ಗದಗ

ಶೇಂಗಾಕ್ಕೆ ಸುರುಳಿ ರೋಗ

Published On :

ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಆ. 27

ರೈತರ ಸಂಕಷ್ಟಗಳಿಗೆ ಕೊನೆ ಇಲ್ಲವೆನೋ ಎನ್ನುವಂತಾಗಿದೆ.
ಮೊದಲೇ ಮಳೆಯ ಕೊರತೆ ಮಧ್ಯೆಯೇ ಅಲ್ಪ ಸ್ವಲ್ಪ ಬೆಳೆದಿದ್ದ ಶೇಂಗಾ ಬೆಳೆಗೆ ಸುರುಳಿ ಪೂಚಿ ರೋಗ ಕಾಡುತ್ತಿದ್ದು, ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರತೀಯ ಆರ್ಥಿಕ ತಜ್ಞರ ಅಭಿಪ್ರಾಯದಂತೆ ಭಾರತದ ರೈತರು ಸಾಲದಲ್ಲಿ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲಿಯೇ ಸಾಯುತ್ತಾರೆ ಎನ್ನುವ ಮಾತು ಅಕ್ಷರಶಃ ನಿಜ ಎನಿಸುತ್ತದೆ.
ಪಟ್ಟಣದ ಸುತ್ತ ಮುತ್ತಲಿನ ಅನೇಕ ಗ್ರಾಮಗಳಲ್ಲಿ ಶೇಂಗಾ ಬೆಳೆಗೆ ಸುರುಳಿ ಪೂಚಿ ರೋಗ ಕಾಣಿಸಿಕೊಂಡಿದ್ದು, ರೈತರನ್ನು ಕಂಗಾಲಾಗಿಸಿದೆ. ಬಾರಂಗಿ ಬಿಡುವ ಹಂತದಲ್ಲಿನ ಗೆಜ್ಜೆ ಶೇಂಗಾ, ಬಳ್ಳಿ ಶೇಂಗಾ ಬೆಳೆಗೆ ಈ ರೋಗ ಎದುರಾಗಿದ್ದು, ಬೆಳೆ ಕುಂಠಿತವಾಗುವ ಆತಂಕ ರೈತರನ್ನು ಕಾಡುತ್ತಿದೆ. ಶೇಂಗಾ ಬೆಳೆಗೆ ಅಂಟಿಕೊಂಡಿರುವ ಸುರುಳಿ ಪೂಚಿ ರೋಗದಿಂದ ಬೆಳೆಯ ಮೇಲಿನ ಎಲೆಗಳೆಲ್ಲ ಕಪ್ಪಾಗಿ, ಮುಟುರಿದಂತಾಗಿ ಬೆಳೆಯ ಬೆಳವಣಿಗೆ ಆಗದಂತೆ ತಡೆಯುತ್ತದೆ. ಎಲೆಯಲ್ಲಿರುವ ಕೀಟಗಳು ಎಲೆಗಳಲ್ಲಿನ ರಸ ಹೀರುವುದರಿಂದ ಎಲೆಗಳು ಕಪ್ಪಾಗಿ ಮುಟುರಿದಂತಾಗುತ್ತವೆ.
ಹತೋಟಿಗೆ ಬಾರದ ರೋಗ: ಶೇಂಗಾ ಸುರುಳಿ ಪೂಚಿ ರೋಗಕ್ಕೆ ತುತ್ತಾಗಿ ನಷ್ಟ ಅನುಭವಿಸಿರುವ ಒಡೆಯರ ಮಲ್ಲಾಪುರ ಗ್ರಾಮದ ರೈತರಾದ ಯಲ್ಲಪ್ಪ ಮಲ್ಲಪ್ಪ ತಳವಾರ, ಲಕ್ಷ್ಮಣ ಮೆಳ್ಳಿಗಟ್ಟಿ, ಗದಿಗೆಪ್ಪ ತಳವಾರ, ಫಕ್ಕಿರೇಶ ಬಾರ್ಕಿ, ಗಣೇಶ ಹಮ್ಮಗಿ ಅವರು ಹೇಳುವಂತೆ ಶೇಂಗಾ ಬೆಳೆಗೆ ಅಂಟಿರುವ ಸುರುಳಿ ಪೂಚಿ ರೋಗಕ್ಕೆ ಎರಡು ಬಾರಿ ಔಷಧ ಸಿಂಪರಣೆ ಮಾಡಿದರೂ ಹತೋಟಿಗೆ ಬಾರದಾಗಿದೆ. ಒಂದು ಎಕರೆ ಶೇಂಗಾ ಬೆಳೆಗೆ ಸುಮಾರು ರು. 