ. ಆದರೂ ಕೊನೆಯ ಭಾಗದಲ್ಲಿರುವ ರೈತರಿಗೆ ನೀರು ಸಿಗುತ್ತಿಲ್ಲ. ಯಾಕೆಂದರೆ ಪ್ರತಿ ವರ್ಷ ನೀರಾವರಿ ಇಲಾಖೆಯವರು ಖಾಸಗಿ ಗುತ್ತಿಗೆದಾರರಿಗೆ ಕೆಳ ಭಾಗದ ಕಾಲುವೆಗಳಿಗೆ ಇಂತಿಷ್ಟು ನೀರು ಹರಿಸಬೇಕೆಂದು ಗುತ್ತಿಗೆ ನೀಡಿ ಬಿಡುತ್ತಾರೆ. ಆದರೆ ಗುತ್ತಿಗೆದಾರರು ತಮ್ಮ ಟೆಂಡರ್ ಆದ ನಂತರ ಕಾಲುವೆ ಪಕ್ಕದಲ್ಲಿಯೂ ಹಾಯುವುದಿಲ್ಲ.
ಅನಧಿಕೃತ ಪಂಪ್ಸೆಟ್: ಕೆಲವರು ಅನಧಿಕೃತವಾಗಿ ಕಾಲುವೆಗಳಿಗೆ ಪಂಪ್ಸೆಟ್ಗಳನ್ನು ಅಳವಡಿಸುವ ಮೂಲಕ ತಮ್ಮ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳುವುದರಿಂದ ಕಾಲುವೆಯ ಕೊನೆಯಲ್ಲಿರುವ ಹೊಲಗಳ ರೈತರಿಗೆ ನೀರು ತಲುಪುತ್ತಿಲ್ಲ. ಬದಲಾಗಿ ಅವರು ನೀರಿನ ಕರ ಕಟ್ಟುವುದು ಮಾತ್ರ ತಪ್ಪುತ್ತಿಲ್ಲ.
ಎಸ್.ಜಿ. ತೆಗ್ಗಿನಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

