ಬಡವರಿಗೆ ದೊರೆಯದ ನಿವೇಶನ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಜ. 24
ಸರ್ಕಾರ ವಿವಿಧ ಯೋಜನೆಗಳಲ್ಲಿ ಸಾವಿರಾರು ನಿವೇಶನಗಳನ್ನು ಬಡವರಿಗೆ ನೀಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಿದೆ. ಆದರೆ, ಯೋಜನೆಯ ಲಾಭ ಮಾತ್ರ ಬಡವರಿಗೆ, ನಿರ್ಗತಿಕರಿಗೆ ದೊರಕದೇ ಅನರ್ಹರ ಪಾಲಾಗುತ್ತಿರುವುದು ಹೆಚ್ಚುತ್ತಿದ್ದರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.
ಸೂಕ್ತ ಫಲಾನುಭವಿಗಳನ್ನು ಗುರುತಿಸಿ ನಿವೇಶನ ನೀಡದೇ, ಇದಕ್ಕೆ ತದ್ವಿರುದ್ಧವೆಂಬಂತೆ ಬಡವರನ್ನು ಹೊರತು ಪಡಿಸಿ, ಪ್ರಮುಖ ವ್ಯಕ್ತಿಗಳಿಗೆ, ಅನರ್ಹರಿಗೆ ನಿವೇಶನಗಳನ್ನು ಸರ್ಕಾರ ಮಂಜೂರು ಮಾಡಿದೆ ಎನ್ನುವ ಆರೋಪ ಬಲವಾಗಿ ಕೇಳಿಬರುತ್ತಿದೆ.
ವಾಜಪೇಯಿ ವಸತಿ ಯೋಜನೆ: ಜಿಲ್ಲೆಯ ರೋಣ ತಾಲೂಕಿನ ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಡ ನಿವಾಸಿಗಳಿಗಾಗಿ ಸರ್ಕಾರ 2011-12ನೇ ಸಾಲಿನಲ್ಲಿ ವಾಜಪೇಯಿ ವಸತಿ ಯೋಜನೆಯಡಿ ನಿವೇಶನ ನೀಡಲು ನಿರ್ಧರಿಸಿತ್ತು. ಇದಕ್ಕಾಗಿ ಪಟ್ಟಣದಿಂದ ದ್ಯಾಂಪುರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ 40 ಎಕರೆ ಜಮೀನು ಖರೀದಿಸಿ ನಿವೇಶನ ಸಿದ್ಧತೆ ಮಾಡಿಕೊಂಡಿದ್ದರು. ನಿವೇಶನಕ್ಕಾಗಿ ಅದೇ ವರ್ಷದಲ್ಲಿ 1750ಕ್ಕೂ ಹೆಚ್ಚು ಜನರು ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.
ಪಟ್ಟಿ ಅಂತಿಮ: ಸಾರ್ವಜನಿಕರು ನಿವೇಶನ ನೀಡುವಂತೆ ಸಲ್ಲಿಸಿದ ಮನವಿಗಳನ್ನು ಪರಿಗಣಿಸಿ ಸ್ಥಳೀಯ ಆಶ್ರಯ ಕಮಿಟಿಯ ಅಧ್ಯಕ್ಷತೆಯಲ್ಲಿ ಸಭೆ ಸೇರಿ, ನಿವೇಶನ ಮಂಜೂರು ಮಾಡಿ, ರಾಜೀವಗಾಂಧಿ ವಸತಿ ನಿಗಮಕ್ಕೆ ವರದಿ ಸಲ್ಲಿಸಿದ್ದಾರೆ.
ಈ ವರದಿಯನ್ನು ಆಧರಿಸಿಯೇ ನಿಗಮವು 1246 ಜನರಿಗೆ ನಿವೇಶನ ಮಂಜೂರಾತಿ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆದರೆ, ಈ ಪಟ್ಟಿಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ನಿವೇಶನ ದೊರೆಯದ ಬಡವರು ಹೋರಾಟದ ಹಾದಿ ಹಿಡಿದಿದ್ದಾರೆ.
ಉಳ್ಳವರಿಗೆ ಆದ್ಯತೆ: ಸದ್ಯ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಬಡವರಿಗಾಗಿ ನೀಡಬೇಕಾಗಿದ್ದ ನಿವೇಶನದಲ್ಲಿ 124ಕ್ಕೂ ಅಧಿಕ ನಿವೇಶನಗಳು ಉಳ್ಳವರ ಪಾಲಾಗಿವೆ ಎನ್ನುವ ಸತ್ಯವು ಪಟ್ಟಿಯನ್ನು ಗಮನಿಸಿದ ಪ್ರತಿಯೊಬ್ಬರಿಗೂ ತಿಳಿಯುತ್ತದೆ.
ಒಂದು ಕುಟುಂಬದ 6 ಜನರಿಗೆ, ಸರ್ಕಾರಿ ನೌಕರಿ ಹೊಂದಿದವರಿಗೆ, ಸರ್ಕಾರದ ನಿಗದಿಗಿಂತಲೂ ಹೆಚ್ಚಿನ ಆದಾಯ ಹೊಂದಿದ (ಪ್ರಮುಖ ರಾಜಕೀಯ ಪಕ್ಷದ ಹಿಂಬಾಲಕರಿಗೆ) 112 ಕುಟುಂಬಗಳಿಗೆ ಅಂತಿಮಗೊಂಡಿರುವ ಪಟ್ಟಿಯಲ್ಲಿ ನಿವೇಶನವನ್ನು ನೀಡಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪದೇ ಪದೇ ಪಟ್ಟಿ ರದ್ದು: ಪಟ್ಟಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂದು ಸಾರ್ವಜನಿಕರು ಹೋರಾಟದ ಹಾದಿ ಹಿಡಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಪಟ್ಟಣ ಪಂಚಾಯಿತಿ ಸಿಬ್ಬಂದಿ, ರಾಜೀವಗಾಂಧಿ ವಸತಿ ನಿಗಮದಿಂದ ಮಂಜೂರಾಗಿ ಬಂದ ಪಟ್ಟಿಯನ್ನೇ ಈಗಾಗಲೇ 2 ಬಾರಿ ಪರಿಷ್ಕರಿಸಿದ್ದು, 1246 ಕುಟುಂಬಗಳ ಪಟ್ಟಿಯಲ್ಲೀಗ ಉಳಿದಿರುವುದು 897 ಹೆಸರುಗಳು ಮಾತ್ರ. ಅರ್ಹರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಈಗಾಗಲೇ ಕೆಲ ಸಂಘಟನೆಗಳು, ಸಾರ್ವಜನಿಕರು ಹೋರಾಟ ನಡೆಸಿದ ಫಲವಾಗಿ 349 ಹೆಸರುಗಳು ಹೊಸದಾಗಿ ಸಿದ್ಧಪಡಿಸಿರುವ ಪಟ್ಟಿಯಿಂದ ಕಾಣೆಯಾಗಿದ್ದು, ಇದನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಪಟ್ಟಿ ಸಿದ್ಧಪಡಿಸುವ ವೇಳೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎನ್ನುವುದು ಸ್ಪಷ್ಟ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

