ಶುರುವಾಯಿತು ನೀರಿಗೆ ಬರ
-ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 15
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಗದಗ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಮಾರ್ಚ್ 2ನೇ ವಾರದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಏಪ್ರಿಲ್ ಮೊದಲ ವಾರದೊಳಗಾಗಿ ಈ ಸಮಸ್ಯೆ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಮಾತ್ರ ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆಯೇ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ. ಗದಗ-ಬೆಟಗೇರಿ ಅವಳಿ ನಗರ ನೀರಿಗಾಗಿ ತುಂಗಭದ್ರಾ ನದಿಯನ್ನೇ ಅವಲಂಬಿಸಿದೆ. ಆದರೆ, ಈಚೆಗೆ ಹಾವೇರಿ ಜಿಲ್ಲೆಯ ಮೈಲಾರ ದೇವರ ಜಾತ್ರೆಯ ಅಂಗವಾಗಿ ಭದ್ರಾ ಡ್ಯಾಂನಿಂದ ಬಿಟ್ಟಿರುವ ನೀರು ಕೇವಲ ಒಂದು ವಾರದಲ್ಲಿ ಮುಗಿಯಲಿದ್ದು, ಮತ್ತೆ ಭದ್ರಾ ಡ್ಯಾಂನಿಂದ ನೀರು ಬಿಡುವ ಸಾಧ್ಯತೆ ಕಡಿಮೆ. ಇನ್ನು ಅವಳಿ ನಗರದಲ್ಲಿನ 354 ಕೊಳವೆ ಬಾವಿಗಳಲ್ಲಿ 50ಕ್ಕೂ ಹೆಚ್ಚು ಕೊಳವೆ ಬಾವಿಗಳು ಫ್ಲಶಿಂಗ್‌ಗಾಗಿ ಕಾಯುತ್ತಿವೆ. ನದಿಯಲ್ಲಿನ ನೀರು ಮುಗಿದು ಹೋದಲ್ಲಿ ಅವಳಿ ನಗರದಲ್ಲಿ ಹನಿ ನಿರೀಗೂ ಪರದಾಡಬೇಕಾಗುತ್ತದೆ.
ಹಲವೆಡೆ ಸಮಸ್ಯೆ: ಗದಗ ತಾಲೂಕಿನ ಶಿರುಂಜಾ, ಕಳಸಾಪುರ, ನಾಗವಿ, ಬೆಳದಡಿ ಗ್ರಾಮಗಳಲ್ಲಿ ಸದ್ಯ ನೀರಿನ ಕೊರತೆ ಕಂಡು ಬರುತ್ತಿದ್ದು, ಕೊಳವೆಬಾವಿಗಳ ಮೂಲಕ ಈ ಎಲ್ಲ ಗ್ರಾಮಗಳಿಗೂ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, 17ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಕೊಳವೆ ಬಾವಿಗಳಲ್ಲಿಯೂ ಅಂತರ್ ಜಲ ಕುಸಿತದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಹೊಸ ಕೊಳವೆ ಬಾವಿಗಳನ್ನು ಕೊರೆಯಿಸಲು ಸರ್ಕಾರ ಅನುದಾನ ನೀಡುತ್ತಿದೆಯಾದರೂ ನೀರಿರುವ ಬೋರ್‌ವೆಲ್ ಪಾಯಿಂಟ್‌ಗಳೇ ಲಭ್ಯವಾಗುತ್ತಿಲ್ಲ.
ಮೂರು ಸಮಸ್ಯೆ ಒಟ್ಟಿಗೆ: ಈ ಬಾರಿಯ ಬೇಸಿಗೆಗೆ ಮೂರು ಸಮಸ್ಯೆಗಳು ಒಟ್ಟಿಗೆ ಎದುರಾಗಿವೆ. ಮೊದಲನೆಯದಾಗಿ ಅಂತರ್ಜಲ ಕೊರತೆ. ಇದರಿಂದಾಗಿ ಕೊಳವೆ ಬಾವಿಗಳು ಬತ್ತುತ್ತಿವೆ. ಎರಡನೆಯದಾಗಿ ತೀವ್ರ ವಿದ್ಯುತ್ ಕ್ಷಾಮ ಇದರಿಂದಾಗಿ ಕೆಲವೆಡೆ ಕೊಳವೆ ಬಾವಿಗಳಲ್ಲಿ ನೀರಿದ್ದರೂ ಅದನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಮೂರನೆಯದಾಗಿ ಕೆರೆಗಳು ಖಾಲಿಯಾಗಿರುವುದು. ಕಳೆದೆರಡು ವರ್ಷಗಳಿಂದ ಗದಗ ಜಿಲ್ಲೆ ತೀವ್ರ ಮಳೆ ಕೊರತೆ ಎದುರಿಸುತ್ತಿದ್ದು ಯಾವೊಂದು ಕೆರೆಯಲ್ಲಿಯೂ ಹನಿ ನೀರಿಲ್ಲ. ಈ ಮೂರು ಸಮಸ್ಯೆಗಳು ಪ್ರಸಕ್ತ ಬೇಸಿಗೆಯಲ್ಲಿ ಒಟ್ಟಿಗೆ ಎದುರಾಗಿವೆ.
