ಗದಗ

ಪ್ರತಿಯೊಬ್ಬರೂ ರಕ್ತದಾನ ಮಾಡಿ

Published On :

ಕನ್ನಡಪ್ರಭ ವಾರ್ತೆ, ಗದಗ, ಜೂ. 17
ಜೀವನದಲ್ಲಿ ಪ್ರತಿಯೊಬ್ಬರೂ ಒಮ್ಮೆಯಾದರೂ ಉಚಿತವಾಗಿ ರಕ್ತದಾನ ಮಾಡಬೇಕು. ಅಪಘಾತಕ್ಕೊಳಗಾದವರಿಗೆ, ಶಸ್ತ್ರಚಿಕಿತ್ಸೆ ಸಮಯ ರಕ್ತ ಅವಶ್ಯಕವಾಗಿರುತ್ತದೆ. ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಬಹುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವೀರಣ್ಣ ತುರಮರಿ ಹೇಳಿದರು.
ಮಂಗಳವಾರ ನಗರದ ಡಿಜಿಎಂ ಆಯುರ್ವೇದಿಕ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಇಲಾಖೆ, ಜಿಲ್ಲಾ ರೆಡ್‌ಕ್ರಾಸ್, ಎನ್‌ಸಿಸಿ, ಎನ್ನೆಸ್ಸೆಸ್ ಘಟಕ, ಮದರ ಥೆರೇಸಾ ಹಾಗೂ ವೀರಜಿ ಪಾಲನ್ ಗಾಲಾ ನರ್ಸಿಂಗ್ ಕಾಲೇಜು, ಬಸವೇಶ್ವರ ಪ್ಯಾರಾಮೆಡಿಕಲ್ ಕಾಲೇಜು, 108 ಆರೋಗ್ಯ ಕವಚ, ಕಿ.ಮ.ಆ.ಸ ತರಬೇತಿ ಕೇಂದ್ರ, ಮಲ್ಲಸಮುದ್ರ, ಡಿಜಿಎಂ ಆಯುರ್ವೇದಿಕ್ ಕಾಲೇಜು ಮತ್ತು ಶಿಕ್ಷಣ ಇಲಾಖೆ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಡಿ.ಬಿ. ಚನ್ನಶೆಟ್ಟಿ, ಡಿಜಿಎಂ ಮಹಾವಿದ್ಯಾಲಯ ಪ್ರಾ. ಡಾ. ಜಿ.ಬಿ. ಪಾಟೀಲ ಮಾತನಾಡಿ, ರಕ್ತದಾನದ ಮಹತ್ವ ವಿವರಿಸಿದರು. ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಎಚ್. ಸಿದ್ದಪ್ಪ, ರೋಗ ನಿದಾನ ವಿಭಾಗದ ಮುಖ್ಯಸ್ಥ ಡಾ. ಬಿ.ಜಿ. ಸ್ವಾಮಿ, ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಇತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಿಂದ ರಕ್ತದಾನ ಮಹತ್ವ ಕುರಿತು ಜರುಗಿದ ಜಾಗೃತಿ ರ್ಯಾಲಿಗೆ ಡಿಎಚ್‌ಒ ಡಾ. ಡಿ.ಬಿ. ಚನ್ನಶೆಟ್ಟಿ ಚಾಲನೆ ನೀಡಿದರು. ರಕ್ತದಾನ ಮಾಡಿದಂತಹ ಹಲವು ದಾನಿಗಳಿಗೆ ಸನ್ಮಾನಿಸಲಾಯಿತು. ಐಎಂಎ ರಕ್ತನಿಧಿ ಸಂಸ್ಥೆಯ ವೈದ್ಯಾಧಿಕಾರಿ ಡಾ. ಆರ್.ಟಿ.ಪವಾಡಶೆಟ್ಟರ್ ಹಾಗೂ 108 ಆರೋಗ್ಯ ಕವಚದ ಜಿಲ್ಲಾ ವ್ಯವಸ್ಥಾಪಕ ಡಾ. ಸುನೀಲ ಅಮ್ಮಿನಗಡ ಉಪನ್ಯಾಸ ನೀಡಿದರು. ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಸ್ವಾಗತಿಸಿದರು. ಜಿಲ್ಲಾ ಮೇಲ್ವಿಚಾರಕ ಬಸವರಾಜ ಲಾಳಗಟ್ಟಿ ವಂದಿಸಿದರು.


