ಬರದ ನಾಡಲ್ಲಿ ಭಾಗೀರಥಿ ಉದಯ!
ಕನ್ನಡಪ್ರಭ ವಾರ್ತೆ, ಗದಗ, ಮೇ 7
ಗದಗ ಜಿಲ್ಲೆ ಬರದ ನಾಡು, ಇಲ್ಲಿನ ಅಂತರ್ಜಲ ಪ್ರಮಾಣ ತೀವ್ರವಾಗಿ ಕುಸಿದಿದೆ. 250 ಅಡಿ ಕೊರೆದರೂ ಕೊಳವೆಬಾವಿಯಲ್ಲಿ ನೀರು ಲಭ್ಯವಾಗುತ್ತಿಲ್ಲ ಎನ್ನುವ ಮಾತು ನೀವೆಲ್ಲಾ ಕೇಳಿದಿದ್ದೀರಿ... ಆದರೆ, ಅದಕ್ಕೆ ಅಪವಾದ ಎನ್ನುವ ರೀತಿಯಲ್ಲಿ ರೇಲ್ವೆ ಹಳಿ ಹಾಕುವ ಕಾಮಗಾರಿಗಾಗಿ ಬೇಕಾಗುವ ಮಣ್ಣು ತೆಗೆಯಲು ಅಗೆದ ದೊಡ್ಡ ಮಣ್ಣಿನ ಗುಂಡಿಯಲ್ಲಿ ಅಂತರ್ಜಲ ಉಕ್ಕಿದ್ದು, ಬರದ ನಾಡಲ್ಲಿ ಭಾಗೀರಥಿಯ ದರ್ಶನವಾಗಿದೆ.
ಸದ್ಯ ಹೊಸಪೇಟೆ ಹುಬ್ಬಳ್ಳಿ ಜೋಡು ಹಳಿ ಮಾರ್ಗದ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಕಾಮಗಾರಿಗೆ ಬೇಕಾಗುವ ಮಣ್ಣು (ಗರಸು) ಪಡೆಯುವ ನಿಟ್ಟಿನಲ್ಲಿ ಗುತ್ತಿಗೆದಾರರು ಗದಗನಿಂದ ಕೊಪ್ಪಳಕ್ಕೆ ಸಾಗುವ ರೈಲು ಮಾರ್ಗದ ಕಣಗಿನಹಾಳ ಗ್ರಾಮದತ್ತ 7 ಕಿ.ಮೀ. ತೆರಳಿದರೆ ಗದ್ದಿ ಹಳ್ಳ ಬರುತ್ತದೆ. ಈ ಹಳ್ಳದ ಪಕ್ಕದಲ್ಲಿಯೇ ಹೊಲವನ್ನು ಲೀಸ್ ಆಧಾರದಲ್ಲಿ ಪಡೆದು ಜೆಸಿಬಿಗಳ ಮೂಲಕ ಮಣ್ಣು ಅಗೆದಿದ್ದಾರೆ. ಈ ರೀತಿ ಮಣ್ಣಿಗಾಗಿ ಅಗದೆ ದೊಡ್ಡ ಮಣ್ಣಿನ ಗುಂಡಿಗಳೇ ಇಂದು ಯುವಕರ ಹಾಗೂ ಮಕ್ಕಳ ಮೋಜಿನ ಈಜು ತಾಣವಾಗಿ ಮಾರ್ಪಟ್ಟಿದೆ.
40 ಅಡಿಗೆ ನೀರು: ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನೀರಿನ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ. 250 ಅಡಿ ಆಳ ಭೂಮಿ ಕೊರೆದರೂ ನೀರು ಸಿಗುತ್ತಿಲ್ಲ. ಆದರೆ, ಈ ಮಣ್ಣಿನ ಗುಂಡಿಯಲ್ಲಿ ಭೂಮಿಯ ಮೇಲ್ಮಟ್ಟದಿಂದ 40 ಅಡಿ ಅಳದವರೆಗೆ ಮಣ್ಣನ್ನು ಅಗೆಯಲಾಗಿದೆ. ಕೇವಲ 40 ಅಡಿಗೆ ಅಂತರ್ಜಲ ಪ್ರಾರಂಭವಾಗಿದೆ. ಮೊದ ಮೊದಲು ಭೂಮಿ ಕೇವಲ ತೇವಾಂಶದಿಂದ ಕೂಡಿದಂತೆ ಭಾಸವಾಗಿದೆ. ದಿನಕಳೆದಂತೆಲ್ಲಾ ನೀರು ಹೊರ ಬರುತ್ತಾ ಇಂದು 15ರಿಂದ 20 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮಣ್ಣಿನ ಅಗೆತ ನಿಲ್ಲಿಸಲಾಗಿದೆ.
