ಗದಗ

ಹೊಸಬರತ್ತ ನರಗುಂದ ಜನರ ಚಿತ್ತ

Published On :

 ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ, ನರಗುಂದ, ಫೆ. 22
ಸ್ಥಳೀಯ ಸಂಸ್ಥೆಗಳ ಚುನಾವಣೆ ಎಂದರೆ ಅಲ್ಲಿ ಟಿಕೆಟ್‌ಗಾಗಿ ಸಾಕಷ್ಟು ಪೈಪೋಟಿ ಇದ್ದೇ ಇರುತ್ತದೆ. ನರಗುಂದದಲ್ಲಿಯೂ ಮೇಲಾಟ ಕಂಡು ಬರುತ್ತಿದ್ದು, ಇದು ಪ್ರಮುಖ ರಾಜಕೀಯ ಪಕ್ಷಗಳ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ಅವಧಿಯಲ್ಲಿ ಪುರಸಭೆಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದರೂ ಹಿಂದಿನ ಅವಧಿಯಲ್ಲಿನ ಸದಸ್ಯರ ಇಚ್ಛಾಶಕ್ತಿಯ ಕೊರತೆಯಿಂದ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ 13, ಕಾಂಗ್ರೆಸ್ 8, ಓರ್ವ ಜೆಡಿಎಸ್, ಓರ್ವಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್‌ನ ಕೆಲ ಸದಸ್ಯರು ಬಿಜೆಪಿಗೆ ಹೋಗಿ ಅಧಿಕಾರಿ ಅನುಭವಿಸಿದ್ದು, ಈ ಬಾರಿ ಜನತೆ ಇಂಥವರಿಗೆ ತಕ್ಕ ಪಾಠ ಕಲಿಸಬೇಕೆನ್ನುವ ಆತುರದಲ್ಲಿದ್ದಾರೆ. ಬಹುತೇಕ ಹಳೆಯ ಅಭ್ಯರ್ಥಿಗಳು ಮತ್ತೆ ಸ್ಪರ್ಧಿಸಿದಲ್ಲಿ ಅವರಿಗೆ ತೀವ್ರ ಪೈಪೋಟಿ ಎದುರಾಗಲಿದೆ. ಈ ಚುನಾವಣೆಯಲ್ಲಿ ಸ್ಫರ್ಧೆ ಮಾಡಲೇಬೇಕೆಂದು ಹಲವಾರು ಯುವಕರು ಕಾದು ಕುಳಿತಿದ್ದು, ಯಾವ ಯಾವ ರಾಜಕೀಯ ಪಕ್ಷಗಳು ಯುವಕರಿಗೆ ಆದ್ಯತೆ ನೀಡುತ್ತವೆ ಎಂಬುವುದನ್ನು ಕಾದು ನೋಡಬೇಕಿದೆ.  
ಹೊಸ ಮುಖಗಳತ್ತ ಜನತೆ: ಕೆಲವು ವಾರ್ಡ್‌ಗಳಿಗೆ ಹಿಂದಿನ ಬಾರಿ ಆಯ್ಕೆಯಾದ ಅಭ್ಯರ್ಥಿಗಳೇ ಮತ್ತೆ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿದೆ. ತಮ್ಮ ವಾರ್ಡ್‌ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡದೇ ಕೇವಲ ತಮ್ಮ ಸ್ವ-ಹಿತಾಸಕ್ತಿಯನ್ನೇ ಬಯಸಿದ ಅಭ್ಯರ್ಥಿಗಳಿಗೆ ಈ ಚುನಾವಣೆಯಲ್ಲಿ ಮತದಾರರು ಸೋಲುಣಿಸುವುದು ಖಚಿತ. ಇವರ ಸ್ಥಾನದಲ್ಲಿ ಹೊಸ ಮುಖಗಳನ್ನು ಆಯ್ಕೆ ಮಾಡಬೇಕೆನ್ನುವ ಇಚ್ಛೆಯನ್ನು ಜನರು ಹೊಂದಿದ್ದಾರೆನ್ನುವುದು ವಾರ್ಡ್‌ಗಳಲ್ಲಿ ಭೇಟಿ ನೀಡಿದಾಗ ತಿಳಿದು ಬಂದಿದೆ. ಇದನ್ನು ಪಕ್ಷದ ವರಿಷ್ಠರು ಅರ್ಥ ಮಾಡಿಕೊಂಡು ಹೊಸಬರಿಗೆ ಅವಕಾಶ ನೀಡಿದಲ್ಲಿ ಅವರ ಪಕ್ಷಕ್ಕೆ ಅನುಕೂಲವಾಗಲಿದೆ. ಇಲ್ಲವಾದಲ್ಲಿ ಸೋಲು ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ.
