ಗದಗ

ಶುದ್ಧ ನೀರು ಪೂರೈಸಲು ಆಗ್ರಹ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 19
ಒಂದು ತಿಂಗಳಿಂದ ಶುದ್ಧ ಕುಡಿಯುವ ನೀರು ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ರೊಕ್ಕ ಬಡಿದು ಸಾಕಾಗಿ ಹೋಗಿದೆ. ಸವಳು ಹಾಗೂ ಪ್ಲೋರೈಡ್‌ಯುಕ್ತ ನೀರನ್ನು ಕುಡಿದು ನಡೆದಾಡಲೂ ಆಗದಂತಹ ಸ್ಥಿತಿ ಉಂಟಾಗಿದೆ. ಇಷ್ಟಾದರೂ ಪುರಸಭೆ ಅಧಿಕಾರಿಗಳು ಕಣ್ಣೆತ್ತಿ ನೋಡುತ್ತಿಲ್ಲ ಎಂದು ಪಟ್ಟಣದ ಹಿರೆ ಬಣದ ನಿವಾಸಿಗಳು ಮಂಗಳವಾರ ಬೆಳಗ್ಗೆ ಪುರಸಭೆಯ ಮುಂದೆ ಖಾಲಿ ಕೊಡಗಳನ್ನು ಹಿಡಿದು ಪುರಸಭೆ ಆಡಳಿತಕ್ಕೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ತಿಂಗಳಿಂದ ಪಟ್ಟಣದ ಜನತೆ ಕುಡಿಯಲು ನೀರಿಲ್ಲದೆ ಕಂಗಾಲಾಗಿದ್ದರೂ ಪುರಸಭೆ ಸಿಬ್ಬಂದಿ ಅದರ ಬಗ್ಗೆ ಚಿಂತನೆ ಮಾಡುತ್ತಿಲ್ಲ. ನೀರಿನ ಕರವನ್ನು ಮಾತ್ರ ಪ್ರತಿ ತಿಂಗಳು ತಪ್ಪದೇ ವಸೂಲಿ ಮಾಡುತ್ತಿದ್ದಾರೆ. ಆದರೆ ನೀರಿಗೆ ಮಾತ್ರ ಬರ ಎನ್ನುವಂತಾಗಿದೆ ಎಂದು ಖಾಲಿ ಕೊಡ ಹಿಡಿದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ 6ನೇ ವಾರ್ಡ್‌ನಲ್ಲಿ ವೈದ್ಯ ಬಾಬುರಾವ್ ಮನೆಯ ಹತ್ತಿರ ಒಂದೂ ಸಾರ್ವಜನಿಕ ನಳ ಜೋಡಿಸಿಲ್ಲ. ಅಲ್ಲಿನ ನಿವಾಸಿಗಳು ನೀರಿಗೆ ತೊಂದರೆ ಅನುಭವಿಸುವಂತಾಗಿದೆ. ಪುರಸಭೆಯ ಮಾಜಿ ಅಧ್ಯಕ್ಷರ ಮನೆಯ ಮುಂದೆ 2 ಸಾರ್ವಜನಿಕ ನಳಗಳನ್ನು ಜೋಡಿಸಿದ್ದಾರೆ. ಓಣಿಯಲ್ಲಿ ಬೇರೆ ನಳಗಳು ಇಲ್ಲದೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.ಪುರಸಭೆ ಮುಖ್ಯಾಧಿಕಾರಿಗಳು ನಮ್ಮ ವಾರ್ಡ್‌ಗೆ ಬಂದು ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಪುರಸಭೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಹೇಳಿದರು. ಜನತೆ ಹಠ ಹಿಡಿದಿದ್ದರಿಂದ ಅಧಿಕಾರಿಗಳು ಅನಿವಾರ್ಯವಾಗಿ ಸ್ಥಳ ಪರಿಶೀಲನೆಗೆ ತೆರಳಬೇಕಾಯಿತು.
ಪ್ರತಿಭಟನೆಯಲ್ಲಿ ಎಂ.ಆರ್. ಕುಲಕರ್ಣಿ, ಶಾರದಾ ಕಮ್ಮಾರ, ಎಸ್.ಪಿ. ಮಾಳದಕರ, ಡಿ.ಎಂ. ಕಟಗಿ, ಪ್ರಭು ಮಾಳೋದೆಕರ, ಜೆ.ಎನ್. ಹಡಪದ, ವೀಣಾ ಪೂಜಾರ, ಜಯಮ್ಮ ಕಮ್ಮಾರ, ರತ್ನವ್ವ ಸುಣಗಾರ, ಶಕುಂತಲಾ ಬಾರಕೇರ, ಶಾಂತವ್ವ ಬಾರಕೇರ, ಪಾಂಡಪ್ಪ ಕಂಡ್ರೆನವರ, ಗಂಗವ್ವ ಎಸ್., ಲಕ್ಷ್ಮವ್ವ ಕೊಂಡಿಕೊಪ್ಪ, ಎಂ.ಆರ್. ಪಾಟೀಲ, ಸಂಜೀವ ಚಾಕಲಬ್ಬಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.