ಗದಗ

21ರಿಂದ ಮೂರಕ್ಕೆ ಇಳಿದ ಬಿಜೆಪಿ, ನಗರಸಭೆ ಆಡಳಿತ ಯಾರಿಗೆ?

Published On :

ರಾಣಿಬೆನ್ನೂರು: ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾಸ್ ಲೀಡರ್ ಅಲ್ರೀ... ಇಲ್ಲಾಂದ್ರ ಒಬ್ಬ ಮುಖ್ಯಮಂತ್ರಿ ರೋಡ್ ಶೋ ನಡಿಸಿದ್ರ ಅಲ್ಲೆ ಅವ್ರ ಪಕ್ಷದ್ ಸೀಟ್ 31ಕ್ಕ ಬರೇ 3 ಅಂದ್ರೇನು? ರಾಣಿಬೆನ್ನೂರು ನಗರಸಭೆ ಫಲಿತಾಂಶದ ಬಳಿಕ ಜನರಿಂದ ಬಂದ ಪ್ರತಿಕ್ರಿಯೆ ಇದು. ಕಳೆದ ಅವಧಿಯಲ್ಲಿ 21 ಸ್ಥಾನ ಗೆದ್ದು ನಿಚ್ಚಳ ಬಹುಮತದೊಂದಿಗೆ ಅಧಿಕಾರ ನಡೆಸಿದ ಬಿಜೆಪಿ ಈ ಬಾರಿ ಕೆಜೆಪಿಗೆ ಶರಣಾಗಿದೆ. ಸ್ಥಳೀಯ ಸಂಸ್ಥೆ ಫಲಿತಾಂಶ ಬಿಜೆಪಿಗೆ ದೊಡ್ಡ ಆಘಾತ ನೀಡಿದೆ. ಅಧಿಕಾರದಲ್ಲಿದ್ದ ಪಕ್ಷ ಒಮ್ಮೆಲೇ ಹೀಗೆ ನೆಲಕಚ್ಚಿದ್ದೇಕೆ ಎಂಬುದೇ ದೊಡ್ಡ ರಹಸ್ಯವಾಗಿದೆ. ಬಿಜೆಪಿ ಜನಪ್ರತಿನಿಧಿಗಳು ಕೈಗೊಂಡ ಜನವಿರೋಧಿ ನೀತಿ, ಠರಾವುಗಳು, ಸ್ವಜನಪಕ್ಷಪಾತ ಕೇಸರಿ ಪಡೆಗೆ ಮುಳುವಾಯಿತು. ಶಾಸಕ ಜಿ. ಶಿವಣ್ಣ ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಕೊನೆ ಕ್ಷಣದಲ್ಲಿ ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದು ಹಾಗೂ ಜಿಲ್ಲೆಯಲ್ಲಿ ಬಿಎಸ್‌ವೈ ಪರವಾದ ಅಲೆ ಬಿಜೆಪಿಗೆ ಮಗ್ಗುಲು ಮುಳ್ಳಾಯಿತು. ಜಿಲ್ಲೆಯಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಕಟ್ಟಿ ಬೆಳೆಸಿದ ದೊಡ್ಡ ವಲಸಿಗ ಕುಳಗಳೆಲ್ಲ ಪಕ್ಷ ತೊರೆದಿದ್ದು ಮತ್ತೆ ಬಿಜೆಪಿ ಪ್ರಪಾತಕ್ಕೆ ಬೀಳಲು ಕಾರಣವಾಗಿದೆ. ವಲಸಿಗರಾಗಿ ಬಂದು ಅಧಿಕಾರ ಅನುಭವಿಸಿ ಮತ್ತೆ ವಲಸೆ ಹೋಗುವ ಮೂಲಕ ಪಕ್ಷವನ್ನು ಹಾಳು ಮಾಡಿದರೆಂದು ಆರೋಪಿಸಿದ ಮೂಲ ಬಿಜೆಪಿಗರು ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಳ್ಳಲೇ ಇಲ್ಲ. ಹೀಗಾಗಿ, ಬಿಜೆಪಿಯಲ್ಲಿ ಯಾರೂ ಮುಖಂಡರೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಯಿತು. ಇದೂ ಬಿಜೆಪಿ ಸೋಲಿಗೆ ಕಾರಣವಾಯಿತು ಎನ್ನಲು ಅಡ್ಡಿ ಇಲ್ಲ. ರಾಣಿಬೆನ್ನೂರು ನಗರಸಭೆಯ ಫಲಿತಾಂಶ ಪ್ರಕಟವಾಗಿದ್ದು, 31 ಸ್ಥಾನಗಳ ಪೈಕಿ ಕಾಂಗ್ರೆಸ್ 13, ಕೆಜೆಪಿ 9 ಸ್ಥಾನ ಗಳಿಸಿವೆ. ಆರು ಪಕ್ಷೇತರರೇ ನಿರ್ಣಾಯಕರಾಗಿದ್ದು, ಮ್ಯಾಜಿಕ್ ಸಂಖ್ಯೆ 16ನ್ನು ಪಡೆಯಲು ಯಾರಿಗೆ ನೆರವಾಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಪಕ್ಷೇತರರ ಬೆಂಬಲ ಪಡೆಯವುದು ಕಾಂಗ್ರೆಸ್‌ಗೆ ಬಿಸಿ ತುಪ್ಪದಂತಾಗಿದೆ. ಒಂದೊಮ್ಮೆ ಪಕ್ಷೇತರರ ಬೆಂಬಲ ಪಡೆದರೆ ಕಾಂಗ್ರೆಸ್ ಬಿಬಿಎಂಪಿ ಮಾಜಿ ಉಪಮೇಯರ್ ಆರ್. ಶಂಕರ್ ಅವರ ನಿಯಂತ್ರಣಕ್ಕೆ ಸಿಲುಕಬೇಕಾಗುತ್ತದೆ. ಇನ್ನೊಂದು ದಾರಿ ಎಂದರೆ, ಮೂರು ಸ್ಥಾನಗಳಿರುವ ಬಿಜೆಪಿಯ ಬೆಂಬಲ ಗಳಿಸುವುದು. ಬಿಜೆಪಿಯ ಬಾಹ್ಯ ಬೆಂಬಲ ಪಡೆದು ಕಾಂಗ್ರೆಸ್ ಆಡಳಿತ ನಡೆಸಿದರೂ ಅಚ್ಚರಿ ಇಲ್ಲ.
ಒಟ್ಟಿನಲ್ಲಿ ರಾಣಿಬೆನ್ನೂರು ನಗರಸಭೆಯಲ್ಲಿ ಅಧಿಕಾರ ಹಿಡಿಯಬೇಕಾದರೆ ಕಾಂಗ್ರೆಸ್ ಒಂದೋ ಹೊಂದಾಣಿಕೆ ಮಾಡಿಕೊಳ್ಳಬೇಕು, ಇಲ್ಲವೇ ತ್ಯಾಗ ಮಾಡಬೇಕು. ಇದನ್ನು ಹೊರತುಪಡಿಸಿ ಬೇರೆ ಪಕ್ಷಗಳಿಗೆ ಬಹುಮತ ಕಷ್ಟಸಾಧ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.