ಗದಗ

ಗದಗದಲ್ಲಿ ಸಾವಯವ ಮಾವು ಮೇಳ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 4
ಗದಗ ನಗರದಲ್ಲಿ ಮೊದಲ ಬಾರಿಗೆ ರೈತರು ಬೆಳೆದ ಮಾವುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಮಾವು ಮೇಳವನ್ನು ಎಪಿಎಂಸಿ ಆವರಣದ ಟೆಂಡರ್ ಹಾಲ್‌ನಲ್ಲಿ ಹುಲಕೋಟಿ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬಹುಬೆಳೆ ಉತ್ಪಾದಕರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದೆ. ರಾಸಾಯನಿಕಗಳ ಬಳಕೆ ಇಲ್ಲದೇ ಮಾಗಿದ ಮಾವು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಮೇಳ ಆಯೋಜನೆ.
ಈ ಮಾವು ಇನ್ನಿತರ ಮಾವುಗಳಿಗಿಂತ ಭಿನ್ನವಾಗಿದ್ದು, ವಿಶೇಷತೆ ಏನೆಂದರೆ ಹುಲಕೋಟಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿರುವ ಮಸಾರಿ ಭೂಮಿಯಲ್ಲಿ ರೈತರು ಸಾವಯವ ಗೊಬ್ಬರ ಬಳಕೆ ಮಾಡಿ ಈ ಹಣ್ಣು ಬೆಳೆದಿದ್ದು ಇವು ಅತ್ಯಂತ ರುಚಿಯಾಗಿವೆ. ಇವುಗಳು ಮಾಗಲು ಸಹಿತ ಯಾವುದೇ ರಾಸಾಯನಿಕದ ಬಳಕೆ ಮಾಡಿಲ್ಲ. ಸದ್ಯ ಮಾರುಕಟ್ಟೆ ಲಭ್ಯವಾಗುವ ಮಾವಿನ ಹಣ್ಣಿನಲ್ಲಿ ಕಾರ್ಬೇಟ್ ರಸಾಯನ ಬಳಕೆ ಮಾಡಿರುವುದರಿಂದ ಅದು ಆರೋಗ್ಯ ಹಾನಿಕರ, ಈ ಮಾವು ಮೇಳ ಗುಣಮಟ್ಟದ ಮತ್ತು ಆರೋಗ್ಯಕ್ಕೆ ಸಹಕಾರಿಯಾದ ಮಾವಿನ ಮೇಳವಾಗಿದೆ.
ತಿಂಗಳಕಾಲ ನಡೆಯುತ್ತೆ: ಈ ಮಾವು ಮೇಳವು ಮೇ 4ರಿಂದ ಒಂದು ತಿಂಗಳ ಕಾಲ ನಡೆಯಲಿದ್ದು, ಮೇಳದಲ್ಲಿ ಹುಲಕೋಟಿ ಆಪೋಸ್ ಯಥೇಚ್ಛವಾಗಿ (ಹುಲಕೋಟಿ ಕೆ.ವಿ.ಕೆ ಅಭಿವೃದ್ಧಿಪಡಿಸಿದ ತಳಿ) ಲಭ್ಯವಿದೆ. ಇದರೊಟ್ಟಿಗೆ ಮಲಗೋವಾ, ಕೇಸರ, ಸಿಂಧೂರ, ಲಾಂಗ್ರೆ, ಮಲ್ಲಿಕಾ, ದಶೇರಿ, ಬೆಂಗಳೂರಾ, ಹಿಮಾಯತ್, ಬದಾಮ ಮುಂತಾದ ಜಾತಿಯ ಮಾವುಗಳು ಇಲ್ಲಿ ಲಭ್ಯ. ಒಂದು ತಿಂಗಳ ಕಾಲ ನಡೆಯುವ ಈ ಮೇಳವು ಸಾರ್ವಜನಿಕರಿಗೆ ಗುಣಮಟ್ಟದ ಮಾವು ಪೂರೈಕೆ ಮಾಡುವಲ್ಲಿ ಯಶಸ್ವಿಯಾಗಲಿದೆ.
ನೇರ ಮಾರಾಟ: ಗದಗ ಪರಿಸರದಲ್ಲಿ ಇದೊಂದು ಹೊಸ ಪ್ರಯತ್ನವಾಗಿದ್ದು, ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಮೊದಲ ದಿನ ಈ ಮೇಳಕ್ಕೆ 3 ಟನ್‌ನಷ್ಟು ಮಾವು ರು. 100 ಕೆಜಿ ಯಂತೆ ಮಾರಾಟವಾಗಿದ್ದು ವಿಶೇಷ. ಗ್ರಾಹಕರ ಈ ಪ್ರತಿಕ್ರಿಯೆ ರೈತರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ. ಈ ಮೇಳದಲ್ಲಿ 10 ಕೌಂಟರ್ ಪ್ರಾರಂಭಿಸಲಾಗಿದೆ. ರೈತರು ಮತ್ತು ಗ್ರಾಹಕರ ಮಧ್ಯೆ ನೇರ ಮಾರಾಟ ವ್ಯವಸ್ಥೆಗೆ ಅನುಕೂಲ ಕಲ್ಪಿಸುವಲ್ಲಿ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರ ಕೊಂಡಿಯಾಗಿ ಕೆಲಸ ಮಾಡುತ್ತಿದ್ದು, ಇದರಿಂದ ರೈತನಿಗೆ ಉತ್ತಮ ಧಾರಣೆ, ಗ್ರಾಹಕನಿಗೆ ಗುಣಮಟ್ಟದ ಹಣ್ಣು ಲಭ್ಯವಾಗುತ್ತಿವೆ. ಮಧ್ಯವರ್ತಿಗಳ (ದಲ್ಲಾಳಿ) ಹಾವಳಿಯಿಂದ ಮುಕ್ತಿ ಸಿಕ್ಕಿದ ಹಿನ್ನೆಲೆಯಲ್ಲಿ ಇಬ್ಬರೂ ಖುಷಿಯಾಗಿದ್ದಾರೆ.
- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.