ಪದವೀಧರರ ಬದುಕಿಗೆ ಭದ್ರತೆ
 
 ದಶಕಗಳ ಕಾಲ ಉಪನ್ಯಾಸಕನಾಗಿ, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಯಾಗಿ, ಪದವೀಧರರ ಧ್ವನಿಯಾಗಿ ಕೆಲಸ ಮಾಡಿದ ನನ್ನ ಹೋರಾಟದ ಬದುಕು, ಬಿಜೆಪಿ ಶಿಸ್ತಿನ ಸಂಘಟನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ನನಗೆ ಶ್ರೀರಕ್ಷೆಯಾಗಿದೆ. ಹೋರಾಟದ ಹಿನ್ನೆಲೆಯಿಂದ ಬಂದಿರುವ ಸಂಕನೂರ ನಮಗೆ ಒಳಿತು ಮಾಡುತ್ತಾರೆ ಎನ್ನುವ ಭರವಸೆ ಪದವೀಧರರ ಮತದಾರರಲ್ಲಿ ಮೂಡಿದೆ.
- ಹೀಗೆ ವಿಶ್ವಾಸದ ಮಾತುಗಳನ್ನಾಡಿರುವುದು ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ. 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ಕ್ಷೇತ್ರದ ಮತದಾರರು ಪ್ರಬುದ್ಧರಾಗಿದ್ದಾರೆ. ಧಾರವಾಡ, ಕಾರವಾರ, ಗದಗ ಹಾಗೂ ಹಾವೇರಿ ಜಿಲ್ಲೆಗಳು ರಾಜ್ಯದಲ್ಲಿಯೇ ವಿಶಿಷ್ಟವಾಗಿದ್ದು, ಇಲ್ಲಿನ ಪದವೀಧರರು ಈ ಬಾರಿ ಬಿಜೆಪಿ ಬೆಂಬಲಿಸುವ ಮೂಲಕ ತಮ್ಮ ಸೇವೆಗೆ ನನ್ನನ್ನು ಅಣಿಗೊಳಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ನಾನೇ ಸೂಕ್ತ: ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗಿಂತ ಪದವೀಧರರ ಸಮಸ್ಯೆಯನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ವಿರೋಧ ಪಕ್ಷಗಳ ಅಭ್ಯರ್ಥಿಗಳು ಯಾವುದೇ ಹೋರಾಟದ ಹಿನ್ನೆಲೆಯಿಂದ ಬಂದವರಲ್ಲ. ಆದರೆ ನಾನು ಉಪನ್ಯಾಸಕನಾಗಿ 30 ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇನೆ. ಹೀಗಾಗಿ ನನ್ನನ್ನೇ ಆಯ್ಕೆ ಮಾಡಿ ಎಂದು ವಿನಂತಿಸುತ್ತೇನೆ.
ಉತ್ತಮ ಪ್ರತಿಕ್ರಿಯೆ: ನನಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ನಾಯಕರು, ರಾಜ್ಯದ ಮಾಜಿ ಸಿಎಂಗಳು ಪ್ರಚಾರ ಮಾಡಿದರೆ ಗೆಲ್ಲುವುದಿಲ್ಲ ಎನ್ನುವ ವಿರೋಧ ಪಕ್ಷದ ಹೇಳಿಕೆಗೆ ನಾನೇನೂ ಉತ್ತರಿಸುವುದಿಲ್ಲ. ಆದರೆ ಅವರೆಲ್ಲ ನೇರವಾಗಿ ಪದವೀಧರ ಮತದಾರರನ್ನು ಸಂಪರ್ಕಿಸಿ ಪ್ರಚಾರ ಕಾರ್ಯ ನಡೆಸಿದ್ದಾರೆ. ನಾಲ್ಕೂ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಗಲಿರುಳು ನನ್ನ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ವಿವಿಧ ಘಟಕ, ಜನಪ್ರತಿನಿಧಿಗಳು ಶ್ರಮಿಸುತ್ತಿದ್ದಾರೆ. ಗೆಲ್ಲುವ ವಿಶ್ವಾಸ ಹೆಚ್ಚಿದೆ ಎಂದರು.
ನನ್ನ ಹೋರಾಟದ ಜೀವನವೇ ಪದವೀಧರ ಮತದಾರರಿಗೆ ಭರವಸೆಯಾಗಿದೆ. ನಾನು ಪದವೀಧರರು, ನಿರುದ್ಯೋಗಿಗಳ, ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದೆ ಎಂದೂ ಸಂಕನೂರ ಹೇಳಿದರು.
ಆದ್ಯತೆ ಏನೇನು?: ಸರ್ಕಾರ ಆರ್ಥಿಕ ಮಿತವ್ಯಯ ಹೆಸರಿನಲ್ಲಿ ಹಲವಾರು ಹುದ್ದೆಗಳಿಗೆ ನೇಮಕಾತಿ ಮಾಡುತ್ತಿಲ್ಲ. ಇದನ್ನು ತಕ್ಷಣ ತೆರವುಗೊಳಿಸಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆದ್ಯತೆ ಕೊಡಿಸುತ್ತೇನೆ. ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ ಕಾರ್ಯಭಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೊಸ ಹುದ್ದೆಗಳ ಸೃಷ್ಟಿಗೆ ವಿಶೇಷ ಒತ್ತು ನೀಡುವೆ. ವಿವಿಧ ಇಲಾಖೆಗಳಲ್ಲಿ ರದ್ದಾಗಿರುವ ಹುದ್ದೆಗಳ ಮರು ನೇಮಕಕ್ಕೆ ಸರ್ಕಾರದ ಮೇಲೆ ಒತ್ತಡ ತರುವ ಜತೆಗೆ, ನಿರುದ್ಯೋಗ ಪದವೀಧರರಿಗೆ ಸ್ವಯಂ ಉದ್ಯೋಗಕ್ಕೆ ವಿಶೇಷ ಕಾರ್ಯಪಡೆ ರಚನೆ ಮಾಡಲಾಗುವುದು. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಉದ್ಯೋಗ ಮಾಹಿತಿ ಕೇಂದ್ರ, ಪ್ರಧಾನಿ ನರೇಂದ್ರ ಮೋದಿ ಯುವಕರಿಗಾಗಿ ಹೊಸ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದರಿಂದ ಕೌಶಲ್ಯಾಭಿವೃದ್ಧಿಗೆ ವಿಶೇಷ ತರಬೇತಿ ಘಟಕ ಸ್ಥಾಪನೆ ಮಾಡಲಾಗುವುದು. ಮುಖ್ಯವಾಗಿ ಎಲ್ಲ ಪದವೀಧರರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು, ಅವರ ಸಮಸ್ಯೆಗೆ ಸ್ಪಂದಿಸಿ, ಪದವೀಧರ ಕ್ಷೇತ್ರದಲ್ಲಿ ಹೊಸ ಮನ್ವಂತರ ಪ್ರಾರಂಭಿಸುತ್ತೇನೆ ಎಂದು ಸಂಕನೂರ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.