ನಿಷ್ಕ್ರಿಯ ಜಿಲ್ಲಾಡಳಿತ
ಮಾರ್ಚ್ 2ನೇ ವಾರದಲ್ಲಿಯೇ ಗಂಭೀರ ನೀರಿನ ಸಮಸ್ಯೆ ಎದುರಾಗಿದ್ದರೂ ಜಿಲ್ಲಾಡಳಿತ ಮಾತ್ರ ನಿದ್ರೆಗೆ ಜಾರಿದೆ. ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಹಾಗೂ ಮಾಧ್ಯಮದವರಿಗೆ ಹೇಳುವುದು ಒಂದೇ ಮಾತು, ಬೇಸಿಗೆ ಎದುರಿಸಲು ನಾವು ಸಿದ್ಧರಿದ್ದೇವೆ. ಅದಕ್ಕೆ ಬೇಕಾಗುವ ಹಣ ಜಿಲ್ಲಾಡಳಿತದ ಬಳಿ ಇದೆ ಎನ್ನುತ್ತಾರೆ. ಆದರೆ, ಭೂಮಿಯಲ್ಲಿ ಅಂತರ್ಜಲವಿಲ್ಲ. ಕೆರೆಯಲ್ಲಿ ನೀರಿಲ್ಲ. ವಿದ್ಯುತ್ ಕ್ಷಾಮ, ಯಾವುದೇ ಡ್ಯಾಂಗಳಲ್ಲಿ ನೀರಿಲ್ಲ. ಹೀಗಿದ್ದಾಗ ಸಮಸ್ಯೆ ಉಲ್ಬಣಗೊಳ್ಳುವ ಮೊದಲೇ ಸೂಕ್ತ ಕ್ರಮ ಕೈಗೊಳ್ಳುವುದನ್ನು ಬಿಟ್ಟು ನಮ್ಮ ಬಳಿ ಬೇಸಿಗೆ ಎದುರಿಸಲು ಹಣವಿದೆ ಎಂದು ಹೇಳುತ್ತಿದ್ದಾರೆ. ಕೇವಲ ಹಣದಿಂದಲೇ ಈ ಸಮಸ್ಯೆ ನೀಗಿಸಲು ಸಾಧ್ಯವೇ?
ಜಾನುವಾರುಗಳಿಗೆ ಕುಡಿಯಲು ನೀರಿಲ್ಲ
ಜನರೇ ಕುಡಿಯುವ ನೀರಿಗೆ ಪರದಾಡುತ್ತಿರುವ ಈ ವೇಳೆಯಲ್ಲಿ ಜಾನುವಾರುಗಳ ಸ್ಥಿತಿಯಂತೂ ಹೇಳತೀರದು. ಅದರಲ್ಲಿಯೂ ಕುರಿಗಾರರಿಗೆ ಇದು ದೊಡ್ಡ ಸಮಸ್ಯೆಯಾಗಿದ್ದು, ಹಗಲೆಲ್ಲಾ ಕುರಿ ಮೇಯಿಸಿ ಬೇರೆ ಕಡೆ ಎಲ್ಲಿಯೂ ನೀರು ದೊರೆಯದ ಕಾರಣ ರಾತ್ರಿ ಊರಿಗೆ ಬಂದು ಕುರಿಗಳಿಗೆ ನೀರು ಕುಡಿಸುವಂತಾಗಿದೆ. ಜಾನುವಾರುಗಳನ್ನು ಸಾರ್ವಜನಿಕರು ನೀರಿನ ತೊಂದರೆಯಿಂದ ಅಗ್ಗದ ದರದಲ್ಲಿ ಮಾರಾಟ ಮಾಡುವಂತಹ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

