ಟಾಯ್ಲೆಟ್ಗೆ ಬೀಗ: ನೀರೆಯರ ಪರದಾಟ
ಲಕ್ಷ್ಮೇಶ್ವರ: ಸರ್ಕಾರ ಲಕ್ಷಾಂತರ ರು. ಖರ್ಚು ಮಾಡಿ ಮಹಿಳೆಯರಿಗೆ ಹಲವಾರು ಸಾಮೂಹಿಕ ಶೌಚಾಲಯಗಳನ್ನು ಪಟ್ಟಣದಲ್ಲಿ ನಿರ್ಮಾಣ ಮಾಡಿದೆ. ಆದರೆ, ಕೆಂಚಲಾಪುರ ಓಣಿಯಲ್ಲಿರುವ ಮಹಿಳಾ ಶೌಚಾಲಯ 1 ತಿಂಗಳಿಂದ ಬಾಗಿಲು ಮುಚ್ಚಿದ್ದರಿಂದ ಇಲ್ಲಿನ ಮಹಿಳೆಯರು ಗಿಡಗಂಟಿಗಳ ಮರೆಯನ್ನೇ ಶೌಚಕ್ಕೆ ಅವಲಂಬಿಸಬೇಕಾಗಿದೆ.
ಪಟ್ಟಣದ ವಾರ್ಡ್ ನಂ. 3ರಲ್ಲಿ ಬರುವ ಭಜಂತ್ರಿಯವರ ಓಣಿ ಹಾಗೂ ಉದ್ದನಗೌಡ್ರ ತೋಟದ ಹತ್ತಿರ ವಾರ್ಡ್ ನಂ. 4ರಲ್ಲಿ ಬರುವ ಕೆಂಚಲಾಪುರ ಓಣಿಯಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗುವುದೆಂದರೆ ಪ್ರಾಣಕ್ಕೆ ಕುತ್ತು ತಂದುಕೊಂಡಂತೆ ಎಂಬಂತಾಗಿದೆ. ಈ ಓಣಿಯ ಹೆಣ್ಣು ಮಕ್ಕಳು ಕೈಯಲ್ಲಿ ತಂಬಿಗೆ ಹಿಡಿದುಕೊಂಡು ಬಯಲನ್ನು ಹುಡುಕುತ್ತ ಹೊರಡಬೇಕಾಗಿದೆ. ಪಟ್ಟಣದ ಹೊರ ವಲಯದಲ್ಲಿನ ಹೊಲಗಳಿಗೆ ಬಹಿರ್ದೆಸೆಗೆ ಹೋಗಲು ಆಗದೆ ಸೂರ್ಯೋದಯಕ್ಕೂ ಮುನ್ನ ಮತ್ತು ಸೂರ್ಯಾಸ್ತದ ನಂತರದ ಕತ್ತಲನ್ನು ಹಾಗೂ ಹಳ್ಳದ ದಂಡೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಆಶ್ರಯಿಸಬೇಕಾಗಿದೆ.
ಗಿಡಗಂಟಿಗಳ ಪೊದೆಯಲ್ಲಿ ಅವಿತುಕೊಂಡು ಕುಳಿತಿರುವ ಹಾವು, ಚೇಳುಗಳು ಮಹಿಳೆಯರನ್ನು ಕಚ್ಚಿರುವ ಉದಾಹರಣೆಗಳಿವೆ. ಬಯಲು ಶೌಚಕ್ಕೆ ಹೋದಾಗ ಮಹಿಳೆಯರ ಮೇಲೆ ಅತ್ಯಾಚಾರ, ಯತ್ನ ನಡೆದ ಪ್ರಕರಣಗಳಿವೆ. ಸರ್ಕಾರಗಳು ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ಎಚ್ಚೆತ್ತುಕೊಳ್ಳದೇ ಕುಂಭಕರ್ಣನ ನಿದ್ರೆಯಲ್ಲಿವೆ. ಶೌಚಾಲಯಕ್ಕೆ ಅವಶ್ಯವಾಗಿರುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಅವು ಈಗ ನಿಷ್ಕ್ರಿಯ. ಹೀಗಾಗಿ ಕೆಲ ಕಡೆಗಳಲ್ಲಿ ಶೌಚಾಲಯ ಬಂದಾಗಿವೆ. ಕೆಲ ಕಡೆ ಸರಿಯಿದ್ದರೂ ಬಂದ್ ಆಗಿರುವುದಕ್ಕೆ ಕಾರಣ ತಿಳಿದಿಲ್ಲ. ಸರ್ಕಾರ ರು. 10 ಲಕ್ಷ ವ್ಯಯ ಮಾಡಿ ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿದೆ. ಬಾಗಿಲಿಗೆ ಬೀಗ ಹಾಕಿದರೆ ಅವುಗಳನ್ನು ನಿರ್ಮಿಸಿದ ಉದ್ದೇಶವೇನು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಮಹಿಳೆಯರು ಮತ್ತೆ ಗಿಡಗಂಟಿಗಳ, ಹುಲ್ಲಿನ ಪೊದೆಗಳ ಮರೆಯನ್ನು ಆಶ್ರಯಿಸಬೇಕಾಗಿದೆ. ಇನ್ನು ಮಲಮೂತ್ರಗಳ ವಾಸನೆಯು ರೋಗದ ಭೀತಿ ಕಾಡುತ್ತಿದೆ. ಮಲೀನತೆ ಹೆಚ್ಚಾಗಿದ್ದರಿಂದ ಸೊಳ್ಳೆಗಳು ವಿಪರೀತವಾಗಿದ್ದು ಜೀವ ಹಿಂಡುತ್ತಿವೆ.
- ಅಶೋಕ ಸೊರಟೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

