ಶಾಲೆ ಮುಚ್ಚಿದರೆ ಗತಿಯೇನು?
ಗಜೇಂದ್ರಗಡ: ಬಡ ಅಲೆಮಾರಿ ಸಮುದಾಯಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದ್ದ ಸ್ಥಳೀಯ ಸರ್ಕಾರಿ ವಸತಿ ಶಾಲೆ ಮುಚ್ಚಲು ಸರ್ಕಾರ ಮುಂದಾಗಿರುವುದರಿಂದ ಬಡ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸ್ಥಳೀಯ ಹಿಂದುಳಿದ ಸಮುದಾಯದ ಮಕ್ಕಳು ಕಲಿಯುತ್ತಿರುವ ಸರ್ಕಾರಿ ವಸತಿ ಶಾಲೆ ಬಂದ್ ಮಾಡಿ ಈಗಿರುವ ವಿದ್ಯಾರ್ಥಿಗಳನ್ನು ಬೇರೆಡೆ ಸ್ಥಳಾಂತರಿಸುವ ಶಿಕ್ಷಣ ಇಲಾಖೆ ಕ್ರಮ ವಿದ್ಯಾರ್ಥಿ, ಪಾಲಕರು ವಿದ್ಯಾರ್ಥಿ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಹಿಂದುಳಿದ ಅಲೆಮಾರಿ-ಆದಿವಾಸಿ, ಗಿರಿಜನ ಒಂದೆಡೆ ನೆಲೆ ನಿಂತು ಶೈಕ್ಷಣಿಕ ಪ್ರಗತಿ ಕಾಣುವ ಉದ್ದೇಶದಿಂದ ಮೊರಾರ್ಜಿ ದೇಸಾಯಿ ಆಡಳಿತ ಅವಧಿಯಲ್ಲಿ ಗಜೇಂದ್ರಗಡದಲ್ಲಿ 5 ದಶಕದ ಹಿಂದೆ ಪ್ರಾರಂಭಿಸಲಾದ ವಸತಿ ಶಾಲೆ ಮುಚ್ಚಲು ಈಗಿನ ಸರ್ಕಾರ ಮುಂದಾಗಿರುವುದು ಅಲೆಮಾರಿ ಜನಾಂಗದ ಮಕ್ಕಳ ಶೈಕ್ಷಣಿಕ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದೆ.
ಅಲೆಮಾರಿ ಮಕ್ಕಳ ಭವಿಷ್ಯಕ್ಕೆ ಕುತ್ತು: ಸ್ಥಳೀಯ ಗೋರ ಬಂಜಾರ ಸೇವಾಲಾಲ ಸಮುದಾಯ ವಾಸಿಸುವ ತಾಂಡಾ ಬಳಿ 1965ರಲ್ಲಿ ಸ್ಥಾಪಿಸಿರುವ ವಸತಿ ಶಾಲೆಗೆ 1ರಿಂದ 5ನೇ ತರಗತಿಯಲ್ಲಿ 2012-13ರಲ್ಲಿ 90 ವಿದ್ಯಾರ್ಥಿಗಳು ಇದ್ದರು. ಈಗ 1ನೇ ತರಗತಿಗೆ ಪ್ರವೇಶ ದಾಖಲಾತಿ ಮಾಡಿಕೊಳ್ಳುತ್ತಿಲ್ಲ. ಅಲೆಮಾರಿ ಜನಾಂಗಗಳ ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರ ಯೋಜನೆ ಜಾರಿಗೊಳಿಸಿದೆ. ದೇವರಾಜ ಅರಸು ಆಡಳಿತಾವಧಿಯಲ್ಲಿ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿ ಶಾಲೆ ಪ್ರಾರಂಭಿಸಿದ ಮೂಲ ಉದ್ದೇಶವನ್ನು ಈಗಿನ ಸರ್ಕಾರ ಬುಡಮೇಲು ಮಾಡುತ್ತಿರುವುದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ದುರ್ಬಲ ವರ್ಗದ ಜೀವನಾಡಿಗೆ ಕುತ್ತು: ದುರ್ಬಲ ವರ್ಗದ ಮಕ್ಕಳಿಗೆ ಜೀವನಾಡಿಯಂತಿರುವ ಈ ವಸತಿ ಶಾಲೆ ಮುಚ್ಚಲು ಸರ್ಕಾರ ಹೊರಟಿರುವುದು ಹಸಿದ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ಗೋರ ಬಂಜಾರ ಸೇವಾಲಾಲ ಸಮುದಾಯ ಮುಖಂಡ ಬಾಲು ರಾಠೋಡ, ಪೀರು ರಾಠೋಡ. ಜಾರಿಯಾಗಿರುವ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ದಡಿಯಲ್ಲೂ ಅಲೆಮಾರಿ ಮಕ್ಕಳಿಗೆ ಮೀಸಲಾತಿ ನೀಡಿಲ್ಲ. ಸರ್ಕಾರಕ್ಕೆ ಸ್ಥಿರ ದೃಷ್ಟಿಕೋನ ಇಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇನ್ನಾದರೂ ಸರ್ಕಾರ ಆಶ್ರಮ ಶಾಲೆ ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ವಿದ್ಯಾರ್ಥಿ ಸಂಘಟನೆಗಳಿಂದ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು.
ಗಜೇಂದ್ರಗಡ ವಸತಿ ಶಾಲೆಗೆ 1ನೇ ತರಗತಿಗೆ ಪ್ರವೇಶ ಮಾಡಿಕೊಳ್ಳುತ್ತಿಲ್ಲ. 2ರಿಂದ ಪ್ರವೇಶ ಮಾಡಿಕೊಳ್ಳುತ್ತಿದ್ದೇವೆ. 1ನೇ ತರಗತಿಗೆ ಪ್ರವೇಶ ದಾಖಲಾತಿ ಬಗ್ಗೆ ಜು. 15ರ ನಂತರ ತೀರ್ಮಾನ ತಿಳಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆದೇಶಿಸಿದ್ದಾರೆ.
- ಪರಶುರಾಮ ಬುಗಟಿ,
ವಸತಿ ಶಾಲೆ ಸಹ ಶಿಕ್ಷಕ
ದುರ್ಬಲ ವರ್ಗದ ಮಕ್ಕಳಿಗೆ ಜೀವನಾಡಿಯಂತಿರುವ ಗಜೇಂದ್ರಗಡ ವಸತಿ ಶಾಲೆ ಮುಚ್ಚಲು ಶಿಕ್ಷಣ ಇಲಾಖೆ ಮುಂದಾಗಿರುವುದು ಹಸಿದ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಸರ್ಕಾರ ತಯಾರಿಸಿರುವ ಅಲೆಮಾರಿ ಜನಾಂಗದ ಅವೈಜ್ಞಾನಿಕ ಪಟ್ಟಿ ಕೈ ಬಿಡಬೇಕು. ಇಲ್ಲದಿದ್ದರೆ ಶಿಕ್ಷಣ ಇಲಾಖೆ ವಿರುದ್ಧ ಎಸ್ಎಫ್ಐ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತೇವೆ.
- ಪೀರು ರಾಠೋಡ,ಎಸ್ಎಫ್ಐ ಜಿಲ್ಲಾಧ್ಯಕ್ಷ
-ಡಿ.ಜಿ. ಮೋಮಿನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