ಹಲವಾರು ಸಮಸ್ಯೆ: ನರಗುಂದ ಪಟ್ಟಣದಲ್ಲಿಯೂ ಇಂದಿಗೂ ಹಲವಾರು ಸಮಸ್ಯೆಗಳು ಜೀವಂತವಾಗಿವೆ. ಪುರಸಭೆಯ ವ್ಯಾಪ್ತಿಯಲ್ಲಿ ಗುಡ್ಡದ ಭಾಗದಲ್ಲಿ ಅಕ್ರಮ ಮನೆಗಳ ನಿರ್ಮಾಣ ಹಾಗೂ ಅಕ್ರಮವಾಗಿ ಮಣ್ಣು ಗಣಿಗಾರಿಕೆ. ಪ್ರತಿಯೊಂದು ವಾರ್ಡ್‌ಗಳಲ್ಲಿಯೂ ರಸ್ತೆ ಸುಧಾರಣೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸುವ ಕೆಲಸವಾಗಬೇಕಿದೆ. ಅತಿಯಾದ ಮಳೆಯಾದಲ್ಲಿ ಅಂತರ್ಜಲ ಹೆಚ್ಚಾಗಿ ಮನೆಗಳು ಕುಸಿಯುವ ಸಾಧ್ಯತೆ ಇದ್ದು, ಈ ಕುರಿತು ಪುರಸಭೆ ಇಂದಿಗೂ ಶಾಶ್ವತ ಯೋಜನೆ ರೂಪಿಸಿಲ್ಲ. ನರಗುಂದ ಪಟ್ಟಣದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ವರ್ಷದಲ್ಲಿ ನೂರಾರು ಜನರು ರಸ್ತೆ ದಾಟುವ ವೇಳೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಪಟ್ಟಣ ಪ್ರಾರಂಭದಿಂದ ಅಂತ್ಯಗೊಳ್ಳುವವರೆಗೂ ರಸ್ತೆಯ ಇಕ್ಕೆಲಗಳನ್ನು ಅಭಿವೃದ್ಧಿ ಪಡಿಸಿ, ಸಾರ್ವಜನಿಕರಿಗೆ ಪುಟ್‌ಪಾತ್ ನಿರ್ಮಿಸುವ ಕಾರ್ಯವಾಗಬೇಕಿದೆ. ಬಸ್ ನಿಲ್ದಾಣದ ಸಮೀಪದಲ್ಲಿ ಸೂಕ್ತ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಲ್ಲಿ ಹಾಗೂ ಪಟ್ಟಣದ ಸ್ವಚ್ಛತೆಯ ದೃಷ್ಟಿಯಿಂದಲೂ ಪುರಸಭೆ ಸಂಪೂರ್ಣ ವಿಫಲವಾಗಿದೆ.
ಕೊಂಚ ನೆಮ್ಮದಿ: ಪಟ್ಟಣದ ಪ್ರಮುಖ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶಾಸಕ ಸಿ.ಸಿ. ಪಾಟೀಲ್ ಅವರು ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ದಿ ಅನುದಾನ ಬಿಡುಗಡೆಗೊಳಿಸುವಲ್ಲಿ ಶ್ರಮಿಸಿದ್ದರಿಂದ ಪಟ್ಟಣದ ಕೆಲ ರಸ್ತೆಗಳು ಅಭಿವೃದ್ಧಿಯಾಗಿದ್ದು ಸಾರ್ವಜನಿಕರಲ್ಲಿ ಅಲ್ಪ ಮಟ್ಟಿನ ನೆಮ್ಮದಿ ಮೂಡಿಸಿದೆ. ಇನ್ನು ಮಾರುಕಟ್ಟೆಯ ಭಾಗದಲ್ಲಿನ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡಲು, ವಾರ್ಡ್‌ಗಳಲ್ಲಿ ಒಳ ರಸ್ತೆಗಳ ಅಭಿವೃದ್ಧಿಗೂ ಗಮನ ನೀಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.