ಗದಗ

ಸುದ್ದಿ ಸಂಕ್ಷೇಪ

Published On :

ಇಂದು ಸಂಸ್ಕೃತ ಸಪ್ತಾಹ
ಗದಗ:  ನಗರದ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸಂಸ್ಕೃತ ಪಾಠ ಶಾಲೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಲಾಗಿದ್ದ ಸಂಸ್ಕೃತ ಕಾರ್ಯಕ್ರಮದ ಮುಕ್ತಾಯ ಸಮಾರಂಭ ಆ. 30ರ ಸಂಜೆ 5.30ಕ್ಕೆ ಪಾಠಶಾಲೆಯ ಆವರಣದಲ್ಲಿ ನಡೆಯಲಿದೆ. ಸಾನ್ನಿಧ್ಯವನ್ನು ಕಲ್ಲಯ್ಯಜ್ಜನವರು ವಹಿಸುವರು. ಉದ್ಘಾಟನೆಯನ್ನು ಬಸವರಾಜಸ್ವಾಮಿ ಹಿಡ್ಕಿಮಠ ನೆರವೇರಿಸುವರು. ಎನ್.ಎನ್. ಭಟ್, ಪಿ.ಸಿ. ಹಿರೇಮಠ, ಪಂಚಾಕ್ಷರಿ ಅಣ್ಣಿಗೇರಿ, ಮಂಜುನಾಥ ಮಶಾಳ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

ಇಂದು ದುರ್ಗಾದೇವಿ ಪಲ್ಲಕ್ಕಿ ಉತ್ಸವ
ಗಜೇಂದ್ರಗಡ:  ಸ್ಥಳೀಯ ಅದಿದೇವತೆ ಹಿರೇದುರ್ಗಾದೇವಿ ಪಲ್ಲಕ್ಕಿ ಉತ್ಸವ ಆ. 30 ರಂದು ಜರುಗಲಿದೆ. ಬೆಳಗ್ಗೆ ಹಿರೇ ದುರ್ಗಾದೇವಿಗೆ ವಿಶೇಷ ಪೂಜೆ ಅಭಿಷೇಕ ನಡೆಯಲಿದೆ. ಬಳಿಕ ನಡೆಯುವ ದೇವಿಯ ಪಲ್ಲಕ್ಕಿ ಮೆರವಣಿಗೆಯು ಸುಮಂಗಲಿಯರು ಕಳಸ, ಭಜನಾ ಮೇಳದೊಂದಿಗೆ ಪಟ್ಟಣದ ಮೈಸೂರಮಠ, ಬಸವೇಶ್ವರ ವೃತ್ತ, ಹಾಗೂ ದುರ್ಗಾವೃತ್ತದ ಮೂಲಕ ಸಂಚರಿಸಿ ದೇಗುಲ ತಲುಪುವುದು. ನಂತರ ಮಧ್ಯಾಹ್ನ 1 ಗಂಟೆಗೆ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದುರ್ಗಾದೇವಿ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಸೆ. 1ರಂದು ರಸಪ್ರಶ್ನೆ ಸ್ಪರ್ಧೆ
ರೋಣ: ತಾಲೂಕಿನ ಇಟಗಿ ಗ್ರಾಮದ ಭೀಮಾಂಬಿಕಾ ಯುವಕ ಮಂಡಳ, ಅನ್ನದಾನೇಶ್ವರ ಯುವಕ ಮಂಡಳ ಇವರ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ. 1ರಂದು ಬೆಳಗ್ಗೆ 10 ಗಂಟೆಗೆ ಇಟಗಿ ಗ್ರಾಮದ ಭೀಮಾಂಬಿಕಾ ಸಭಾಭವನದಲ್ಲಿ ಮುಕ್ತ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ. ಉದ್ಘಾಟನೆಯನ್ನು ಹಾವೇರಿ ಲೋಕಸಭೆಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಿಥುನ್ ಪಾಟೀಲ ನೆರವೇರಿಸುವರು. ಸಾನ್ನಿಧ್ಯವನ್ನು ಇಟಗಿ ಧರ್ಮರ ಮಠದ ಷಣ್ಮುಕಪ್ಪ ಧರ್ಮರ ವಹಿಸುವರು. ಅಧ್ಯಕ್ಷತೆಯನ್ನು ತಾಪಂ ಮಾಜಿ ಅಧ್ಯಕ್ಷ ಪ್ರಭು ಮೇಟಿ ವಹಿಸುವರು.  ಮುಂತಾದವರು ಉಪಸ್ಥಿತರಿರುವರು.

