ಸುದ್ದಿ ಸಂಕ್ಷೇಪ
ವಿಮೆ ತುಂಬಲು ಸೂಚನೆ
ನರಗುಂದ: 2013-14ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ಕೊಣ್ಣೂರ, ನರಗುಂದದಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಲ್ಲಿ ರೈತರಿಗೆ ಭಾಗವಹಿಸಲು ಆ. 31ಕೊನೆಯ ದಿನವಾಗಿದ್ದು, ಅರ್ಹರು ಈ ಯೋಜನೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು. ಬೆಳೆಸಾಲ ಪಡೆದ ರೈತರು ಬಿತ್ತಿದ ಅಥವಾ ನಾಟಿ ಮಾಡಿದ 30 ದಿನಗಳೊಳಗಿನ ಬೆಳೆಗಳಿಗೆ ಮಾತ್ರ ವಿಮಾ ಕಂತು ಕಟ್ಟಿ ಅರ್ಜಿ ಸಲ್ಲಿಸಬೇಕು. ಹಾಗೂ ನೊಂದಾಯಿಸುವ ಸಮಯದಲ್ಲಿ ಮುಂಗಾರು ಹಂಗಾಮಿನ ಬೆಳೆಗಳಾದ ಗೋವಿನಜೋಳ, ಸೂರ್ಯಕಾಂತಿ ಬೆಳೆಗಳು ಆರೋಗ್ಯಕರವಾಗಿರಬೇಕು. ಅದಕ್ಕೆ ತಾಲೂಕಿನ ರೈತ ಬಾಂಧವರು ತಮ್ಮ ಬೆಳೆಯ ಮೇಲೆ ವಿಮಾಭರಣ ಮಾಡಿ ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ತಾಲೂಕು ಸಹಾಯಕ ನಿರ್ದೇಶಕ ಎಸ್.ಎನ್. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಟ್ಕಾ: ಬಂಧನ
ಗದಗ: ಲಕ್ಷ್ಮೇಶ್ವರ ಶಹರದ ಪಂಪವೃತ್ತದ ಹತ್ತಿರ ಇರುವ ಪ್ರಾವಿಜನ್ ಸ್ಟೋರ್ದಲ್ಲಿ ಮಟ್ಕಾ ನಂಬರ್ ಬರೆದುಕೊಳ್ಳುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ನಿವಾಸಿ ಸೂಗೀರಪ್ಪ ವಾಲಿಶೆಟ್ಟರ ಬಂಧಿತ ಆರೋಪಿ. ಬಂಧಿತನಿಂದ ರು. 640 ಹಾಗೂ ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೋಂಟದಾರ್ಯಮಠ ಜಾತ್ಯತೀತ ಕೇಂದ್ರ: ಶ್ರೀ
ಗದಗ: ಗದುಗಿನ ಜಗದ್ಗುರು ತೋಂಟದಾರ್ಯ ಮಠ ನಾಡಿನ ಪ್ರಮುಖ ಜಾತ್ಯತೀತ ಕೇಂದ್ರವಾಗಿದೆ ಎಂದು ರಾಜನಹಳ್ಳಿಯ ಪೀಠದ ಪ್ರಸನ್ನಾನಂದ ಶ್ರೀಗಳು ಹೇಳಿದರು. ಅವರು ಈಚೆಗೆ ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಗದಗ ಜಿಲ್ಲಾ ಆರ್ಥಿಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ 5ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ಜಗದ್ಗುರು ತೋಂಟದಾರ್ಯ ಮಹಾಸ್ವಾಮಿಗಳವರು ಬಸವತತ್ವದ ಅನುಯಾಯಿಯಾಗಿದ್ದು, ತಮ್ಮ ಮಠದ ಬಾಗಿಲನ್ನು ಎಲ್ಲ ಸಮಾಜದವರಿಗೆ ಮುಕ್ತವಾಗಿರಿಸಿದ ಕಾರಣ ದಲಿತ ವರ್ಗಕ್ಕೆ ಸೇರಿದ ತಾವು ಈ ಮಠದಲ್ಲಿ 4 ವರ್ಷಗಳಿದ್ದು, ವ್ಯಾಸಂಗ ಮಾಡಿ ರಾಜೇನಹಳ್ಳಿಯಂತಹ ನಾಡಿನ ಪ್ರಮುಖ ಪೀಠದ ಉತ್ತರಾಧಿಕಾರಿಯಾಗಲು ಸಾಧ್ಯವಾಯಿತು ಎಂದರು. ಜಿಲ್ಲಾ ಕೇಂದ್ರದಲ್ಲಿ ಆರ್ಥಿಕ ಅಧ್ಯಯನ ಸಂಸ್ಥೆ ಸ್ಥಾಪಿಸಿ ತನ್ಮೂಲಕ ಈ ವಿಷಯದ ಅಧ್ಯಾಪಕರಿಗೆ ಪುನಶ್ಚೇತನ ಶಿಬಿರ ಏರ್ಪಡಿಸುತ್ತಿರುವುದು ಈ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಗೌರವಿಸುವುದು ಒಂದು ಉತ್ತಮ ಸಂಪ್ರದಾಯವಾಗಿದೆ ಎಂದು ಹೇಳಿದರು. ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಸ್. ಗೌಡರ ಸಂಘದ ಅಧ್ಯಕ್ಷ ಪ್ರಾಚಾರ್ಯ ಎಸ್.ಎಸ್.ಪಟ್ಟಣಶೆಟ್ಟಿ, ಕಾರ್ಯಾಧ್ಯಕ್ಷ ವಿ.ಎಸ್. ದಲಾಲಿ ಮಾತನಾಡಿದರು. ಪ್ರೊ. ಎಚ್.ಎಸ್. ಕಿಂದ್ರಿ, ಹಾಗೂ ವೈ.ಸಿ. ಪಾಟೀಲ ಉಪನ್ಯಾಸ ನೀಡಿದರು. ಪ್ರೊ. ಎಚ್.ಎನ್. ಕಾಳೆ ನಿರೂಪಿಸಿದರು. ಪ್ರೊ. ಬಿ.ಜಿ. ಗೋಪಾಲ ವಂದಿಸಿದರು.
ಯುವಸೇವಾ ಸಂಘಟನೆ ಅಧ್ಯಕ್ಷರ ಆಯ್ಕೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 30
ಪಟ್ಟಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾನ ಮನಸ್ಕ ಗೆಳೆಯರೆಲ್ಲರೂ ಸೇರಿಕೊಂಡು ನೂತನವಾಗಿ ಪ್ರಾರಂಭಿಸಿರುವ ಯುವಸೇವಾ ಸಂಘಟನೆ ಅಧ್ಯಕ್ಷರಾಗಿ ಪವನ ಚೋಪ್ರಾ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಶಾಂತ ತಾವರಗೇರಿ, ಕಾರ್ಯದರ್ಶಿಯಾಗಿ ಮಂಜುನಾಥ ಗೋಡಿ, ಸಹ ಕಾರ್ಯದರ್ಶಿಯಾಗಿ ವೀರೇಶ ಗೋಡಿ, ಸದಸ್ಯರಾಗಿ ರಾಘು ಹೆಗ್ಗಡಾಳ, ಫಣಿರಾಜ ಅಳವಂಡಿ, ಮುಧುಕೇಶ ಬೀಡನಾಳ, ಶ್ರೀನಿವಾಸ ದೊಡ್ಡಮನಿ, ಕಮಲೇಶ ಜೈನ್, ಗಣೇಶ ಶಿದ್ಲಿಂಗ, ಆಶಿಷ್ ಜೈನ್, ಬಾಲಾಜಿ ಕಾಲವಾಡ, ಸಂಜಯ ಜೈನ್ ಆಯ್ಕೆ ಯಾಗಿದ್ದಾರೆ.
ಮಟ್ಕಾ: ಓರ್ವನ ಬಂಧನ
ಗದಗ: ಲಕ್ಷ್ಮೇಶ್ವರ ಪಟ್ಟಣದ ಗದಗ ನಾಕಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ನಂಬರ್ ಬರೆದುಕೊಳ್ಳುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಗೊಜನೂರು ಗ್ರಾಮದ ನಿವಾಸಿ ಷಣ್ಮುಖಯ್ಯ ಹಿರೇಮಠ ಬಂಧಿತ ಆರೋಪಿ. ಬಂಧಿತನಿಂದ ರು. 360 ಹಾಗೂ ಮಟ್ಕಾ ಬರೆದ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

