ಗದಗ

ಮಳೆಗೆ 300 ಮನೆ ಜಲಾವೃತ

Published On :

ಶಿರಹಟ್ಟಿ: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ 300ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, 25ಕ್ಕೂ ಹೆಚ್ಚು ಮನೆಗಳು ವಾಸಮಾಡಲು ಬಾರದ ಸ್ಥಿತಿ ತಲುಪಿವೆ. ಮಳೆಯ ರಭಸಕ್ಕೆ ಯಳವತ್ತಿ-ಲಕ್ಷ್ಮೇಶ್ವರ ಮಾರ್ಗದ ರೈತ ಸಂಪರ್ಕ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಹೊಲಕ್ಕೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಹೊಲಗಳಲ್ಲಿ ನೀರಿನ ನಿರ್ಮಾಣವಾಗಿವೆ.
30 ವರ್ಷಗಳಲ್ಲಿಯೇ ಕಂಡರಿಯದ 119 ಮಿಮೀ ಭಾರಿ ಮಳೆ ಸೋಮವಾರ ಸುರಿದಿದ್ದು, ತುರ್ತು ಪರಿಹಾರ ಕಾರ್ಯ ಕೈಗೊಳ್ಳಬೇಕಾಗಿದೆ. ಮಾಗಡಿ ಗ್ರಾಮದಿಂದ ಯಳವತ್ತಿ, ಯತ್ತಿನಹಳ್ಳಿ, ಮಾಡಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಳ್ಳ ತೀರಾ ಕೆಳಮಟ್ಟದಲ್ಲಿರುವುದರಿಂದ ಸೋಮವಾರ ರಾತ್ರಿ 10 ಗಂಟೆವರೆಗೂ ಶಾಲಾ ಮಕ್ಕಳು, ರೈತರು, ಸಾರ್ವಜನಿಕರು ತಮ್ಮ ಗ್ರಾಮಕ್ಕೆ ತೆರಳಲು ಪರದಾಡಬೇಕಾಯಿತು.
ಮೇಲ್ಸೇತುವೆಗೆ ಆಗ್ರಹ: ಮಳೆ ಸುರಿದರೆ ಯಳವತ್ತಿ ಗ್ರಾಮಕ್ಕೆ ತೆರಳುವ ಜನತೆ ತೀವ್ರ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದ್ದು, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ಶಾಸಕ ರಾಮಕೃಷ್ಣ ದೊಡ್ಡಮನಿ, ಸಂಸದ ಶಿವಕುಮಾರ ಉದಾಸಿ ಅವರಿಗೆ ಕೆಳಮಟ್ಟದ ಹಳ್ಳವನ್ನು ಮೇಲ್ಸೇತುವೆಯಾಗಿ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ತಕ್ಷಣವೇ ಸಮಸ್ಯೆ ಪರಿಶೀಲಿಸಿ ತುರ್ತು ಕಾರ್ಯಕ್ಕೆ ಮುಂದಾಗಬೇಕು ಎಂದು ತಾ.ಪಂ. ಸದಸ್ಯ ನಿಂಬಣ್ಣ ಮಡಿವಾಳರ ಒತ್ತಾಯಿಸಿದ್ದಾರೆ.
ನತಾ ಪ್ಲಾಟ್ ನಲ್ಲಿರುವ ಅಂದಾನಯ್ಯ ಬಸವಶಾಸ್ತ್ರಿ ಹಿರೇಮಠ ಅವರ ಮನೆ ಬಿದ್ದಿದ್ದು, ವಾಸಿಸಲು ಬಾರದ ಸ್ಥಿತಿ ತಲುಪಿದೆ. ಮನೆಯಲ್ಲಿದ್ದ ಬೀಜ, ಗೊಬ್ಬರ ಮಳೆ ನೀರಿನಲ್ಲಿ ತೇಲಿ ಹೋಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಿ ಆಸ್ಪತ್ರೆ, ಶಾಲೆ ಮುಂಭಾಗದಲ್ಲಿ ಚರಂಡಿ ನಿರ್ಮಿಸದೇ ಇರುವುದರಿಂದ ಮಳೆ ನೀರು ಶಾಲಾ ಕೋಣೆಯೊಳಗೆ ನುಗ್ಗಿ ಕಂಪ್ಯೂಟರ್‌ಗಳು ಹಾಳಾಗಿವೆ. ಮಂಗಳವಾರ ತಾಪಂ. ಇಓ ಎಂ. ನಾರಾಯಣ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ಗ್ರಾಪಂ ಅಧ್ಯಕ್ಷ ಬಿ.ಎನ್. ನೀಲಗುಂದ, ಶಿವು ಮೂಲಿಮನಿ, ಎಸ್.ಎಸ್. ನಿಂಗನಗೌಡ್ರ, ಶಿವಯ್ಯ ಮಠಪತಿ, ಬಿ.ಸಿ. ಪಿಡ್ಡನಗೌಡ್ರ, ಎಸ್.ಎಂ. ಗಾಳಿ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದು, ಬಿದ್ದ ಮನೆಗಳಿಗೆ ಪರಿಹಾರ, ಹಾಳಾದ ರಸ್ತೆ, ಚರಂಡಿ ನಿರ್ಮಾಣ ಕಾರ್ಯಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.