ಗದಗ

ಇಲಿ ಹಾವಳಿ: ರೈತ ಸಮೂಹ ಹೈರಾಣ

Published On :

ಲಕ್ಷ್ಮೇಶ್ವರ: ಈ ಬಾರಿ ಮುಂಗಾರು ಮಳೆ ಬಿತ್ತನೆಗೆ ಅನುಕೂಲವಾಗುವ ರೀತಿಯಲ್ಲಿ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿತ್ತು. ಇದನ್ನು ನೆಚ್ಚಿಕೊಂಡ ರೈತರು ತಮ್ಮ ಹೊಲದಲ್ಲಿ ಮುಂಗಾರು ಹಂಗಾಮಿನ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಮುಂಗಾರು ಹಂಗಾಮು ಬೆಳೆಗಳಾದ ಗೆಜ್ಜೆ ಶೇಂಗಾ, ಬಿಟಿ ಹತ್ತಿ ಬೀಜ ಬಿತ್ತನೆಯಲ್ಲಿ ತೊಡಗಿಕೊಂಡಿದ್ದರು. ಆದರೆ, ಹೊಲದಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಇಲಿಗಳು ಬಿತ್ತಿರುವ ಬೀಜಗಳನ್ನು ತಿಂದು ರೈತರ ನೆಮ್ಮದಿ ಕೆಡಿಸಿದೆ.
ಲಕ್ಷ್ಮೇಶ್ವರ ಹೋಬಳಿಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಹಾಗೂ ಬಿಟಿ ಹತ್ತಿ ಬೀಜಗಳನ್ನು ಬಿತ್ತನೆ ಮಾಡುವ ಕಾರ್ಯ ಜೋರಾಗಿ ನಡೆಯುತ್ತಿದೆ. ಆದರೆ, ಇಲಿಗಳು ರೈತರು ಬಿತ್ತಿದ ಗೆಜ್ಜೆ ಶೇಂಗಾ ಹಾಗೂ ಬಿಟಿ ಹತ್ತಿ ಬೀಜಗಳನ್ನು ತಿಂದು ಹಾಕುವ ಮೂಲಕ ರೈತರಿಗೆ ತಲೆನೋವಾಗಿ ಪರಿಣಮಿಸಿವೆ. ಇಂದು ಬಿತ್ತಿರುವ ಬೀಜಗಳನ್ನು ರಾತ್ರಿಯೊಳಗಾಗಿ ತಿಂದು ಮುಗಿಸುತ್ತಿರುವ ಇಲಿಗಳು, ಮರುದಿನ ಹೊಲಕ್ಕೆ ಹೋಗಿ ನೋಡಿದಾಗ ಕೇವಲ ಕಾಳಿನ ಮೇಲಿನ ಸಿಪ್ಪೆ ಮಾತ್ರ ಕಾಣ ಸಿಗುತ್ತಿವೆ.
ಪಾಷಾಣದಿಂದ ಪಾರು: ಬಿತ್ತನೆಗಾಗಿ ಸಾವಿರಾರು ರುಪಾಯಿ ವೆಚ್ಚ ಮಾಡಿ ಬೀಜ, ಗೊಬ್ಬರ, ಆಳು-ಕಾಳುಗಳಿಗೆ ಖರ್ಚು ಮಾಡಿದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಮತ್ತೊಮ್ಮೆ ಬೀಜ, ಗೊಬ್ಬರಕ್ಕಾಗಿ ರೈತರು ಸಾಲ ಮಾಡಿ ಬಿತ್ತನೆ ಮಾಡುವ ಹಂತಕ್ಕೆ ಇಲಿಗಳು ತಂದು ನಿಲ್ಲಿಸಿದ್ದು, ರೈತರು ಸಂಕಷ್ಟದಲ್ಲಿ ಕೈತೊಳೆಯುತ್ತಿದ್ದಾರೆ. ಇಲಿಗಳನ್ನು ನಿಯಂತ್ರಣ ಮಾಡಲು ರೈತರು ಹರಸಾಹಸ ಮಾಡಬೇಕಾಗಿದೆ. ಇಲಿಗಳ ಪಾಷಾಣ ಇಡುವ ಮೂಲಕ ಕೊಲ್ಲುವ ಪ್ರಯತ್ನಕ್ಕೆ ರೈತರು ಮುಂದಾಗಿದ್ದರೂ ಜಾಣ ಇಲಿಗಳು ರೈತರನ್ನು ಯಾಮಾರಿಸಿ ಬೀಜಗಳನ್ನು ಮಾತ್ರ ತಿಂದು ಹಾಕುತ್ತಿರುವುದು ತಲೆನೋವಿನ ಸಂಗತಿಯಾಗಿದೆ.
ರೈತರ ಅಳಲು: ಎರಡ್ಮೂರು ದಿನಗಳ ಹಿಂದೆ 8 ಎಕರೆ ಹೊಲದಲ್ಲಿ ಬಿಟಿ ಹತ್ತಿ ಬೀಜ ನಾಟಿ ಮಾಡಿಸಿದ್ದೆವು ಹಾಗೂ 6 ಎಕರೆ ಹೊಲದಲ್ಲಿ ಗೆಜ್ಜೆ ಶೇಂಗಾ ಬೀಜಗಳನ್ನು ಬಿತ್ತನೆ ಮಾಡಿದ್ದೆವು, ಬಿತ್ತನೆ ಮಾಡಿ ಎರಡು ದಿನಗಳ ಬಳಿಕ ಬಿಟ್ಟು ಹೊಲದಲ್ಲಿ ನೋಡಲಾಗಿ ಇಲಿಗಳು ಬಿತ್ತಿದ ಬೀಜಗಳನ್ನು ತಿಂದು ಕೇವಲ ಸಿಪ್ಪೆ ಮಾತ್ರ ಬಿಟ್ಟಿವೆ. ಕಷ್ಟಪಟ್ಟು ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯುತ್ತವೆ ಎಂದು ಹಾದಿ ಕಾಯುತ್ತ ಕುಳಿತ್ತಿದ್ದ ನಮಗೆ ಕಣ್ಣೀರು ತರಿಸುವಂತೆ ಮಾಡಿವೆ ಎನ್ನುತ್ತಾರೆ ಗೊಜನೂರಿನ ರೈತರಾದ ಕಾಂತಪ್ಪ ಕರೆಣ್ಣವರ, ಪ್ರವೀಣ ಮಾಡಳ್ಳಿ.

ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.