ಗದಗ

ಶಿಕ್ಷಕರ ಉಪವಾಸ: ಅಸ್ವಸ್ಥ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 19
ಸರ್ಕಾರ ಮತ್ತು ಶಿಕ್ಷಣ ಇಲಾಖೆ ಆದೇಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರದಿಂದ ಅನುಮೋದನೆಗೊಂಡ 6 ಶಿಕ್ಷಕರನ್ನು ಏಕಾಏಕಿ ಸೇವೆಯಿಂದ ವಜಾಗೊಳಿಸಿರುವ ಆಡಳಿತ ಮಂಡಳಿ ಕ್ರಮ ವಿರೋಧಿಸಿ ಬನ್ನಿಕೊಪ್ಪ ಗ್ರಾಮದ ಮಾಳ್ಹಸಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಎದುರು ಸೋಮವಾರದಿಂದ ಅನಿರ್ದಿಷ್ಟ ಕಾಲ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಮಂಗಳವಾರ ಇಬ್ಬರು ಶಿಕ್ಷಕರು ಅಸ್ವಸ್ಥರಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಶಿಕ್ಷಕರಿಗೆ ಬೆಂಬಲ ನೀಡಿ, ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿ, 4-5 ವರ್ಷಗಳಿಂದ ಸಂಬಳವನ್ನೂ ನೀಡದೆ, ಅವರ ಹುದ್ದೆಗೆ ಬೇರೆಯವರನ್ನು ನೇಮಕ ಮಾಡಿಕೊಳ್ಳುವ ಹುನ್ನಾರ ನಡೆಸುತ್ತಿರುವ ಆಡಳಿತ ಮಂಡಳಿ ಕ್ರಮ ಸರಿಯಲ್ಲ. ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದ್ದು, ಕೊಟ್ರಯ್ಯ ಹೆಬ್ಬಾಳ, ಶಂಕ್ರಪ್ಪ ಕಾರಬಾರಿ ತೀವ್ರ ಅಸ್ವಸ್ಥರಾಗಿದ್ದಾರೆ. ಏನಾದರೂ ಅವಗಡ ಸಂಭವಿಸಿದಲ್ಲಿ ಅದಕ್ಕೆ ಆಡಳಿತ ಮಂಡಳಿಯೇ ನೇರ ಹೊಣೆ ಎಂದು ಎಚ್ಚರಿಸಿದರು. 6-7 ವರ್ಷಗಳಿಂದ ವೇತನ ಇಲ್ಲದೆ ಸೇವೆ ಸಲ್ಲಿಸುತ್ತಾ ಬಂದಿದ್ದು, ಸೇವೆಗೆ ಸೇರುವ ಸಂದರ್ಭದಲ್ಲಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಬೇಡಿಕೆಯಂತೆ ತಲಾ ರು. 2 ಲಕ್ಷ ನೀಡಿದ್ದಾರೆ. ಈಗ ಶಿಕ್ಷಣ ಇಲಾಖೆಯಿಂದ ಅನುಮೋದನೆಗೊಂಡ ಮಾಳ್ಹಸಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 6 ಶಿಕ್ಷಕರನ್ನು ಸೇವೆಯಿಂದ ಬಿಡುಗಡೆಗೊಳಿಸಲು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಅನೇಕ ಬಾರಿ ಆಡಳಿತ ಮಂಡಳಿಯವರೊಂದಿಗೆ ಮಾತುಕತೆ ನಡೆಸಿದ್ದು, ಅಂದು ನೀಡಿದ ಭರವಸೆಯಂತೆ ನಡೆದುಕೊಳ್ಳದೆ, ಶಿಕ್ಷಕರಿಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ನೌಕರಿಯಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಡಿಡಿಪಿಐ ಭರವಸೆ: ಸತ್ಯಾಗ್ರಹ ಹಮ್ಮಿಕೊಂಡಿರುವ ಸ್ಥಳಕ್ಕೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ರಾಜೀವ ನಾಯಕ ಭೇಟಿ ನೀಡಿ, ಸಮಸ್ಯೆ ಆಲಿಸಿದರು. ಅನಂತರ ಮಾತನಾಡಿದ ಅವರು, ಆಡಳಿತ ಮಂಡಳಿಯವರಿಗೆ ನೋಟಿಸ್ ನೀಡುವುದಾಗಿ ತಿಳಿಸಿದರಲ್ಲದೆ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಅಸ್ವಸ್ಥರಾದ ಶಿಕ್ಷಕರು: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರು ನಡೆಸುತ್ತಿರುವ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದ್ದು, ಇಬ್ಬರು ಶಿಕ್ಷಕರು ಅಸ್ವಸ್ಥರಾಗಿದ್ದಾರೆ. ಮಂಗಳವಾರವೂ ಆಡಳಿತ ಮಂಡಳಿಯವರು ಇತ್ತ ತಿರುಗಿ ನೋಡಿಲ್ಲ. ಸತ್ಯಾಗ್ರಹ ಮುಂದುವರಿದಲ್ಲಿ ಶಿಕ್ಷಕರ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಶಿಕ್ಷಕರಾದ ಮಂಜುನಾಥ ಪಾಟೀಲ್, ಚನ್ನಬಸಯ್ಯ ಘಟ್ಟಿಮಠ, ಮಂಗಳಗೌರಿ ಪಾಟೀಲ್, ಶಾಂತಾ ಆರ್.ಎಂ., ಕೊಟ್ರಯ್ಯ ಹೆಬ್ಬಾಳ, ಶಂಕ್ರಪ್ಪ ಕಾರಬಾರಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.