ಮುಂಡರಗಿ ತ್ಯಾಜ್ಯಮಯ!
ಮುಂಡರಗಿ: ಮುಂಡರಗಿ ಪಟ್ಟಣದಲ್ಲಿನ ಸ್ವಚ್ಛತೆಯ ವಿಷಯವಾಗಿ ನಿರ್ಲಕ್ಷ್ಯವಾಗುತ್ತಿದೆ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಪಟ್ಟಣದಲ್ಲಿ ಸಾಕಷ್ಟು ಸ್ವಚ್ಛತೆ ಕೊರತೆ ಕಂಡು ಬರುತ್ತಿದ್ದು, ಕಸವಿಲೇವಾರಿ ಮಾಡುವ ಕೆಲಸ ನಿರ್ಲಕ್ಷ್ಯವಾಗುತ್ತಿದೆ. ಕಸ ಹಾಕುವ ಕಂಟೇನರ್‌ಗಳು ಗಬ್ಬು ವಾಸನೆ ಬೀರುತ್ತಿವೆ. ಇದರಿಂದಾಗಿ ನಿತ್ಯ ಪಟ್ಟಣದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ವಾತಾವರಣ ನಿರ್ಮಾಣವಾಗಿದೆ.
ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಜಗದ್ಗುರು ಅನ್ನದಾನೀಶ್ವರ ವಸತಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ವಸತಿ ನಿಲಯದ ಅಕ್ಕಪಕ್ಕದಲ್ಲಿ ಗಲೀಜು ಜಮಾಗೊಂಡಿದೆ. ನಿತ್ಯ ಈ ಜಾಗೆಯಲ್ಲಿ ಸಾರ್ವಜನಿಕರು ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದು, ಅದರಂತೆ ಪುರಸಭೆ ಹಾಗೂ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿಯೇ ಇರುವ ಶಾಸಕರ ಮಾದರಿ ಕೇಂದ್ರ ಶಾಲೆಯ ಎದುರಿನಲ್ಲಿಯೂ ನಿತ್ಯ ಬೆಳಗಿನ ಜಾವ 4.30 ರಿಂದ 5.30ರ ವರೆಗೆ ಮಲ ವಿಸರ್ಜನೆ ಎಗ್ಗಿಲ್ಲದೇ ನಡೆಯುತ್ತಿದೆ. ಪುರಸಭೆಯರು ಮಾತ್ರ ಇತ್ತ ತಿರುಗಿನೋಡುತ್ತಿಲ್ಲ ಎನ್ನುವುದು ಅಲ್ಲಿನ ನಿವಾಸಿಗಳ ಆರೋಪವಾಗಿದೆ.
ಕಸ ವಿಲೇವಾರಿ ಆಗುತ್ತಿಲ್ಲ: ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಪುರಸಭೆಯವರು ಸ್ವಚ್ಛಗೊಳಿಸುವ ಚರಂಡಿಗಳ ಕಸವನ್ನು ಎರಡು ದಿನಗಳಲ್ಲಿ ಅಲ್ಲಿಂದ ಎತ್ತಂಗಡಿ ಮಾಡಬೇಕು. ಆದರೆ, ಇಲ್ಲಿ ಆ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಚರಂಡಿಗಳನ್ನು ಸ್ವಚ್ಛಗೊಳಿಸಿದ ನಂತರ ಸುಮಾರು 5-6 ದಿನ ಕಳೆದರೂ ಆ ಕಸವನ್ನು ತುಂಬಿಕೊಂಡು ಹೋಗಲ್ಲ. ಅದು ಮರಳಿ ಅದೇ ಚರಂಡಿಗೆ ಬಿದ್ದು ಮತ್ತೆ ಗಬ್ಬು ವಾಸನೆ ಪ್ರಾರಂಭವಾಗುತ್ತದೆ. ಇಲ್ಲಿನ ಗದಗ-ಮುಂಡರಗಿ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕಿನ ಎದುರಿನ ಚರಂಡಿ ಸ್ವಚ್ಛಗೊಳಿಸಿ ಕನಿಷ್ಠ 15 ದಿನ ಕಳೆಯುತ್ತಾ ಬಂದಿದ್ದರೂ ಇದುವರೆಗೂ ಅಲ್ಲಿನ ಕಸವನ್ನು ತುಂಬಿಸುವಲ್ಲಿ ಪುರಸಭೆ ನಿರ್ಲಕ್ಷ್ಯ ಮಾಡುತ್ತಿದೆ. ಜೆ.ಎಚ್. ಪಟೇಲ್‌ನಗರ, ವಿದ್ಯಾನಗರ, ಬಸವೇಶ್ವರನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಳೆಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಿತ್ಯ ಮಲ-ಮೂತ್ರ ವಿಸರ್ಜನೆಯ ಜೊತೆಗೆ ಪಕ್ಕದಲ್ಲಿಯೇ ಇರುವ ತರಕಾರಿ ಮಾರುಕಟ್ಟೆಯ ಗಲೀಜನ್ನು ಇಲ್ಲಿಯೇ ಹಾಕಲಾಗುತ್ತಿದೆ. ಈ ಕುರಿತು ಅನೇಕ ಬಾರಿ ತಿಳಿಸಿದರೂ ತಾಲೂಕು ಆಡಳಿತವಾಗಲಿ, ಪುರಸಭೆಯವರಾಗಲಿ ಕಾಳಜಿವಹಿಸುತ್ತಿಲ್ಲ.
