ಗದಗ

ಸೌಲಭ್ಯವಿಲ್ಲದೆ ನರಕಯಾತನೆ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 11
ಮೂಲ ಸೌಲಭ್ಯ ದೊರೆಯದೇ ದಶಕದಿಂದ ನರಕಯಾತನೆಯಲ್ಲಿ ಬದುಕು ಸಾಗಿಸುತ್ತಿರುವ ಪಟ್ಟಣದ ಜಿ.ಎಸ್. ಪಾಟೀಲ ಬಡಾವಣೆ ನಿವಾಸಿಗಳ ಗೋಳಿಗೆ ಇದೀಗ ಶಾಸಕ ಜಿ.ಎಸ್. ಪಾಟೀಲರಿಂದ ಮುಕ್ತಿ ನೀಡಬೇಕಿದೆ.
ಹೌದು, ಜಿಲ್ಲೆಯ ವಾಣಿಜ್ಯ ನಗರಿ ಖ್ಯಾತಿಯ ಗಜೇಂದ್ರಗಡ ಪಟ್ಟಣದ ಅತ್ಯಂತ ಹಿಂದುಳಿದ ಬಡ ಕುಟುಂಬಗಳು ವಾಸಿಸುವ ಜಿಎಸ್ಪಿ ನಗರ ಹತ್ತು ವರ್ಷದಿಂದ ತಾರತಮ್ಯಕ್ಕೆ ಒಳಪಟ್ಟಿದೆ. ಕುಡಿಯಲು ಉಪ್ಪು ನೀರು, ಸೂಕ್ತ ಚರಂಡಿ ವ್ಯವಸ್ಥೆ ಜತೆ ಮೂಲ ಸೌಲಭ್ಯ ವಂಚಿತವಾಗಿದೆ. ಬಡಾವಣೆ ನಿವಾಸಿಗಳ ಆರ್ತನಾದ ಅರಣ್ಯರೋದನವಾಗಿದೆ. ಕಳೆದ 10 ವರ್ಷದಿಂದ ಅನುಭವಿಸುತ್ತಿರುವ ವನವಾಸಕ್ಕೆ ಈಗಲಾದರೂ ಮುಕ್ತಿ ದೊರೆಯಬಹುದೇ ಎಂದು ನಿರೀಕ್ಷಿಸುತ್ತಿದ್ದಾರೆ.
ಮೂಲ ಸೌಲಭ್ಯದ ಕೊರತೆ: ಸ್ಥಳೀಯ ಯಲಬುರ್ಗಾ ರಸ್ತೆಗೆ ಹೊಂದಿಕೊಂಡ ಜಿ.ಎಸ್. ಪಾಟೀಲ ನಗರ ಬಿಜೆಪಿ ಆಡಳಿತದಲ್ಲಿ ತಾತ್ಸಾರಕ್ಕೊಳಗಾಗಿತ್ತು. ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ವಾಲ್ಮೀಕಿ ಅಂಬೇಡ್ಕರ್ ಅವಾಸ್ ಯೋಜನೆಯಡಿಯಲ್ಲಿ 125 ಆರ್‌ಸಿಸಿ ಮನೆಗಳನ್ನು ನಿರ್ಮಿಸಲಾಗಿದೆ. ಗಂಡ ಹೆಂಡತಿ ಜಗಳ ಮಧ್ಯೆ ಕೂಸು ಬಡವಾಯಿತು ಅನ್ನುವ ಹಾಗೆ ಸ್ಥಳೀಯ ಪುರಸಭೆ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳ ಪರಸ್ಪರ ದೋಷಾರೋಪ ತಿಕ್ಕಾಟದ ಮಧ್ಯೆ ಸ್ಥಳೀಯ ಜಿ.ಎಸ್. ಪಾಟೀಲ ನಗರ ನಿವಾಸಿಗಳು ಮೂಲ ಸೌಲಭ್ಯದಿಂದ ವಂಚಿತರಾಗಿ ದುಸ್ಥಿತಿಯಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ.
ಅಭಿವೃದ್ಧಿಗೆ ತಾರತಮ್ಯ: ಪಟ್ಟಣದ ಬಹುತೇಕ ಎಲ್ಲ ಬಡಾವಣೆಯಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಆದರೆ ಜಿ.ಎಸ್ಪಿ ನಗರಕ್ಕೆ ಸಂಚರಿಸುವ ಮುಖ್ಯ ರಸ್ತೆಗೆ ಡಾಂಬರೀಕರಣವಾಗದೇ ಮಣ್ಣಿನ ರಸ್ತೆ ಗತಿಯಾಗಿದೆ. ಪಟ್ಟಣದ ಎಲ್ಲ ಬಡಾವಣೆ ನಿವಾಸಿಗಳು ಪುರಸಭೆ ಸರಬರಾಜು ಮಾಡುವ ಕುಡಿಯುವ ನೀರು ಸೇವಿಸಿದರೆ, ಈ ಬಡಾವಣೆಗೆ ಮಾತ್ರ ಪೂರೈಕೆಯಾಗುವ ಉಪ್ಪು ನೀರು ಕುಡಿಯುವ ದುರ್ದೈವ ಇದೆ. ಹಲವು ತಿಂಗಳಿಂದ ಚರಂಡಿ ಸ್ವಚ್ಚವಾಗದೇ ಮಹಿಳೆಯರು, ಮಕ್ಕಳು, ವೃದ್ಧರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಪರದಾಡುತ್ತಿದ್ದರೂ, ಯಾರೂ ಕೇಳುವರಿಲ್ಲದಂತಾಗಿದೆ.
