ಅಧ್ಯಕ್ಷ ಗಾದಿಗೆ ಹಾದಿ ಸುಗಮ
ಶರಣು ಸೊಲಗಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 31
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮುಗಿದು 6 ತಿಂಗಳ ಬಳಿಕ ಇದೀಗ ರಾಜ್ಯ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದ್ದು, ಮುಂಡರಗಿ ಪುರಸಭೆ ಅಧ್ಯಕ್ಷ ಸ್ಥಾನವು ಎಸ್ಟಿ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿದೆ. ಇಲ್ಲಿ ಒಬ್ಬರೇ ಎಸ್ಟಿ ಮಹಿಳೆ ಇರುವುದರಿಂದ ಅವರಿಗೆ ಅಧ್ಯಕ್ಷ ಹುದ್ದೆಗೇರಲು ಹಾದಿ ಸುಗಮವಾದಂತಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೇರಲು ಮಾತ್ರ ಯಾವೊಬ್ಬ ಸದಸ್ಯರು ಮನಸ್ಸು ಮಾಡುತ್ತಿಲ್ಲ ಎನ್ನುವ ಮಾತು ಪಟ್ಟಣದಾದ್ಯಂತ ಕೇಳಿಬರುತ್ತಿದೆ.
ಒಟ್ಟು 23 ಸದಸ್ಯರನ್ನು ಹೊಂದಿದ ಮುಂಡರಗಿ ಪುರಸಭೆಯಲ್ಲಿ ಈ ಬಾರಿ 12 ಕಾಂಗ್ರೆಸ್ ಸದಸ್ಯರು, 8 ಬಿಜೆಪಿ, 2 ಪಕ್ಷೇತರ ಹಾಗೂ ಓರ್ವ ಜೆಡಿಎಸ್ ಸದಸ್ಯರಿದ್ದು, 12 ಸದಸ್ಯ ಬಲವನ್ನು ಹೊಂದಿದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, 20ನೇ ವಾರ್ಡಿನ ಭಾರತಿ ಹಕ್ಕಿ ಒಬ್ಬರೇ ಎಸ್ಟಿ ಮಹಿಳೆ ಇರುವುದರಿಂದ ಅಧ್ಯಕ್ಷರ ಆಯ್ಕೆ ಯಾವುದೇ ವಿರೋಧವಿಲ್ಲದೇ ಆಗುತ್ತಿದೆ.
ಆಕಾಂಕ್ಷಿಗಳಿದ್ದರು: ಮುಂಡರಗಿ ಪುರಸಭೆ ಚುನಾವಣೆಗೆ ಈ ಬಾರಿ ಯುವಕರೇ ಹೆಚ್ಚಿನ ಪ್ರಮಾಣದಲ್ಲಿ ಸ್ಪರ್ಧಿಸಿ ಆಯ್ಕೆಯಾಗಿರುವುದರಿಂದ ಆಡಳಿತ ಹಿಡಿದಿರುವ ಕಾಂಗ್ರೆಸ್ ಪಕ್ಷದ 12 ಸದಸ್ಯರಲ್ಲಿಯೇ ಎಸ್ಸಿ ಮೀಸಲಾತಿ ಬಂದಿದ್ದರೆ 2 ಜನ. ಸಾಮಾನ್ಯ ಮೀಸಲಾತಿ ಬಂದಿದ್ದರೆ 5 ಜನ, ಸಾಮಾನ್ಯ 'ಬ'ವರ್ಗ ಮೀಸಲಾತಿ ಬಂದಿದ್ದರೆ 3 ಜನ ಹೀಗೆ ಸುಮಾರು 6 ರಿಂದ 7 ಜನ ಅಧ್ಯಕ್ಷ ಹುದ್ದೆ ಆಕಾಂಕ್ಷಿಗಳಾಗಿದ್ದರು. ಆದರೆ, ಒಂದೇ ಒಂದು ಸದಸ್ಯರನ್ನು ಹೊಂದಿದ ಎಸ್ಟಿ ಮಹಿಳೆ ಮೀಸಲಾತಿ ಬಂದಿದ್ದರಿಂದ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಾಗಿದ್ದ ಸದಸ್ಯರು ನಿರಾಶರಾಗಿದ್ದಾರೆ.
ಪ್ರಾರಂಭದಲ್ಲಿ ವಿರೋಧ: ಪುರಸಭೆ ಅಧ್ಯಕ್ಷ ಹುದ್ದೆ ಎಸ್ಟಿ ಮಹಿಳೆಗೆ ಎಂದು ಮೀಸಲಾತಿ ಹೊರಬಂದಾಗ ಅಧ್ಯಕ್ಷರಾಗುವ ಕನಸನ್ನು ಕಂಡಿದ್ದ ಬಹುತೇಕ ಸದಸ್ಯರು ತಮಗೆ ಅನ್ಯಾಯವಾಗಿದೆ. ಆದ್ದರಿಂದ ತಾವು ಕೋರ್ಟ್ ಮೆಟ್ಟಿಲೇರುತ್ತೇವೆ. ಸಾಮೂಹಿಕವಾಗಿ ರಾಜಿನಾಮೆ ಕೊಡುತ್ತೇವೆ ಎನ್ನುವ ಮಾತುಗಳು ಸದಸ್ಯರುಗಳ ವಲಯದಿಂದ ಕೇಳಿ ಬರುತ್ತಿದ್ದವು, ನಂತರ ಸ್ಥಳೀಯ ಶಾಸಕ ರಾಮಕೃಷ್ಣ ದೊಡ್ಡಮನಿಯವರ ಮಾರ್ಗದರ್ಶನದಿಂದ ಎಲ್ಲ ಸದಸ್ಯರನ್ನು ಒಮ್ಮನಸ್ಸಿನಿಂದ ಒಪ್ಪಿಸಲಾಯಿತು ಎನ್ನಲಾಗುತ್ತಿದೆ.
ಯಾರಿಗೂ ಬೇಡವಾದ ಉಪಾಧ್ಯಕ್ಷ ಸ್ಥಾನ: ಸಾಮಾನ್ಯ ಸ್ಥಾನಕ್ಕೆ ಅಧ್ಯಕ್ಷ ಮೀಸಲಾತಿ ಬಂದಿದ್ದರೆ 6-7 ಜನ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದರು. ಆದರೆ, ಸಾಮಾನ್ಯ ಸ್ಥಾನಕ್ಕೆ ಉಪಾಧ್ಯಕ್ಷ ಹುದ್ದೆ ಮೀಸಲಾಗಿದ್ದು, ಇದುವರೆಗೂ ಉಪಾಧ್ಯಕ್ಷ ಸ್ಥಾನಕ್ಕೇರಲು ಯಾವ ಸದಸ್ಯರೂ ಮುಂದೆ ಬರುತ್ತಿಲ್ಲವೆನ್ನುವ ಮಾತುಗಳು ಕೇಳಿಬರುತ್ತಿವೆ. ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಕೃಷ್ಣ ದೊಡ್ಡಮನಿಯವರು ಮುಂಡರಗಿಯವರು ಹಾಗೂ ಕಾಂಗ್ರೆಸ್ ಪಕ್ಷದವರೇ ಆಗಿರುವುದರಿಂದ ಪುರಸಭೆ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕುರಿತು ಯಾವ ನಿರ್ಧಾರ ಕೈಗೊಳ್ಳುವರೋ ಎನ್ನುವುದನ್ನು ಕಾದುನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