ತುಂಬಿರುವ ಚರಂಡಿಗಳು: ಪಟ್ಟಣದ ಕೊಪ್ಪಳ ರಸ್ತೆಗೆ ಹೊಂದಿಕೊಂಡಿರುವ ಡಾ. ಬಿ.ಎಸ್. ಮೇಟಿಯವರ ಮನೆಯ ಎದುರಿನಲ್ಲಿರುವ ಚರಂಡಿ ಸಂಪೂರ್ಣ ತುಂಬಿದ್ದು, ಸೊಳ್ಳೆ ಉತ್ಪಾದನೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಅದರಂತೆ ಮೆಟ್ರಿಕ್ ಪೂರ್ವ ಅಲ್ಪಸಂಖ್ಯಾತ ಬಾಲಕಿಯರ ವಸತಿ ನಿಲಯದ ಪಕ್ಕದ ರಸ್ತೆ, ಸಿಂಡಿಕೇಟ್ ಬ್ಯಾಂಕ್ ಹಿಂದಿನ ರಸ್ತೆ, ಸ್ವಾಮಿ ವಿವೇಕಾನಂದನಗರ, ಕಡ್ಲಿಪೇಟೆ, ಮಸೂತಿ ಓನಿ, ಚುರ್ಚಿಹಾಳಮಠ ಚಾಳ, ಕೊಪ್ಪಳ ವೃತ್ತದ ಗದಗ ಬಸ್ ನಿಲುಗಡೆಯ ಪಕ್ಕ ಸೇರಿದಂತೆ ಅನೇಕ ಕಡೆಗಳಲ್ಲಿ ಚರಂಡಿಗಳು ತುಂಬಿವೆ. ಅನೇಕ ಬಾರಿ ಪುರಸಭೆಗೆ ತಿಳಿಸಿದರೂ ಗಮನಹರಿಸುತ್ತಿಲ್ಲ. ಪ್ರಾರಂಭದಲ್ಲಿ ಬೆಳಗ್ಗೆ 5ಕ್ಕೆ ವಾರ್ಡ್‌ಗಳಲ್ಲಿ ಸಂಚರಿಸಿ ಸ್ವಚ್ಛತೆಗೆ ಗಮನಹರಿಸುತ್ತಿದ್ದ ಮುಖ್ಯಾಧಿಕಾರಿ ಇತ್ತೀಚೆಗೆ ವಾರ್ಡ್‌ಗಳ ಮುಖ ನೋಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕಂಟೇನರ್‌ಗಳಿಂದ ಗಬ್ಬು ವಾಸನೆ: ಪಟ್ಟಣದ 23 ವಾರ್ಡ್‌ಗಳಲ್ಲಿಯೂ ಒಂದೊಂದು ಕಸ ಹಾಕುವ ಕಂಟೇನರ್‌ಗಳನ್ನು ಇಡಲಾಗಿದೆ. ಇಲ್ಲಿನ ಕೊಪ್ಪಳ ವೃತ್ತದ ಬಸ್ ನಿಲ್ದಾಣದಲ್ಲಿಡಲಾಗಿದ್ದ ಕಂಟೇನರ್‌ನಲ್ಲಿ ಕೊಳೆತ ಹಣ್ಣುಗಳನ್ನು ಎಸೆಯುತ್ತಿರುವುದರಿಂದ ನಿತ್ಯ ಬಸ್‌ಗಳಿಗಾಗಿ ಕಾಯುವ ಸಾರ್ವಜನಿಕರು ಮೂಗಿಮುಚ್ಚಿಕೊಂಡು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಂತೆ ಪುರಸಭೆ ಪಕ್ಕದಲ್ಲಿರುವ ತರಕಾರಿ ಮಾರುಕಟ್ಟೆಯ ಎದುರಿನಲ್ಲಿರುವ ಕಂಟೇನರ್‌ನಲ್ಲಿ ನಿತ್ಯ ಮಾರಾಟ ಮಾಡಿ ಉಳಿದ ಹಾಗೂ ಕೊಳೆತ ತರಕಾರಿಗಳನ್ನು ಹಾಕುತ್ತಾರೆ. ಬೆಳಗಿನ ಜಾವ ಅಥವಾ ಮಳೆಗಾಲದ ಸಂದರ್ಭದಲ್ಲಿ ಮಳೆಯಾಗಿ ನೀರು ಬಿದ್ದಾಗ ಇದು ಬೃಂದಾವನ ಹೋಟೆಲ್ ಹಾಗೂ ವೃತ್ತದವರೆಗೂ ಗಬ್ಬು ವಾಸನೆ ಬೀರುತ್ತದೆ. ಅದರ ಪಕ್ಕದಲ್ಲಿಯೇ ಹಳೆಯ ತಹಸೀಲ್ದಾರ್ ಕಚೇರಿ ಎರಡೂ ಸೇರಿ ನಿತ್ಯ ತರಕಾರಿ ಮಾರುಕಟ್ಟೆಗೆ ಬರುವ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲಿನ ವ್ಯಾಪಾರಿಗಳೂ ಸಾಂಕ್ರಾಮಿಕ ರೋಗದ ಬಯದಲ್ಲಿಯೇ ನಿತ್ಯ ಕಾಲ ಕಳೆಯುವಂತಾಗಿದೆ.
- ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

