ವೇತನ ತಾರತಮ್ಯ: ಕಡತ ಪರಿಶೀಲನೆ
ರೋಣ: ಸ್ಥಳೀಯ ಪುರಸಭೆಯ ಪೌರ ಕಾರ್ಮಿಕರಿಗೆ ವೇತನ ವಿತರಣೆ ತಾರತಮ್ಯವಾಗಿದೆ ಎಂಬ ದೂರಿನನ್ವಯ ನಗರಾಭಿವೃದ್ಧಿ ಕೋಶ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕ (ಪಿಡಿ)ರಾದ ರಮೇಶ ದೇಸಾಯಿ ಅವರು ಸೋಮವಾರ ಪುರಸಭೆಗೆ ಭೇಟಿ ನೀಡಿ ಪುರಸಭೆ ಸಿಬ್ಬಂದಿ ಮತ್ತು ಪೌರ ಕಾರ್ಮಿಕರ ಸಭೆ ನಡೆಸಿದರು.
ಪೌರ ಕಾರ್ಮಿಕ ನಿಂಗಪ್ಪ ದೊಡ್ಡಮನಿ, ಬಸವರಾಜ ಜೋಗಣ್ಣವರ, ರುದ್ರಪ್ಪ ತೆಗ್ಗಿನಮನಿ, ರಾಮಣ್ಣ ದೊಡ್ಡಮನಿ, ಬಸವರಾಜ ಚಲವಾದಿ ಮಾತನಾಡಿ, ಪುರಸಭೆಯಲ್ಲಿನ ಕೆಲ ದಿನಗೂಲಿ ನೌಕರರಿಗೆ ಮುಖ್ಯಾಧಿಕಾರಿ ಬಾಬುರಾವ್ ಕಮತಗಿ ಅವರು ಕಳೆದ ಏಪ್ರಿಲ್ನಿಂದ ವೇತನ ಹೆಚ್ಚಳ ಮಾಡಿದ್ದಾರೆ. ಇನ್ನೂ 14 ಪೌರ ಕಾರ್ಮಿಕರು ಇದರಿಂದ ವಂಚಿತರಾಗಿದ್ದು, ವೇತನ ವಿತರಣೆಯಲ್ಲಿ ತಾರತಮ್ಯವಾಗಿದೆ. ಅವರು ನಮ್ಮಂತೆ ದಿನಗೂಲಿ ನೌಕರರಿದ್ದು, ಅವರಿಗೇಕೆ ವೇತನ ಹೆಚ್ಚಳ ಮಾಡಲಾಗಿದೆ. ಯಾವ ಮಾನ ದಂಡ ಅನುಸರಿಸಲಾಗಿದೆ. ಈ ಕುರಿತು ನಮಗೂ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಪುರಸಭೆ ಸದಸ್ಯ ಮಂಜುನಾಥ ಹಾಳಕೇರಿ ಮಾತನಾಡಿ, ಈಗಾಗಲೇ ಕೇವಲ ಪೌರ ಕಾರ್ಮಿಕರು ಎಸ್ಆರ್. ಪುಸ್ತಕಕ್ಕೆ ಸಹಿ ಮಾಡುವದಲ್ಲದೇ, ಹೆಚ್ಚಳವಾದ ವೇತನವನ್ನು 2 ತಿಂಗಳಿಂದ ಪಡೆಯುತ್ತಿದ್ದಾರೆ. ಈ ಕುರಿತು ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದರು.
ರಮೇಶ ದೇಸಾಯಿ, ದಿನಗೂಲಿ ನೌಕರರಿಗೆ ಎಸ್ಆರ್ ಪುಸ್ತಕಕ್ಕೆ ಸಹಿ ಮಾಡಿ ವೇತನ ಪಡೆಯಲು ಬರುವುದಿಲ್ಲ. ಈಗಾಗಲೇ ವಿತರಣೆಯಾದ ವೇತನ ಮರಳಿ ಪಡೆಯಲಾಗುವುದು. ಅಲ್ಲದೇ ಈ ನಿಯಮ ಉಲ್ಲಂಘಿಸಿದ ಮುಖ್ಯಾಧಿಕಾರಿ ಬಾಬುರಾವ್ ಕಮತಗಿ ಅವರಿಂದ ವೈಯಕ್ತಿಕವಾಗಿ ವಸೂಲಿ ಮಾಡಿ ಸರ್ಕಾರಕ್ಕೆ ತುಂಬಿಸಲಾಗುವುದು ಎಂದರು.
ಕಾರ್ಮಿಕರಿಗೆ ತಾಕೀತು: ಪುರಸಭೆಯಲ್ಲಿ ಸುಮಾರು 70 ಪೌರ ಕಾರ್ಮಿಕರಿದ್ದರೂ ಯಾವುದೇ ವಾರ್ಡ್ಗಳು ಸ್ವಚ್ಛತೆಯಿಂದ ಕೂಡಿಲ್ಲ. ನಿತ್ಯ ಸಾರ್ವಜನಿಕರಿಂದ ಅಸ್ವಚ್ಛತೆ ಕುರಿತು ದೂರುಗಳ ಬರುತ್ತಿವೆ. ಪಟ್ಟಣದ ಸೌಂದರ್ಯ ಹೆಚ್ಚಳ ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಜವಾಬ್ದಾರಿ ಮುಖ್ಯವಾಗಿದೆ. ನಿಮ್ಮ ಕಾಯಕ ನಿಷ್ಠೆಯಿಂದ ಮಾಡಬೇಕು. ಇದರಲ್ಲಿ ಕೆಲವರು ತಮ್ಮ ಕೆಲಸವನ್ನು ಬೇರೆಯವರಿಂದ ಮಾಡಿಸುತ್ತಾರೆ ಎಂದು ತಿಳಿದು ಬಂದಿದೆ. ಅಂಥವರನ್ನು ನಿರ್ದಾಕ್ಷಿಣ್ಯವಾಗಿ ತಗೆದು ಹಾಕಲಾಗುವುದು ಎಂದು ಪೌರ ಕಾರ್ಮಿಕರಿಗೆ ರಮೇಶ ದೇಸಾಯಿ ತಾಕೀತು ಮಾಡಿದರು.
ಪ್ರಭಾರಿ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಉಪಾಧ್ಯಕ್ಷೆ ಲಕ್ಷ್ಮೀ ಗಡಗಿ, ವಿರೋಧ ಪಕ್ಷದ ನಾಯಕ ಬಸನಗೌಡ ಪಾಟೀಲ, ಸದಸ್ಯ ಅಜ್ಜಪ್ಪ ರಡ್ಡೇರ, ತೋಟಪ್ಪ ನವಲಗುಂದ, ಗದಿಗೆಪ್ಪ ಕಿರೇಸೂರು, ಖಾದರಸಾಬ ಸಂಕನೂರ ಮತ್ತು ಪುರಸಭೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

