ತಾಪಂ ಇಒ ವರ್ಗಾಯಿಸಿ: ಸದಸ್ಯರು
- ಶಿವಕುಮಾರ ಕುಷ್ಟಗಿ
ಗದಗ: ಶಾಸಕಾಂಗ ಹಾಗೂ ಕಾರ್ಯಾಂಗ ಸಮರ್ಪಕವಾಗಿ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಕನಸು ಸಾಕಾರವಾಗುತ್ತದೆ. ಆದರೆ, ಗದಗ ತಾಪಂನಲ್ಲಿ ಕಳೆದ ಹಲವು ತಿಂಗಳಿಂದ ಆಡಳಿತ ವೈಖರಿ ತಾಳ ತಪ್ಪುತ್ತಿದೆ. ತಾಪಂ ಇಒ ಹಾಗೂ ತಾಪಂ ಸದಸ್ಯರ ಮಧ್ಯೆ ಗೊಂದಲ ಉಂಟಾಗಿದೆಯೋ ಅದನ್ನು ಅವರೇ ಹೇಳಬೇಕು. ಆದರೆ, ಇವರ ತಿಕ್ಕಾಟದ ಮಧ್ಯೆ ಅಭಿವೃದ್ಧಿ ವಂಚಿತವಾಗುತ್ತಿರುವುದು ಗದಗ ಗ್ರಾಮೀಣ ಕ್ಷೇತ್ರ.
ಏನಾಗುತ್ತಿದೆ: ಗದಗ ತಾಪಂನಲ್ಲಿ ಹಲವು ತಿಂಗಳಿಂದ ಸಮರ್ಪಕವಾಗಿ ಸಭೆಗಳೇ ನಡೆಯುತ್ತಿಲ್ಲ. ಸಭೆ ಕರೆದರೂ ವಿರೋಧ ಪಕ್ಷ ಮಾತ್ರವಲ್ಲ, ಆಡಳಿತ ಪಕ್ಷದ ಕೆಲ ಸದಸ್ಯರು ಗೈರು ಹಾಜರಾಗುವ ಮೂಲಕ ಕೋರಂ ಕೊರತೆಯಿಂದಾಗಿ ಸಭೆಗಳನ್ನು ಮುಂದೂಡಲಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ. ನಾವು ಕಾನೂನು ಪ್ರಕಾರ ಕಾರ್ಯ ನಿರ್ವಹಿಸುತ್ತೇವೆ ಎನ್ನುವ ಸಿದ್ಧ ಉತ್ತರ ಕೊಡುತ್ತಾರೆ. ಆದರೆ, ಸದಸ್ಯರು ಮಾತ್ರ ತಾಪಂನಲ್ಲಿ ಕೆಲ ಅಧಿಕಾರಿಗಳ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ.
ತಿಕ್ಕಾಟ ತಾರಕಕ್ಕೆ: ತಾಪಂ ಅಧಿಕಾರಿ ಹಾಗೂ ಸದಸ್ಯರ ನಡುವಿನ ತಿಕ್ಕಾಟ ಸದ್ಯ ತಾರಕಕ್ಕೇರಿದ್ದು, ತಾಪಂ ಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಬಿ. ರೇವಣ್ಣ ಅವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ 11 ಸದಸ್ಯರು 13-5-2014ರಂದು ಗ್ರಾಮೀಣಾಭಿವೃದ್ದಿ ಸಚಿವ ಎಚ್.ಕೆ. ಪಾಟೀಲ, ಪ್ರಧಾನ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಮತ್ತು ಗದಗ ಜಿಪಂ ಸಿಇಒಗೆ ಲಿಖಿತ ಪತ್ರ ಬರೆದಿರುವುದು ಮತ್ತೊಂದು ವಿಶೇಷ.
ಪತ್ರದಲ್ಲೇನಿದೆ: ತಾಪಂ ಅಧಿಕಾರಿ ಬಿ. ರೇವಣ್ಣ ಅವರ ವರ್ತನೆ ನಮಗೆ ಸಹಿಸಲಾಗುತ್ತಿಲ್ಲ. 2013-14ನೇ ಸಾಲಿನಲ್ಲಿ ಅಭಿವೃದ್ಧಿಗಾಗಿ ಬಂದ ಕೋಟಿ ರು. ಅನುದಾನದಲ್ಲಿ ಸಮರ್ಪಕ ಮತ್ತು ನಿಗದಿತ ಸಮಯದಲ್ಲಿ ಬಳಕೆ ಮಾಡದೇ ರು. 20 ಲಕ್ಷ ಅನುದಾನ ಮೊಕಟುಗೊಳಿಸಿದ್ದಾರೆ.
2013-14ನೇ ಸಾಲಿನ 13ನೇ ಹಣಕಾಸು ಆಯೋಗದ ಅನುದಾನವು ಸಂಬಂಧಪಟ್ಟ ಮೇಲಧಿಕಾರಿಗಳಿಂದ ಅನುಮೋದನೆ ಆಗಿ ಬಂದು ಹಲವಾರು ತಿಂಗಳು ಗತಿಸಿದರೂ ಅನುದಾನವನ್ನು ಅಭಿವೃದ್ಧಿಗೆ ಬಳಸುವ ಕ್ರಮ ತೆಗೆದುಕೊಳ್ಳುತ್ತಿಲ್ಲ. ತಾಪಂಗೆ ಆದಾಯ ತಂದುಕೊಡುವ ಮಳಿಗೆಗಳ ಬಾಡಿಗೆ ವಸೂಲಾತಿ ಮಾಡುತ್ತಿಲ್ಲ. ತಾಪಂ ಸದಸ್ಯರ ಗಮನಕ್ಕೆ ತರದೇ ಅಭಿವೃದ್ಧಿ ಅನುದಾನದಲ್ಲಿ ಮನಬಂದಂತೆ ಕಾಮಗಾರಿ ನಿರ್ವಹಿಸುತ್ತಾರೆ. ಸರ್ಕಾರದಿಂದ ಸದಸ್ಯರ ಮಾಹಿತಿಗಾಗಿ ಬರುವ ಯಾವುದೇ ಸುತ್ತೋಲೆಗಳನ್ನು ನೀಡಲು ಹಿಂದೇಟು ಹಾಕುವುದು. ಈ ಬಗ್ಗೆ ಪ್ರಶ್ನಿಸಿದರೆ ಲಿಖಿತವಾಗಿ ಕೇಳಿದರೆ ಮಾಹಿತಿ ಕೊಡಲು ಸಾಧ್ಯ ಎನ್ನುತಾರೆ.
ಮುಖ್ಯವಾಗಿ ಮಹಿಳಾ ಸದಸ್ಯರೊಂದಿಗೆ ಏಕವಚನದಲ್ಲಿ ಮಾತನಾಡುತ್ತಾರೆ. ಮಹಿಳಾ ಸದಸ್ಯರಿಗೆ ಮುಜುಗುರವಾಗುತ್ತಿದೆ. ತಕ್ಷಣ ಇಒ ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ಸದಸ್ಯರೆಲ್ಲರೂ ಸಾಮೂಹಿಕ ರಾಜಿನಾಮೆ ನೀಡಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

