ಗದಗ

ಧರ್ಮ ಕಲುಷಿತವಾಗದಿರಲಿ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮಾ. 14
ಮನುಷ್ಯನ ಉಜ್ವಲ ಭವಿಷ್ಯಕ್ಕೆ ಧರ್ಮ, ಸಂಸ್ಕೃತಿ ಅಡಿಪಾಯ.
ಜಗತ್ತಿನ ಎಲ್ಲ ಧರ್ಮಗಳು ಸಾಮರಸ್ಯ, ಶಾಂತಿ ಬೆಳೆಸುವ ಉದ್ದೇಶ ಹೊಂದಿವೆ. ಜಾತಿ ಹೆಸರಲ್ಲಿ ಧರ್ಮ, ಸಂಸ್ಕೃತಿ ಕಲುಷಿತವಾಗದಿರಲಿ ಎಂದು ಬಾಳೆಹೊನ್ನೂರು ರಂಭಾಪುರಿಯ ಜ. ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು          ಹೇಳಿದರು.
ಈಚೆಗೆ ಅವರು ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಅಯೋಜಿಸಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವೀರಶೈವ ಧರ್ಮ ದೂರದೃಷ್ಟಿ, ವೈಶಾಲ್ಯ ಮನೋಭಾವ ಪ್ರತಿಪಾದಿಸಿ ಮುನ್ನಡೆದಾಗಲೂ ಆಯಾ ಕಾಲಘಟ್ಟಗಳಲ್ಲಿ ಕೆಲವು ಸ್ವಾರ್ಥ ಸಾಧಕರು ಈ ಧರ್ಮ ಸಂಸ್ಕೃತಿಗೆ ಅಪಚಾರ ಮಾಡುತ್ತಲೇ ಬಂದಿದ್ದಾರೆ.
ಯಾರು ಏನೇ ಮಾಡಿದರೂ ತನ್ನ ಮೂಲ ಸತ್ವವನ್ನು ಕಳೆದುಕೊಂಡಿರುವುದಿಲ್ಲ. ದಶಧರ್ಮ ಸೂತ್ರ ಬೋಧಿಸಿದ ಜ. ರೇಣುಕಾಚಾರ್ಯರ ಒಂದೊಂದು ಸೂತ್ರ ಆಧರಿಸಿ, ಒಂದೊಂದು ಧರ್ಮ ಬೆಳೆದು ಬಂದಿದ್ದನ್ನು ಕಾಣಬಹುದು. ಜೈನರ ಅಹಿಂಸೆ, ಬೌದ್ಧರ ಸಮತೆ, ಕ್ರೈಸ್ತರ ಕರುಣೆ, ಮುಸ್ಲಿಮರ ನಿಷ್ಠೆ, ಆರ್ಯರ ಜ್ಞಾನ ಮತ್ತು ದ್ರಾವಿಡರ ಭಕ್ತಿ ಎಲ್ಲವೂ ಈ ಧರ್ಮದಲ್ಲಿ ಅಡಕವಾಗಿರುವುದು ವೀರಶೈವ ಧರ್ಮದ ಸಮಗ್ರತೆಗೆ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಮುಕ್ತಿಮಂದಿರ ಕ್ಷೇತ್ರ ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಮುಕ್ತಿಮಂದಿರ ಕ್ಷೇತ್ರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯರು ಹಾಗೂ ಅಧ್ಯಕ್ಷತೆ ವಹಿಸಿದ್ದ ಕಲಾದಗಿಯ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿದರು. ಈ ಸಂದರ್ಭದಲ್ಲಿ ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು, ಬಿಲ್‌ಕೆರೂರು ಸಿದ್ಧಲಿಂಗ ಶಿವಾಚಾರ್ಯರು ಮತ್ತು ಲಕ್ಷ್ಮೇಶ್ವರದ ಕೆರೆವಾಡಿ ಮಠದ ಶ್ರೀಗಳು ಪಾಲ್ಗೊಂಡಿದ್ದರು.
ಗದಿಗೆಯ್ಯ ಹಿರೇಮಠ, ಗಂಗಾಧರ ಪ್ರಾರ್ಥಿಸಿದರು. ಸಾಂಬಯ್ಯ ಹಿರೇಮಠ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.