ಗದಗ

ನರೇಗಲ್ಲ ಪಪಂ ಶೂನ್ಯ ಸಂಪಾದನೆ

Published On :

ನಿಂಗರಾಜ ಬೇವಿನಕಟ್ಟಿ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಫೆ. 22
ಹಲವಾರು ಗೊಂದಲಗಳ ಮೂಲಕ ಅಭಿವೃದ್ಧಿಯ ವಿಷಯದಲ್ಲಿ ನರೇಗಲ್ಲ ಪಟ್ಟಣ ಪಂಚಾಯ್ತಿ ಸಾಕಷ್ಟು ಹಿಂದೆ ಬಿದ್ದಿದ್ದು, ಇದಕ್ಕೆಲ್ಲಾ ಪಟ್ಟಣದ ಜನತೆ ಯಾರನ್ನು ದೂಷಣೆ ಮಾಡಬೇಕು ಎನ್ನುವುದೇ ತೋಚದಂತಾಗಿದೆ. ಈ ಗೊಂದಲಗಳ ಮಧ್ಯೆಯೇ ಸ್ಥಳೀಯ ಸಂಸ್ಥೆ ಚುನಾವಣೆ ರಂಗು ದಿನೇ ದಿನೇ ತೀವ್ರಗೊಳ್ಳುತ್ತಿದೆ.
ಪಟ್ಟಣದಲ್ಲಿ ಹಲವಾರು ಸಮಸ್ಯೆಗಳಿವೆ. ಬಡವರಿಗಾಗಿ ಸರ್ಕಾರ ನೀಡುವ ಆಶ್ರಯ ಮನೆಗಳ ವಿಷಯದಲ್ಲಿ ಎಷ್ಟರ ಮಟ್ಟಿಗೆ ಗೊಂದಲ ಉಂಟಾಗಿತ್ತು ಎಂದರೆ ಕೆಲ ಸಂಘಟನೆಗಳ ಹೋರಾಟಗಾರರ ಸಮಯ ಪ್ರಜ್ಞೆಯಿಂದ ಉಳ್ಳವರ ಪಾಲಾಗುತ್ತಿದ್ದ ಮನೆಗಳು ಬಡವರಿಗೆ ಲಭ್ಯವಾಗುವಂತಾಗಿದೆ. ಇನ್ನು ಕುಡಿವ ನೀರಿಗಾಗಿ ನರೇಗಲ್ಲ ಪಟ್ಟಣ ಪಂಚಾಯ್ತಿ ಕೊಳವೆಬಾವಿಗಳನ್ನೇ ನೆಚ್ಚಿಕೊಂಡಿದ್ದು, ವಿದ್ಯುತ್ ವ್ಯತ್ಯಯವಾದರೆ ನೀರಿನ ಸಮಸ್ಯೆ ಕಟ್ಟಿಟ್ಟ ಬುತ್ತಿ. ಪಟ್ಟಣದ ಹಲವಾರು ಹೊಸ ಬಡಾವಣೆಗಳಲ್ಲಿ ಚರಂಡಿ ಮತ್ತು ಉತ್ತಮ ರಸ್ತೆಗಳು ಮರೀಚಿಕೆಯಾಗಿದ್ದು, ಇಲ್ಲಿನ ಜನತೆ ದಿನವೂ ಈ ಕುರಿತು ಸಮಸ್ಯೆ ಎದುರಿಸುವಂತಾಗಿದೆ. ಘನತ್ಯಾಜ್ಯ ವಿಲೇವಾರಿ ವಿಷಯದಲ್ಲಿಯೂ ಸಾಕಷ್ಟು ಸಮಸ್ಯೆಗಳಿವೆ.
ಕೊಂಚ ನೆಮ್ಮದಿ: ಪಟ್ಟಣದಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಹಾಗೂ ಕೆಲ ಮುಖ್ಯ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇನ್ನು ಶೌಚಾಲಯಗಳ ನಿರ್ಮಾಣದ ವಿಷಯದಲ್ಲಿಯೂ ಕೆಲವೆಡೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯಾದರೂ, ಅವುಗಳ ಸ್ವಚ್ಛತೆ ಮತ್ತು ನಿರ್ವಹಣೆಯ ವಿಷಯದಲ್ಲಿ ಹಲವಾರು ಸಮಸ್ಯೆಗಳಿದ್ದು, ಈ ಬಗ್ಗೆಯೂ ಗಮನ ಹರಿಸಬೇಕಿದೆ.
ರಾಜಕೀಯ ಬೇಡ: ನರೇಗಲ್ಲ  ಶೈಕ್ಷಣಿಕವಾಗಿ ಸಾಕಷ್ಟು ಹೆಸರು ಗಳಿಸಿರುವ ಪಟ್ಟಣವಾಗಿದೆ. ಇದನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕಾದಲ್ಲಿ ಚುನಾಯಿತ ಪ್ರತಿನಿಧಿಗಳಲ್ಲಿ ರಾಜಕೀಯ ಇಚ್ಛಾಶಕ್ತಿ ಬೇಕಾಗುತ್ತದೆ. ರಾಜಕೀಯ ಎನ್ನುವುದು ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಚುನಾವಣೆಯ ನಂತರ ಅವರು ಯಾವುದೇ ಪಕ್ಷದವರಾಗಿರಲಿ. ಅವರೆಲ್ಲಾ ಇದೇ ಪಟ್ಟಣ ಪಂಚಾಯ್ತಿ ಸದಸ್ಯರಾಗುತ್ತಾರೆ. ಹಾಗಾಗಿ ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೆರೆಸದೆ ಅವರಿಗೆ ಸಾರ್ವಜನಿಕರು ನೀಡುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಮಾಡಬೇಕು ಎನ್ನುವುದು ಬಹುತೇಕ ವಾರ್ಡ್‌ಗಳಿಗೆ 'ಕನ್ನಡಪ್ರಭ' ಭೇಟಿ ನೀಡಿದ ವೇಳೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು.
ಚುನಾವಣೆ ರಂಗೇರುತ್ತಿದೆ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 11761 ಮತದಾರರಿದ್ದು, ಅವರಲ್ಲಿ 6072 ಪುರುಷರು ಹಾಗೂ 5689 ಮಹಿಳೆಯರಿದ್ದಾರೆ. ಇಲ್ಲಿ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಹುತೇಕರಿಗೆ ಪಕ್ಷಗಳು ಮತ್ತೆ ಮಣೆ ಹಾಕುವ ಸಾಧ್ಯತೆ ಇದೆ. ರಾಷ್ಟ್ರೀಯ ಪಕ್ಷಗಳೊಂದಿಗೆ ಈ ಬಾರಿ ಪ್ರಾದೇಶಿಕ ಪಕ್ಷಗಳು ಎಲ್ಲ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಚುನಾವಣೆ ರಂಗೇರುತ್ತಿದ್ದು, ಲಿಂಗಾಯಿತ ಮತ್ತು ಹಿಂದುಳಿದ ವರ್ಗಗಳ ಮತಗಳೇ ಇಲ್ಲಿ ಫಲಿತಾಂಶ ನಿರ್ಧರಿಸಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.