ಶೌಚಾಲಯ ಕೊಳಚೆ ಕಿರಿಕಿರಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ. ಮೇ 14
ಪಟ್ಟಣದ ಹೊಸ ಬಸ್ ನಿಲ್ದಾಣ ಹತ್ತಿರವಿರುವ ಬಸವೇಶ್ವರ ನಗರದ ಜನರು ಶೌಚಾಲಯ ತಾಜ್ಯದಿಂದ ಉಂಟಾಗುವ ಕೊಳಚೆಯುಕ್ತ ನೀರಿನಿಂದ ವಾಸನೆ ಬೀರುತ್ತಿದ್ದು, ಇಲ್ಲಿನ ಜನರು ಮೂಗು ಮುಚ್ಚಿಕೊಂಡು ಹಾಗೂ ಮನೆಯ ಎಲ್ಲ ಕಿಡಕಿ, ಬಾಗಿಲುಗಳನ್ನು ಮುಚ್ಚಿಕೊಂಡು ಕೂರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದ ಹೊಸ ಬಸ್ ನಿಲ್ದಾಣ ಪಕ್ಕದಲ್ಲಿರುವ ಬಸವೇಶ್ವರ ನಗರದಲ್ಲಿ ಯಾವುದೇ ಮೂಲ ಸೌಲಭ್ಯಗಳು ಇಲ್ಲವಾಗಿವೆ. ಸರಿಯಾದ ರಸ್ತೆಗಳಿಲ್ಲ, ಚರಂಡಿಗಳಿಲ್ಲ, ಇದರಿಂದ ಇಲ್ಲಿನ ನಾಗರಿಕರು ಪರದಾಡುವಂತಾಗಿದೆ. ಜತೆಗೆ ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳ ಕೊಳಚೆ ನೀರು ಚೆಂಬರ್‌ನಿಂದ ಹೊರಗೆ ಹರಿದು ಬಂದು ಮೂಲೆಯಲ್ಲಿ ಶೇಖರಣೆಯಾಗಿ ಗಬ್ಬು ನಾರುತ್ತಿದೆ.
ಇದರಿಂದಾಗಿ ಬಸವೇಶ್ವರ ನಗರ ಸುತ್ತಲಿನ ಜನರಿಗೆ ಕಿರಿಕಿರಿ ಉಂಟಾಗಿದೆ. ಶೌಚಾಲಯದ ಕೊಳಚೆ ಬಗ್ಗೆ ಸಾಕಷ್ಟು ಬಾರಿ ಡಿಪೋ ಮ್ಯಾನೇಜರ್ ಹಾಗೂ ಗದಗ ಡಿವಿಜಿನಲ್ ಮ್ಯಾನೇಜರಿಗೆ ಲಿಖಿತ ದೂರು ಸಲ್ಲಿಸಲಾಗಿದ್ದು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೆ ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಪಟ್ಟಣದ ಡಿಪೋ ಮ್ಯಾನೇಜರ್ ಇದಕ್ಕೂ ನಮಗೂ ಯಾವುದೇ ಸಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ವಾಸನೆಯಿಂದಾಗಿ ಮನೆಗಳಿಗೆ ಬೀಗರು, ಸಂಬಂಧಿಕರು ಬರುತ್ತಿಲ್ಲ ಎಂದು ಶಿಕ್ಷಕ ಎಚ್.ಎಫ್. ನದಾಫ್ ನೊಂದು ನುಡಿಯುತ್ತಾರೆ.
ಬಸ್ ನಿಲ್ದಾಣದಲ್ಲಿರುವ ಶೌಚಾಲಯದಿಂದ ಹೊರ ಬರುತ್ತಿರುವ ಕೊಳಚೆಯುಕ್ತ ನೀರು ಇಂಗಿ ಹೋಗುವಂತೆ ಚೆಂಬರ್‌ಗಳ ದುರಸ್ತಿ ಮಾಡಿಸಬೇಕು ಹಾಗೂ ಮಲ, ಮೂತ್ರ ವಾಸನೆ ಬಾರದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಸವೇಶ್ವರ ನಗರದ ಎಮ್.ಸಿ. ಬಣಕಾರ, ಸಿ.ಜೆ. ಹಿರೇಮಠ, ಎಂ.ಎಫ್. ಮೋದಿನವರ, ಎ.ಎ. ಪಠಾಣ, ಎಸ್.ಬಿ. ಪೂಜಾರ್, ಎ.ವೈ. ತಾಡಪತ್ರಿ, ಎಸ್.ಐ. ಆಲೂರ ಇತರರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

