ಹಳೆ ಶಿಂಗಟಾಲೂರು ಜಲಾವೃತ
ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 3
ಶಿವಮೊಗ್ಗ ಸೇರಿದಂತೆ ಮಲೆನಾಡಿನ ಅನೇಕ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ 2-3 ದಿನಗಳಿಂದ ತುಂಗಭದ್ರಾ ನದಿ ಸಂಪೂರ್ಣ ತುಂಬಿ ಹರಿಯುತ್ತಿದ್ದು, ನದಿ ತೀರದ ಹಳೆ ಶಿಂಗಟಾಲೂರು ಗ್ರಾಮವು ಜಲಾವೃತಗೊಂಡಿದೆ.
ಈ ಮಧ್ಯೆ ಭಾನುವಾರ ಬೆಳಗ್ಗೆ ತಾಲೂಕಿನ ಹಳೆಶಿಂಗಟಾಲೂರು ಗ್ರಾಮಕ್ಕೆ ಶಾಸಕ ರಾಮಕೃಷ್ಣ ದೊಡಮನಿ ಭೇಟಿ ನೀಡಿ ಜಿಲ್ಲಾ ಪಂಚಾಯಿತಿ ಸದಸ್ಯ ಹೇಮಗಿರೀಶ ಹಾವಿನಾಳ ಅವರ ಜತೆ ಟ್ರ್ಯಾಕ್ಟರ್ ಮೂಲಕ ನೀರಿನಲ್ಲಿ ತೆರಳಿ ಮುಳುಗಡೆ ಪ್ರದೇಶವನ್ನು ವೀಕ್ಷಿಸಿದರು. ಈ ವೇಳೆ ಗ್ರಾಮಸ್ಥರು ಶಾಸಕರಿಗೆ ಅಹವಾಲು ಸಲ್ಲಿಸಿದರು.
ನಮ್ಮನ್ ನಡುನೀರಾಗ ಕೈ ಬಿಡಬ್ಯಾಡ್ರಿ, ನಮಗ ಬ್ಯಾರೇಕಡೆ ಚೋಲೋ ಮನಿ ಕಟ್ಟಿಸಿಕೊಡ್ರಿ, ನಮಗ್ ಈ ಸುಗ್ಗಿ ಬದುಕು ಸಾಕಾಗಿ ಹೋಗೈತಿ ಎಂದು ತಾಲೂಕಿನ ಗ್ರಾಮದ ಮಹಿಳೆ ಶಾಸಕರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಳು.
ಅನೇಕ ವರ್ಷಗಳಿಂದ ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಈ ರೀತಿ ನಮ್ಮ ಊರು ಮುಳುಗುವುದು ಸಹಜವಾಗಿದೆ. ಆದರೆ ಇದಕ್ಕೆ ಈ ಹಿಂದೆ ಆಡಳಿತ ನಡೆಸಿದ ಯಾವುದೇ ಸರ್ಕಾರಗಳಾಗಲಿ, ಕಾಂಗ್ರೆಸ್ ಸರ್ಕಾರವಾಗಲಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಕೇವಲ ಇಲ್ಲಿಗೆ ಬಂದಾಗೊಮ್ಮೆ ಹೊಸ ಮನೆ ನೀಡುವ ಬಣ್ಣದ ಮಾತುಗಳನ್ನಾಡಿ ಹೋಗುತ್ತೀರಿ. ಆದರೆ ಯಾವೊಬ್ಬ ಜನಪ್ರತಿನಿಧಿಯೂ ಮುಳುಗಡೆ ಜನರಿಗೆ ಮನೆ ನೀಡಿ ಬೇರೆಡೆ ಸ್ಥಳಾಂತರಿಸುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ಶಾಸಕರಾಗಿ, ಮಂತ್ರಿಯಾಗಿ 15 ವರ್ಷಗಳ ಕಾಲ ಅಧಿಕಾರ ನಡೆಸಿದ ಎಸ್.ಎಸ್. ಪಾಟೀಲರು ನಮ್ಮ ಕಷ್ಟಕ್ಕೆ ಶಾಶ್ವತ ಪರಿಹಾರ ಮಾಡಲಿಲ್ಲ. ಆನಂತರ ಸಚಿವರಾದ ಜಗದೀಶ ಶೆಟ್ಟರ್, ಎಚ್.