ತುಕ್ಕು ಹಿಡಿದ ಬೊರ್‌ವೆಲ್: ಜಿ.ಎಸ್ಪಿ ನಗರ ನಿರ್ಮಿಸುವಾಗ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಬೊರ್‌ವೆಲ್ ಕೊರೆಸಲಾಗಿದೆ. ಸರ್ಕಾರ ಲಕ್ಷಾಂತರ ಹಣ ವೆಚ್ಚ ಮಾಡಿ ಕೊರೆದಿರುವ ಕೊಳವೆ ಬಾವಿಯಲ್ಲಿ ಸಬ್ ಮರ್ಸಿಬಲ್ ಪಂಪಸೆಟ್ ಮೋಟರ್ ಜತೆ ವಿದ್ಯುತ್ ಅಳವಡಿಸಲಾಗಿದೆ. ಇವು ಯಾವುದನ್ನು ಬಳಸಿಕೊಳ್ಳದೇ ಹಾಗೇ ಬಿಡಲಾಗಿದೆ. ಇದರಿಂದ ಪೈಪುಗಳು, ಜತೆ ಇತರ ಕಬ್ಬಿಣ ಸಾಮಾನುಗಳು ತುಕ್ಕು ಹಿಡಿದು ಹಾಳಾಗುತ್ತಿವೆ.  
ಕೇಳದ ಆರ್ತನಾದ: ಈ ಬಡಾವಣಗೆ ಮೂಲ ಸೌಲಭ್ಯ ಕಲ್ಪಿಸಲು ಪುರಸಭೆಗೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಗೆ 9 ವರ್ಷದಿಂದ ಲಿಖಿತ ಮನವಿ ನೀಡಲಾಗಿದೆ. ಜತೆಗೆ ಹಲವು ಸಂಘಟನೆಗಳು ಮೂಲ ಸೌಲಭ್ಯ ಒದಗಿಸಲು ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿಯ ಸಮಸ್ಯೆಗಳ ನಿವಾರಣೆ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳ ಕೇಳಿದರೆ ಪುರಸಭೆಯವರನ್ನು ಕೇಳಿ ಎಂದು ಸಬೂಬು ನೀಡುತ್ತಾರೆ. ಪುರಸಭೆಯವರನ್ನು ಕೇಳಿದರೆ ಇನ್ನೂವರೆಗೂ ಬಡಾವಣೆ ನಿರ್ಮಾಣ ಬಗೆಗೆ ಹಸ್ತಾಂತರ ಮಾಡಿಲ್ಲ ಎಂದು ಪರಸ್ಪರ ಕೈ ಚೆಲ್ಲುವ ಮಾತನಾಡುತ್ತಾರೆ ಎಂದು ನಿವಾಸಿಗಳು ಅಪಾದಿಸಿದರು.
ಹುಸಿಯಾದ ಭರವಸೆಗಳು: ಗಜೇಂದ್ರಗಡ ಜಿ.ಎಸ್ಪಿ ನಗರಕ್ಕೆ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮಲು, ಸಿ.ಸಿ. ಪಾಟೀಲ ನಿವಾಸಿಗಳ ಅಳಲನ್ನು ಆಲಿಸಿ, ಒಂದು ತಿಂಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವ ಜತೆ ಹಕ್ಕು ಪತ್ರಗಳನ್ನು ನೀಡಲಾಗುದೆಂದು ನೀಡಿರುವ ಭರಸೆಗಳು ಹುಸಿಯಾಗಿವೆ. ಗುಡ್ಡದಿಂದ ಹರಿದು ಬರುವ ಮಳೆ ನೀರಿನಿಂದ ಜಲಾವೃತವಾಗಿದ್ದ ಜಿ.ಎಸ್ಪಿ ನಗರದ ವಾಂಬೆ ಮನೆಗಳ ನಿವಾಸಿಗಳು ನರಕಯಾತನೆ ಬದುಕಿಗೆ ಸರ್ಕಾರ ಸೂಕ್ತ ಪರಿಹಾರೋಪಾದಿ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಿದೆ ಎಂದು ಅವರು ನೀಡಿರುವ ಅಶ್ವಾಸನೆ ಹುಸಿಯಾಗಿವೆ. ಜಿ.ಎಸ್ಪಿ ನಗರಕ್ಕೆ ಹಲವಾರು ಸಚಿವರು, ಮಾಜಿ, ಹಾಲಿ ಶಾಸಕರು ಮತ್ತು ಜಿಲ್ಲಾದಿಕಾರಿಗಳು ಬಂದು ನೀಡಿದ ಅಶ್ವಾಸನೆಗಳು ಇದುವರೆಗೂ ಈಡೇರದೆ ನಿವಾಸಿಗಳು ನಿರಾಸೆಗೊಂಡಿದ್ದಾರೆ.

ಡಿ.ಜಿ. ಮೋಮಿನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.