ಸಮುದಾಯ ಭವನವೀಗ ಕೊಟ್ಟಿಗೆ
ಎಸ್.ಜಿ. ತೆಗ್ಗಿನಮನಿ
ನರಗುಂದ: ಪಟ್ಟಣದ ಗಾಡಿ ಓಣಿಯ ಮಾರುತೇಶ್ವರ ದೇವಸ್ಥಾನದ ಪಕ್ಕದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಸಮುದಾಯ ಭವನ ಕಾಮಗಾರಿ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಕೊಟ್ಟಿಗೆಯಾಗಿದೆ.
ಕಾರ್ಯಕ್ರಮ ಸೇರಿದಂತೆ ಇತರೇ ಸಮಾಜದ ಕಾರ್ಯ ಮಾಡಲು ಅನುಕೂಲವಾಗುವ ದೃಷಿಯಿಂದ 2006-07ನೇ ಸಾಲಿನಲ್ಲಿ ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ ಅನುದಾನದಲ್ಲಿ ಮಾರುತೇಶ್ವರ ಸಮುದಾಯ ಭವನಕ್ಕೆ ರು. 2 ಲಕ್ಷ ಬಿಡುಗಡೆ ಮಾಡಿದ್ದರು.
ರು. 2 ಲಕ್ಷ ಕಾಮಗಾರಿಯಾದ ನಂತರ ಮುಂದೆ ಕಾಮಗಾರಿಗೆ ಹೆಚ್ಚಿನ ಹಣ ಬರದೇ ಇರುವುದರಿಂದ ಈ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಆದರೆ ಇದೀಗ ಇದು ಸಂಪೂರ್ಣವಾಗಿ ಹಾಳಾಗಿದೆ. ಕಟ್ಟಡ ಅರ್ಧಕ್ಕೆ ನಿಂತು 5 ವರ್ಷವಾದರೂ ಕೂಡ ಸಂಬಂಧಪಟ್ಟ ಜನಪ್ರತಿನಿಧಿಗಳು ತಾವು ಕೊಟ್ಟಂತಹ ಅನುದಾನದಲ್ಲಿ ಎಷ್ಟು ಕಾಮಗಾರಿ ಪೂರ್ಣಗೊಂಡಿದೆಯೋ ಇಲ್ಲವೋ ಎಂಬುದನ್ನು ಒಮ್ಮೆಯಾದರೂ ನೋಡಿಲ್ಲ ಎಂಬುದು ಆರೋಪವಾಗಿದೆ.
ಸಮುದಾಯ ಭವನದ ಜಾಗೆಯಲ್ಲಿ ಗಿಡ-ಮುಳ್ಳು-ಕಂಟಿಗಳು ಬೆಳೆದಿದ್ದು, ಸುಂದರವಾದ ಸಮುದಾಯ ಭವನವಾಗಿ ಸಾರ್ವಜನಿಕರಿಗಾಗಿ ಉಪಯೋಗವಾಗಬೇಕಿದ್ದ ಸ್ಥಳ ಇಂದು ಸಂಪೂರ್ಣವಾಗಿ ದುರಸ್ತಿಕೊಂಡು ಕ್ರಿಮಿಕೀಟ, ವಿಷಜಂತುಗಳ, ಹಂದಿಗಳ ತಾಣವಾಗಿ ಪರಿಣಮಿಸಿದೆ. ಸಮುದಾಯ ಭವನದ ಅಲ್ಪ ಜಾಗೆಯಲ್ಲಿ ಎಮ್ಮೆ, ಆಕಳು, ಎತ್ತು, ಆಡುಗಳನ್ನು ಕಟ್ಟುವ ಸ್ಥಿತಿ ನಿರ್ಮಾಣವಾದರೂ ಯಾರೂ ಇತ್ತ ನೋಡುತ್ತಿಲ್ಲ.
ಕ್ಷೇತ್ರಕ್ಕೆ ಬಾರದ ಸಂಸದರು
ಮೊದಲು ಈ ಕ್ಷೇತ್ರವು ಧಾರವಾಡ ಸಂಸದರ ವ್ಯಾಪ್ತಿಗೆ ಅನ್ವಯಿಸುತ್ತಿತ್ತು. ಆದರೆ ಹಿಂದಿನ ಚುನಾವಣೆಯಿಂದ ಈ ಕ್ಷೇತ್ರವನ್ನು ಜನಸಂಖ್ಯೆ ಆಧಾರದ ಮೇಲೆ ಬಾಗಲಕೋಟೆ ಕ್ಷೇತ್ರವ್ಯಾಪ್ತಿಗೆ ಸೇರಿಸಲಾಗಿದೆ. ಪಿ.ಸಿ. ಗದ್ದಿಗೌಡರ ಆಯ್ಕೆ ಆದಾಗಿನಿಂದ ಕ್ಷೇತ್ರಕ್ಕೆ ಬಂದದ್ದು ಅಪರೂಪ.
ಈ ಭಾಗದ ಮುಖಂಡರು ಭೇಟಿಯಾಗಿ ತಾವುಗಳು ನರಗುಂದ ಕ್ಷೇತ್ರಕ್ಕೆ ಬರಬೇಕೆಂದು ಹಲವು ಬಾರಿ ಮನವಿ ಮಾಡಿದ ಸಂದರ್ಭದಲ್ಲಿ ಸಂಸದರು ನಾಳೆ ಬರುತ್ತೇನೆ, ನಾಡಿದ್ದು ಬರುತ್ತೇನೆ ಎಂಬ ಹಾರಿಕೆ ಉತ್ತರ ನೀಡುತ್ತಾರೆ ಎಂಬುದು ಈ ಭಾಗದ ಜನರ ಅಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