2000 ಗಳ ಔಷಧಿ ಉಪಯೋಗಿಸಿದರೂ ಪ್ರಯೋಜನವಾಗುತ್ತಿಲ್ಲ. ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರೈತ ಸಂಪರ್ಕ ಕೇಂದ್ರದಲ್ಲಿ ಯಾವೊಬ್ಬ ಅಧಿಕಾರಿಯೂ ಕುಳಿತು ಕೆಲಸ ಮಾಡುತ್ತಿಲ್ಲ. ರೈತರಿಗೆ ಮಾಹಿತಿ ನೀಡಬೇಕಾದ ಅಧಿಕಾರಿಗಳು ಈಗ ಕೇವಲ ಬೀಜ ಗೊಬ್ಬರ ವಿತರಿಸುವ ಅಧಿಕಾರಿಗಳಾಗಿದ್ದಾರೆ. ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಸಂಪರ್ಕ ಕೇಂದ್ರದಲ್ಲಿ ಕಾಣ ಸಿಗುತ್ತಿಲ್ಲ.
 ಪದ್ಮರಾಜ ಪಾಟೀಲ
ಒಡೆಯರ ಮಲ್ಲಾಪುರ ಗ್ರಾಮದ ಗ್ರಾಪಂ ಸದಸ್ಯ
ರೈತ ಸಂಪರ್ಕ ಕೇಂದ್ರವು ಸದ್ಯ ಬೆಳೆಗೆ ತಗುಲುತ್ತಿರುವ ಕೀಟ ಬಾಧೆ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಬೆಳೆಗೆ ಔಷಧ ಸಿಂಪರಣೆಯ ಬಗ್ಗೆ ಹಾಗೂ ಮುಂಜಾಗ್ರತೆಯ ಬಗ್ಗೆ ತಿಳಿಸುತ್ತಿಲ್ಲ. ಅಲ್ಲದೆ ಕೃಷಿ ಅಧಿಕಾರಿಗಳು ಈಗ ಹೊಲದ ಸನಿಹಕ್ಕೆ ಹೋಗುತ್ತಿಲ್ಲ. ಅಧಿಕಾರಿಗಳು ರೈತ ಸಂಪರ್ಕ ಕೇಂದ್ರದಲ್ಲಿ ಭೇಟಿಗೆ ಹೋದರೂ ಸಿಗುತ್ತಿಲ್ಲ. ಈ ಕುರಿತು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಲು ಹೋದರೆ ಮೊಬೈಲ್ ಸ್ವಿಚ್‌ಆಫ್ ಆಗಿರುತ್ತದೆ.
- ಯಲ್ಲಪ್ಪ ತಳವಾರ, ಲಕ್ಷ್ಮಣ ಮೆಳ್ಳಿಗಟ್ಟಿ (ರೈತರು)  
ತಂಪು ವಾತಾವರಣದಲ್ಲಿ ಇಂತಹ ಕೀಟ ಬಾಧೆ ಸಾಮಾನ್ಯವಾಗಿದ್ದು, ತಂಪು ಹವಾಗುಣದಲ್ಲಿ ಈ ಕೀಟಗಳು ತಮ್ಮ ವಂಶಾಭಿವೃದ್ಧಿ ಮಾಡಿಕೊಳ್ಳಲು ಎಲೆಗಳನ್ನು ಆಶ್ರಯಿಸುವುದರಿಂದ, ಎಲೆಗಳ ರಸ ಹೀರುವುದರಿಂದ ಎಲೆಗಳು ಕಪ್ಪಾಗುತ್ತವೆ. ಈ ರೋಗದ ನಿಯಂತ್ರಣಕ್ಕಾಗಿ ಮೊನೊಕ್ರೋಟೋ ಪಾಸ್ ಔಷಧಿಯನ್ನು ಸಿಂಪರಣೆ ಮಾಡಬೇಕು.
- ಕೆ.ಎ.ನದಾಫ
ಲಕ್ಷ್ಮೇಶ್ವರದ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.