ಮೋಜಿನ ತಾಣ: ಬೆಟಗೇರಿ ಹಾಗೂ ಗದಗ ನಗರದ ನೂರಾರು ಯುವಕರು ಮಕ್ಕಳು ನಿತ್ಯವೂ ಸೈಕಲ್ ಹಾಗೂ ದ್ವಿಚಕ್ರ ವಾಹನಗಳ ಮೂಲಕ ಈ ಬೃಹತ್ ಗುಂಡಿಗಳಿಗೆ ತೆರಳಿ ಅಲ್ಲಿ ಈಜುತ್ತಿದ್ದಾರೆ. ಭಾನುವಾರವಂತೂ ಇದೊಂದು ಪಿಕ್ನಿಕ್ ಸ್ಪಾಟ್ ಆಗಿ ಪರಿವರ್ತನೆಯಾಗಿದ್ದು, ಊಟ, ಮದ್ಯ ಸೇರಿದಂತೆ ಮೋಜಿಗೆ ಬೇಕಾಗುವ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗಿ ನೀರಿನಲ್ಲಿ ಈಜಾಡಿ ಮಜಾ ಮಾಡುತ್ತಿದ್ದಾರೆ.
ವಿಸ್ಮಯ: ಅಷ್ಟೊಂದು ಆಳವಾಗಿ ಕೊಳವೆಬಾವಿ ಕೊರೆದರೂ ನೀರು ಲಭ್ಯವಾಗುತ್ತಿಲ್ಲ. ಆದರೆ, ಈ ಸ್ಥಳದಲ್ಲಿ ಮಾತ್ರ ಅದೇಕೆ ಇಷ್ಟು ಕಡಿಮೆ ಆಳದಲ್ಲಿ ಅಂತರ್ಜಲ ಲಭ್ಯವಾಗಿದೆ ಎನ್ನುವುದು ಎಲ್ಲರಲ್ಲಿಯೂ ವಿಸ್ಮಯಕ್ಕೆ ಕಾರಣವಾಗಿದೆ. ಕೆಲವರು ಇದು ದೇವರ ಕೃಪೆ ಎಂದರೆ ಮತ್ತೆ ಕೆಲವರು ಪಕ್ಕದಲ್ಲಿಯೇ ಹಳ್ಳವು ಹಲವಾರು ವರ್ಷಗಳ ಕಾಲ ಹರಿಯುತ್ತಿರುವುದರಿಂದ ಇಲ್ಲಿ ಅಂತರ್ಜಲ ಮೇಲ್ಮಟ್ಟದಲ್ಲಿದೆ. ಇದರ ಸದುಪಯೋಗವಾಗಬೇಕು ಎನ್ನುತ್ತಾರೆ.
ಅನುಕೂಲ: ಪ್ರಸಕ್ತ ಬೇಸಿಗೆಯಲ್ಲಿ ರೈತರ ಜಮೀನುಗಳಲ್ಲಿರುವ ಎಲ್ಲಾ ಸಣ್ಣ ಸಣ್ಣ ಕೆರೆಗಳು ಬತ್ತಿ ಹೋಗಿದ್ದರಿಂದ ಈ ಮಣ್ಣಿನ ಗುಂಡಿಯಲ್ಲಿ ಅಂತರ್ಜಲ ಉಕ್ಕಿ ನೀರು ಲಭ್ಯವಾಗಿದೆ. ಇದು ಕುರಿಗಾಹಿಗಳಿಗೆ, ಬೇಸಿಗೆಯಲ್ಲಿ ಹೊಲದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ನೀರಿಗೆ ಹೆಚ್ಚಿನ ಅನುಕೂಲವಾಗಿದೆ. ಇದರೊಟ್ಟಿಗೆ ಬೇಸಿಗೆಯ ಬಿಲಿಸಿನಿಂದ ಬಸವಳಿದಿದ್ದ ಯುವಕರಿಗೆ ಈಜಲು ಹೆಚ್ಚಿನ ಅನುಕೂಲವಾಗಿದೆ.
ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