ಕೆ. ಪಾಟೀಲ ಸಹ ಈ ಗ್ರಾಮಕ್ಕೆ ಅನೇಕ ಬಾರಿ ಭೇಟಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವರ್ಷ ಮುಳುಗಡೆಯಾದಾಗ ಶಾಸಕ ರಾಮಕೃಷ್ಣ ದೊಡ್ಡಮನಿಯವರೆ ಆಗಮಿಸಿ ಇಲ್ಲಿನ 43 ಕುಟುಂಬಗಳಿಗೆ ಹೊಸ ಮನೆ ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿಯಿಂದ ಮಂಜೂರಿ ಮಾಡಿಸಿ ಕೊಡುವುದಾಗಿ ಹೇಳಿದ್ದರು. ಆದರೆ ಇವರಿಂದಲೂ ಆಗಲಿಲ್ಲ. ಮುಳುಗಡೆ ಯಾದಾಗೊಮ್ಮೆ ಬಂದು ಬಣ್ಣದ ಮಾತುಗಳನ್ನಾಡುವುದು ನಮಗೆ ಬೇಸರವುಂಟು ಮಾಡಿದೆ ಎಂದು ಗ್ರಾಮದ ನಿವಾಸಿ ಗುಡದೀರಪ್ಪ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಮಗೊಂದು ಶಾಶ್ವತ ಪರಿಹಾರ ಮಾಡಬೇಕೆಂದು ಗ್ರಾಮಸ್ಥರು ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಅವರಿಗೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕಳೆದ ವರ್ಷ ಇಲ್ಲಿಗೆ ಭೇಟಿ ನೀಡಿದಾಗ ಹಳೆ ಶಿಂಗಟಾಲೂರು ಗ್ರಾಮದಲ್ಲಿರುವವರ ಹೆಸರುಗಳನ್ನು ಪಟ್ಟಿಮಾಡಿ ಕೊಡುವಂತೆ ಗ್ರಾಮ ಪಂಚಾಯಿತಿಗೆ ಸೂಚಿಸಿದ್ದೆ. ಅದೀಗ ಜಿಲ್ಲಾಧಿಕಾರಿ ಹಂತದಲ್ಲಿದ್ದು, ಈ ಹಿಂದೆ ನೀಡಿದ ಪಟ್ಟಿಯನ್ನು ಪರಿಶೀಲಿಸಿ ಈ ಬಾರಿ ಖಂಡಿತ ಹಳೆ ಶಿಂಗಟಾಲೂರಿನಲ್ಲಿರುವ 43 ಕುಟುಂಬದವರಿಗೆ ಮನೆಗಳ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಇನ್ನು ಒಂದೆರಡು ದಿನಗಳಲ್ಲಿ ನದಿ ಏರಿಕೆ ಪ್ರಮಾಣ ಕಡಿಮೆಯಾಗದಿದ್ದರೆ ಇಲ್ಲಿನ ಎಲ್ಲ ನಿವಾಸಿಗಳನ್ನೂ ಗ್ರಾಮದ ಸರ್ಕಾರಿ ಶಾಲೆಗೆ ಸ್ಥಳಾಂತರಿಸಿ ಗಂಜಿಕೇಂದ್ರ ತೆರೆಯಲು ವ್ಯವಸ್ಥೆ ಮಾಡುವಂತೆ ಸ್ಥಳದಲ್ಲಿಯೇ ಇದ್ದ ತಹಸೀಲ್ದಾರ್ ಡಿ.ಐ. ಹೆಗ್ಗೊಂಡ ಅವರಿಗೆ ಸೂಚಿಸಿದರು. ಈರಣ್ಣ ಶೆಟ್ಟರ್, ಶಂಕರಗುರು ಬಿಳಿಮಗ್ಗದ, ಈರಪ್ಪ ಬಾಗೇವಾಡಿ, ಈರಪ್ಪ ಮುಂಡವಾಡ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

