ಗದಗ

ಕೆರೆಗಳಿಗೆ ಬೇಕಿದೆ ಕಾಯಕಲ್ಪ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಸೆ. 4
ಸತತ ಬರಗಾಲ, ಸಕಾಲಕ್ಕೆ ಮಳೆಯಾಗದೇ ಇರುವುದರಿಂದ ಗಜೇಂದ್ರಗಡ ಸುತ್ತಮುತ್ತಲ ಗ್ರಾಮಗಳಲ್ಲಿರುವ ಹಲವಾರು ಕೆರೆಗಳು ಬತ್ತಿ ಹೋಗಿದ್ದು, ಅದರಲ್ಲಿಯೂ ಜಿಗೇರಿ ಹಾಗೂ ಬೆಣಚಮಟ್ಟಿ ಸೇರಿದಂತೆ ಈ ಭಾಗದಲ್ಲಿನ ರೈತರ ಹಿತಕ್ಕಾಗಿ ನಿರ್ಮಾಣವಾಗಿರುವ 5 ಕ್ಕೂ ಹೆಚ್ಚು ಐತಿಹಾಸಿಕ ಕೆರೆಗಳು ಇಂದು ಮಳೆ ಕೊರತೆ ಹಾಗೂ ಸೂಕ್ತ ನಿರ್ವಹಣೆ ಇಲ್ಲದೇ ಕಾಲಗರ್ಭ ಸೇರುವ ಆತಂಕ ಎದುರಾಗಿದೆ.
ಗಜೇಂದ್ರಗಡ ಭಾಗದ ಹಲವು ಗ್ರಾಮಗಳ ಪ್ರಮುಖ ಜಲ ಜೀವನಾಡಿಯಾಗಿರುವ ಈ ಬೃಹತ್ ಕೆರೆಗಳು ಕಳೆದೆರೆಡು ದಶಕದಿಂದ ಕಾಯಕಲ್ಪ ಕಾಣದೇ ಹೂಳು ತುಂಬಿವೆ. ನೂರಾರು ರೈತ ಕುಟುಂಬಗಳಿಗೆ ವರದಾನವಾಗಿದ್ದ ಈ ಕೆರೆಗಳು ನೀರಿಲ್ಲದೆ ಬಣಗುಡುತ್ತಿವೆ. ಮುಂಗಾರಿನಲ್ಲಿ ಸುರಿದ ಅಲ್ಪ ಮಳೆಯ ನೀರು ಕೆರೆಯಲ್ಲಿ ಸಂಗ್ರಹಗೊಂಡಿಲ್ಲ. ಇದರ ಪರಿಣಾಮದಿಂದ ಜಾನುವಾರು, ರೈತರು ನೀರಿಗಾಗಿ ಪರದಾಡುವಂತ ಕರುಣಾಜನಕ ಸ್ಥಿತಿ ಬಂದೊದಗಿದೆ.
5 ಬೃಹತ್ ಕೆರೆ ನಿರ್ಮಾಣ: ತಲೆ ತಲಾಂತರಗಳಿಂದ ಮಳೆ ಆಶ್ರಿತ ಬೇಸಾಯವನ್ನೇ ಅವಲಂಬಿಸಿ, ಮಳೆಯಾಗದಿದ್ದರೆ ಸಂಕಷ್ಟದ ಬದುಕು ಸಾಗಿಸುತ್ತಿದ್ದ ಈ ಭಾಗದ ರೈತ ಸಮುದಾಯಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಂದಿನ ಶಾಸಕ ದಿ. ಅಂದಾನಪ್ಪ ದೊಡ್ಡಮೇಟಿ 1970ರ ದಶಕದಲ್ಲಿ ಸಣ್ಣ ನಿರಾವರಿ ಇಲಾಖೆ ವತಿಯಿಂದ ಸಮೀಪದ ನಾಗರಸಕೊಪ್ಪ, ಜಿಗೇರಿ, ಬೆಣಸಮಟ್ಟಿ, ಕುಂಟೊಜಿ, ಪಾರ್ವತಿಕೊಳ್ಳ ಗ್ರಾಮಗಳಲ್ಲಿ 5 ಬೃಹತ್ ಕೆರೆಗಳನ್ನು ಸುಮಾರು 200-350 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿದ್ದರು. ಇದರಿಂದ 30 ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ನೀರಾವರಿಯಿಂದ ಕಂಗೊಳಿಸಿತು. ಆಗ ಇಲ್ಲಿನ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಇಂದಿಗೂ ಇಲ್ಲಿನ ಸಾವಿರಾರು ಕುಟುಂಬಗಳು ಕೆರೆಯ ನೀರನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಉತ್ತೇಜನ: 5 ಬೃಹತ್ ಕೆರೆ ನಿರ್ಮಾಣದಿಂದ ನೀರಾವರಿ ಕೃಷಿಯತ್ತ ರೈತರಿಗೆ ಒಲವು ಹೆಚ್ಚಿಸಿತು. ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿರುವ ರೈತರು ಹೆಚ್ಚೆಚ್ಚು ಕೊಳವೆ ಬಾವಿ ಕೊರೆಯಿಸಿದರು. ಇದರಿಂದ ಕೆರೆ ನೀರಿಗಿಂತಲೂ ಕೊಳವೆ ಬಾವಿ ಕೊರೆಯಿಸಿ ನೀರಾವರಿ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ಪರಿಣಾಮ ಕೆರೆಗಳಿರುವ ಸುತ್ತಮುತ್ತಲಿನ ಪ್ರದೇಶದಲ್ಲಿ ಸದ್ಯ ಸಾವಿರಾರು ಕೊಳವೆ ಬಾವಿಗಳಿವೆ. ಆದರೆ, ಕೆರೆಯಲ್ಲಿ ಸಮರ್ಪಕ ನೀರು ಸಂಗ್ರಹವಾಗದೇ ಇರುವ ಹಿನ್ನೆಲೆಯಲ್ಲಿ ಅಂತರ್ಜಲದ ಕುಸಿತ ಉಂಟಾಗಿ ಕೊಳವೆ ಬಾವಿಗಳೂ ಹನಿ ನೀರಿಲ್ಲದಂತಾಗಿದೆ.
ಕೆರೆಗಳ ವಿವರ: ಜಿಗೇರಿ ಕೆರೆ 151 ಹೆಕ್ಟೇರ್ ಹಾಗೂ 22.41 ಎಂಸಿಎಫ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ನಾಗೇಂದ್ರಗಡ ಕೆರೆಯು 101 ಹೆಕ್ಟೇರ್ ವಿಸ್ತೀರ್ಣ, 12.83 ಎಂಸಿಎಫ್ ನೀರು ಸಂಗ್ರಹ ಸಾಮರ್ಥ್ಯ, ನಾಗರಸಕೊಪ್ಪ ಕೆರೆ 254 ಹೆಕ್ಟೇರ್ ವಿಸ್ತೀರ್ಣ ಹಾಗೂ 18.37 ಎಂಸಿಎಫ್ ನೀರು ಸಂಗ್ರಹ ಸಾಮರ್ಥ್ಯ, ಪಾರ್ವತಿಕೊಳ್ಳ ಕೆರೆ 93 ಹೆಕ್ಟೇರ್ ವಿಸ್ತೀರ್ಣ, 11.50 ಎಂಸಿಎಫ್ ನೀರು ಸಂಗ್ರಹ ಸಾಮರ್ಥ್ಯ, ಕುಂಟೋಜಿ ಕೆರೆ 171 ಹೆಕ್ಟೇರ್ ವಿಸ್ತೀರ್ಣ, 10.11 ಎಂಸಿಎಫ್ ನೀರು ಸಂಗ್ರಹ ಸಾಮಥ್ಯವನ್ನು ಹೊಂದಿದೆ.
ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೆರೆಗಳ ಹೂಳೆತ್ತುವುದರ ಜತೆಗೆ ಸೂಕ್ತ ನಿರ್ವಹಣೆಗಾಗಿ ನೀರಾವರಿ ಇಲಾಖೆಗೆ ಅನುದಾನ ಬಿಡುಗಡೆ ಮಾಡಲಿದ್ದು, ಶೀಘ್ರದಲ್ಲೇ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಇಲಾಖೆ ಚಾಲನೆ ನೀಡುತ್ತದೆ.
 ಗಣಪತಿ ಸಿಂಗ್
ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ಗದಗ

-ಡಿ.ಜಿ. ಮೋಮೀನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.