ರಾಜಕೀಯ ಪಕ್ಷಗಳಲ್ಲಿ ತಳಮಳ
ಕನ್ನಡಪ್ರಭ ವಾರ್ತೆ, ಗದಗ, ಫೆ.14
ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ಗೊಂದಲದ ಮಧ್ಯೆಯೇ ಸ್ಥಳೀಯ ನಗರ ಸಂಸ್ಥೆಗಳಿಗೆ ಗುರುವಾರ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳಲ್ಲಿ ತಳಮಳ ಶುರುವಾಗಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ತವಕದಲ್ಲಿದ್ದವರಿಗೆ ಉತ್ಸಾಹ ಕಂಡುಬಂದಿದ್ದು, ಜಿಲ್ಲೆಯ ಮಟ್ಟಿಗಂತೂ ಸ್ಥಳೀಯ ಸಂಸ್ಥೆಯ ಚುನಾವಣೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ವಿವರ
ಜಿಲ್ಲೆಯ 5 ತಾಲೂಕುಗಳ (ಸದ್ಯ 7 ತಾಲೂಕು) ವ್ಯಾಪ್ತಿಯಲ್ಲಿ ಒಂದು ನಗರಸಭೆ, 5 ಪುರಸಭೆ, 3 ಪಟ್ಟಣ ಪಂಚಾಯ್ತಿ ಇದ್ದು, ಈ ಎಲ್ಲ ಸಂಸ್ಥೆಗಳಲ್ಲಿ ಒಟ್ಟು 180 ಸದಸ್ಯರ ಆಯ್ಕೆಗಾಗಿ ಮಾ. 7ರಂದು ಚುನಾವಣೆ ನಡೆಯಲಿದೆ. ಗದಗ, ಬೆಟಗೇರಿ ನಗರಸಭೆ, ರೋಣ, ಗಜೇಂದ್ರಗಡ, ಲಕ್ಷ್ಮೇಶ್ವರ, ಮುಂಡರಗಿ ಹಾಗೂ ನರಗುಂದ ಪುರಸಭೆಗಳಾಗಿದ್ದು, ನರೇಗಲ್ಲ, ಶಿರಹಟ್ಟಿ ಹಾಗೂ ಮುಳಗುಂದ ಪಟ್ಟಣ ಪಂಚಾಯ್ತಿ ಇವೆ. ಗುರುವಾರ ಬೆಳಗ್ಗೆ ಚುನಾವಣೆಯ ದಿನಾಂಕ ಪ್ರಕಟವಾಗುತ್ತಿದ್ದಂತೆ ಎಲ್ಲೆಡೆಯೂ ಬಿಸಿ, ಬಿಸಿ ಚರ್ಚೆಗೆ ಕಾರಣವಾಗಿದೆ.
ಕಳೆದ ಡಿಸೆಂಬರ್ನಲ್ಲಿ ಪ್ರಕಟಗೊಂಡ ಮೀಸಲಾತಿಯಂತೆ ಹಲವಾರು ಆಕಾಂಕ್ಷಿಗಳು ತಮ್ಮ ತಮ್ಮ ರಾಜಕೀಯ ನೆಲೆಯೊಂದಿಗೆ ವಾರ್ಡ್ಗಳಲ್ಲಿನ ಜನರ ಮನಸ್ಸನ್ನು ಗೆಲ್ಲಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾನು ಈ ವಾರ್ಡ್ನ ಟಿಕೆಟ್ ಆಕಾಂಕ್ಷಿ ಎಂದು ಪರೋಕ್ಷವಾಗಿ ಸಾರಿಕೊಂಡಿದ್ದರು. ಆದರೆ ಇದೀಗ ಚುನಾವಣಾ ಆಯೋಗ 2007ರ ಮೀಸಲಾತಿ ಪ್ರಕಾರ ಚುನಾವಣೆ ನಡೆಸಲು ಮುಂದಾಗಿರುವುದು ಚುನಾವಣೆ ತಯಾರಿ ಮಾಡಿಕೊಂಡಿದ್ದ ನೂರಾರು ಆಕಾಂಕ್ಷಿಗಳಿಗೆ ತಣ್ಣೀರೆರಚಿದಂತಾಗಿದೆ.
ದಿಢೀರ್ ಬಿರುಸುಗೊಂಡ ರಾಜಕೀಯ
ಗುರುವಾರ ಬೆಳಗ್ಗೆ ಚುನಾವಣೆಯ ದಿನ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರ ಮನೆಗಳು ಕಾರ್ಯಕರ್ತರಿಂದ ತುಂಬಿ ಹೋಗಿದ್ದು, ಎಲ್ಲೆಡೆಯೂ ಗೌಜುಗದ್ದಲ ಉಂಟಾಗಿದೆ.
ಮೊದಲು ವಿಧಾನಸಭೆ ಚುನಾವಣೆ ಬರುತ್ತದೆ. ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ ಎನ್ನುವ ಲೆಕ್ಕಾಚಾರ ತಲೆಕೆಳಗಾದ ಹಿನ್ನೆಲೆಯಲ್ಲಿ ತೆಪ್ಪಗೆ ಕುಳಿತಿದ್ದ ಸ್ಥಳೀಯ ಸಂಸ್ಥೆ ಟಿಕೆಟ್ ಆಕಾಂಕ್ಷಿಗಳು ಮೈಮೇಲೆ ಬೆಂಕಿ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಇನ್ನು ಪ್ರಮುಖ ರಾಜಕೀಯ ನಾಯಕರೂ ಚುನಾವಣಾ ಆಯೋಗದ ನಿರ್ಧಾರದಿಂದ ತಲೆಬಿಸಿ ಮಾಡಿಕೊಂಡಿದ್ದು, ಒಮ್ಮೆಲೇ ಚುನಾವಣೆಯ ಪರ್ವ ಆರಂಭವಾಗಿದೆ.
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