ಸಂಸ್ಕೃತಿ, ಸಂಸ್ಕಾರ ರೂಢಿಸಿಕೊಳ್ಳಿ:  ದತ್ತಪ್ರಸನ್ನ ಪಾಟೀಲ್
ಗದಗ: ಭಾರತೀಯ ಸಂಸ್ಕೃತಿಯ ಬೆನ್ನೆಲುಬಾದ ಧರ್ಮವನ್ನು ಸಂರಕ್ಷಿಸುವುದರ ಜತೆಗೆ ಸಂಸ್ಕೃತಿ, ಸಂಸ್ಕಾರಗಳನ್ನು ರೂಢಿಸಿಕೊಂಡಾಗ ಮಾನವನ ಬದುಕು ಮೌಲ್ಯಯುತವಾಗುತ್ತದೆ ಎಂದು ವಿ.ಡಿ.ಎಸ್. ಪಪೂ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರೊ. ದತ್ತಪ್ರಸನ್ನ ಪಾಟೀಲ್ ಹೇಳಿದರು.
ನಗರದ ಶಿವಾನಂದ ಪಪೂ ವಿಜ್ಞಾನಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸದ್ಭಾವನಾ ದಿನ ಹಾಗೂ ಸಾಂಸ್ಕೃತಿಕ ಏಕತಾದಿನದ ಅತಿಥಿ ಉಪನ್ಯಾಸಕರಾಗಿ ಅವರು ಮಾತನಾಡಿದರು. ಜಾತೀಯತೆ ಮತ್ತು ಮತಾಂಧತೆ ದೂರವಾದಾಗ ಮಾತ್ರ ರಾಷ್ಟ್ರೀಯ ಸದ್ಭಾವನೆ ಜಾಗೃತವಾಗಲು ಸಾಧ್ಯ ಎಂದರು.
ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆ ಬೋಧಿಸಿದ ಪ್ರಾಚಾರ್ಯ ಎಸ್.ವಿ. ಸಂಕನೂರ ಮಾತನಾಡಿ, ಏಕತೆಯೇ ದೇಶದ ಅಖಂಡತೆಯನ್ನು ಕಾಪಾಡಬಲ್ಲ ಪ್ರಬಲ ಅಸ್ತ್ರವಾಗಿದೆ. ರಾಷ್ಟ್ರೀಯ ಸದ್ಭಾವನಾ ದಿನದಂದು ಮಾಡಿದ ಪ್ರತಿಜ್ಞೆಯ ಒಂದಂಶವನ್ನಾದರೂ ನಿಜಜೀವನದಲ್ಲಿ ಅಳವಡಿಸಿಕೊಂಡಾಗ ದಿನಾಚರಣೆ ಅರ್ಥಪೂರ್ಣವಾಗುತ್ತದೆ.
ಸ್ವಾತಂತ್ರ್ಯ ಪೂರ್ವದಲ್ಲಿದ್ದ ರಾಷ್ಟ್ರೀಯ ಸದ್ಭಾವನೆ ಇಂದಿನ ಯುವಜನಾಂಗದಲ್ಲಿ ಜಾಗೃತವಾಗಬೇಕಾದುದು ಅಗತ್ಯ ಎಂದರು.
ಈ ಸಂದರ್ಭದಲ್ಲಿ ಪ್ರೊ. ಬಿ.ವಿ. ಕೊಟ್ಟೂರ, ಕೆ.ಎಸ್. ರಡ್ಡೇರ, ಪ್ರೊ. ಸುಸ್ಮಿತಾ ಹಾಗೂ ಕೆ.ಎಸ್. ಜಾಧವ ಉಪಸ್ಥಿತರಿದ್ದರು. ಮುರಳೀಧರ ಸಂಕನೂರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಬಿ.ಎಸ್. ಹಳ್ಳದ ವಂದಿಸಿದರು.

ಇಂದು ಇಟಗಿಯಲ್ಲಿ ಸಿಡಿ ಸಂಭ್ರಮೋತ್ಸವ
ರೋಣ:  ತಾಲೂಕಿನ ಸುಕ್ಷೇತ್ರ ಇಟಗಿ ಗ್ರಾಮದ ಭೀಮಾಂಬಿಕಾದೇವಿ ಮಂಡಳಿ ವತಿಯಿಂದ ಮೂರು ವರ್ಷಕ್ಕೊಮ್ಮೆ ಜರುಗುವ ಯುವಕರು ಜೋಗಮ್ಮ ಹಾಗೂ ಜೋಗಪ್ಪನ ವೇಷದಲ್ಲಿ ತಾಳಗತ್ತಿನಲ್ಲಿ ಹಾಡುವ ಮತ್ತು ಕುಣಿಯುವ ಸಿಡಿ ಸಂಭ್ರಮೋತ್ಸವು ಆ. 30 ರಂದು ಇಟಗಿ ಗ್ರಾಮದಲ್ಲಿ ಜರುಗಲಿದೆ ಎಂದು ಭೀಮಾಂಬಿಕಾ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.