ಗದಗ

ಜೆಡಿಎಸ್ ರೈತ, ಬಡವರ ಪರ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 1
ಜೆಡಿಎಸ್ ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ, ರೈತರ ಪರವಾದ ಪಕ್ಷವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಮುಂಡರಗಿ ಪುರಸಭೆ ಚುನಾವಣೆ ನಿಮಿತ್ತ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಹಾಗೂ ಈ ಹಿಂದೆ ಅಧಿಕಾರ ನಡೆಸಿದಂತಹ ಕಾಂಗ್ರೆಸ್ ಪಕ್ಷಗಳಿಂದ ರೈತರ ಹಾಗೂ ಹಿಂದುಳಿದವರ ಪರವಾದ ಯಾವುದೇ ಯೋಜನೆಗಳು ಜಾರಿಯಾಗುವುದಿಲ್ಲ. ಅವರಿಗೆ ಜನಪರ ಕಾಳಜಿ ಇಲ್ಲವೆಂದು ದೂರಿದರು.
ಮಾ. 7ರಂದು ರಾಜ್ಯಾದ್ಯಂತ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚು ಆಯ್ಕೆಯಾಗಲಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಮತದಾರರು ಜೆಡಿಎಸ್‌ಗೆ ಆಶೀರ್ವದಿಸಲಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಅವಕಾಶ ಮಾಡಿಕೊಡಲಿದ್ದಾರೆ ಎಂದರು. ಕೇವಲ 20 ತಿಂಗಳ ಅಧಿಕಾರದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸುಮಾರು 9 ಲಕ್ಷ ವಿಧವಾ, ವೃದ್ಧಾಪ್ಯ ಹಾಗೂ ಅಂಗವಿಕಲ ವೇತನಗಳು ನಿಂತು ಹೋಗಿವೆ.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ 48 ಗಂಟೆಯಲ್ಲಿ ವೃದ್ಧಾಪ್ಯ ವೇತನವನ್ನು ಈಗಿರುವ ರು. 400 ರ ಬದಲಾಗಿ 1500ಕ್ಕೆ ಅಂಗವಿಕಲರ ವೇತವನ್ನು 2500ಕ್ಕೆ ಹೆಚ್ಚಿಸಲಾಗುವುದು. ಮದುವೆಯಾಗದ ಹೆಣ್ಣು ಮಕ್ಕಳಿಗೆ ತಿಂಗಳಿಗೆ ರು. 1500 ಹಾಗೂ 1 ಹಾಗೂ 2ನೇ ಹೆರಿಗೆಯ ಗರ್ಭಿಣಿಯರಿಗೆ 5ನೇ ತಿಂಗಳಿನಿಂದ 12 ನೇ ತಿಂಗಳವರೆಗೆ ಪ್ರತಿ ತಿಂಗಳು ಪೌಷ್ಟಿಕ ಆಹಾರಕ್ಕಾಗಿ ರು. 5 ಸಾವಿರ, ರೈತರಿಗೆ ಸಿಗುವ ಗೊಬ್ಬರದ ಬೆಲೆಯಲ್ಲಿ ಸಾಕಷ್ಟು ಕಡಿಮೆಗೊಳಿಸಿ ವಿತರಿಸುವ ಯೋಜನೆ ಮತ್ತು ನಿರುದ್ಯೋಗಿ ಯುವಕರಿಗೆ ರು. 8 ರಿಂದ 10 ಸಾವಿರಗಳ ಯೋಜನೆಯನ್ನು ತಯಾರಿಸಿ ಅವರ ಆರ್ಥಿಕ ಭದ್ರತೆಗೆ ನೆರವು ಕಲ್ಪಿಸಲಾಗುವುದು. ಹಾಗೂ ರಾಜ್ಯದ ಎಲ್ಲ ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕ್‌ಗಳಲ್ಲಿ ಹಾಗೂ ಟ್ರ್ಯಾಕ್ಟರ್‌ಗಳ ಮೇಲಿನ ಅಂದಾಜು ರು. 1950 ಸಾವಿರ ಕೋಟಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಭರವಸೆ ನೀಡಿದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ವಹಿಸಿದ್ದರು. ದೇವಪ್ಪ ರಾಮೇನಹಳ್ಳಿ, ಬಸವಂತಪ್ಪ ಮುದ್ದಿ, ಶಿವಾನಂದ ಇಟಗಿ, ಅಂದಪ್ಪ ಅಳವಂಡಿ ಮುಂತಾದವರು ಜೆಡಿಎಸ್‌ಗೆ ಸೇರ್ಪಡೆಗೊಂಡರು. ಜಿಲ್ಲಾ ಮುಖಂಡ ರವಿ ದಂಡಿನ, ರೋಣ ವಿಧಾನಸಭಾ ಮತಕ್ಷೇತ್ರದ ನಿಯೋಜಿತ ಜೆಡಿಎಸ್ ಅಭ್ಯರ್ಥಿ ಹೇಮಗಿರೀಶ ಹಾವಿನಾಳ, ಹಿರಿಯ ಮುಖಂಡ ಬಿ.ಎಸ್. ಹಿರೇಗೌಡ್ರ, ಟಿ.ಎಲ್. ನಾಯಕ, ತಾಲೂಕು ಅಧ್ಯಕ್ಷ ಎಂ.ಜಿ. ವಡ್ಡಟ್ಟಿ, ಮಾರುತಿ ಹೊಸಮನಿ, ಉಮೇಶ ಹಿರೇಗೌಡ್ರ, ಅಂದಪ್ಪ ಅಕ್ಕಿ, ಮಾರುತಿ ಕವಲೂರ, ದೇವಪ್ಪ ಇಟಗಿ, ಶಿವನಗೌಡ ಗೌಡ್ರ, ಡಿ.ಎಂ. ಕಾತರಕಿ, ಬಸವರಾಜ ನರೇಗಲ್ಲ, ಪುರಸಭೆ 23 ವಾರ್ಡ್‌ಗಳ ಅಭ್ಯರ್ಥಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.