ಅಹ್ಮದ್ ಸೋಲಿಗೆ ಯಾರು ಹೊಣೆ?
ಕನ್ನಡಪ್ರಭ ವಾರ್ತೆ, ಗದಗ, ಮೇ 17
ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎನ್ನುವ ವಿಚಾರದಲ್ಲಿ ರಾಜ್ಯದಲ್ಲಿಯೇ ಅತ್ಯಂತ ಕುತೂಹಲ ಕೆರಳಿಸಿದ್ದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಭಾರಿ ಅಂತರದ ಸೋಲು ಅನುಭವಿಸಿದ್ದಾರೆ. ಈ ಸೋಲಿನ ಹೊಣೆಯನ್ನು ಪಕ್ಷ ಯಾರ ಹೆಗಲಿಗೆ ಹೊರಿಸುತ್ತದೆ? ಅಥವಾ ಟಿಕೆಟ್ ಹಂಚಿಕೆ ವಿಳಂಬವೇ ಸೋಲಿಗೆ ಕಾರಣ ಎನ್ನುವ ತೀರ್ಮಾನಕ್ಕೆ ಬರುತ್ತದೆಯೇ ಎನ್ನುವ ಕುರಿತು ಈಗ ಗದಗ ಜಿಲ್ಲೆಯಲ್ಲಿ ಚರ್ಚೆ ಆರಂಭವಾಗಿದೆ.
ಬೇಸರಗೊಂಡಿದ್ದಾರಾ ಮತದಾರರು?: 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 4 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಇದು ಪಕ್ಷದ ಸಾಧನೆಗೆ ದೊರತೆ ಮನ್ನಣೆ ಎಂದು ವರಿಷ್ಠರು ಹೇಳಿಕೊಂಡಿದ್ದರು. ಹಾಗಾದರೆ ವಿಧಾನಸಭೆ ಚುನಾವಣೆ ಮುಗಿದು ವರ್ಷ ಪೂರ್ಣಗೊಳ್ಳುವ ಮೊದಲೇ ಪಕ್ಷದ ಮೇಲೆ ಜನರು ಇಟ್ಟಿದ್ದ ಭರವಸೆ ಹುಸಿಯಾಯಿತೇ? ಹೀಗಾಗಿಯೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿದರೇ? ಎನ್ನುವ ವಿಷಯ ಕೂಡ ಚರ್ಚೆಯ ಪ್ರಮುಖ ಅಂಶವಾಗಿದೆ.
ಮತಗಳ ವಿವರ: ಈ ಲೋಕಸಭಾ ಚುನಾವಣೆಯಲ್ಲಿ ಶಿರಹಟ್ಟಿ ಕ್ಷೇತ್ರದಲ್ಲಿ 1,33,644 ಮತಗಳು ಚಲಾವಣೆಯಾಗಿವೆ. ಅದರಲ್ಲಿ ಬಿಜೆಪಿಗೆ 69,894, ಕಾಂಗ್ರೆಸ್ಗೆ 54,415 ಮತಗಳು ಬಂದಿವೆ. ಬಿಜೆಪಿ ಹೆಚ್ಚುವರಿಯಾಗಿ 15,479 ಮತಗಳನ್ನು ಪಡೆದಿದೆ.
ಗದಗ ವಿಧಾನಸಭಾ ಕ್ಷೇತ್ರದಲ್ಲಿ 1,34,616 ಮತಗಳು ಚಲಾವಣೆಯಾಗಿದ್ದು, ಬಿಜೆಪಿಗೆ 70,217, ಕಾಂಗ್ರೆಸ್ಸಿಗೆ 56,249 ಮತಗಳು ಬಂದಿವೆ. ರೋಣ ವಿಧಾನಸಭಾ ಕ್ಷೇತ್ರದಲ್ಲಿ 1,41,662ರಲ್ಲಿ ಬಿಜೆಪಿಗೆ 71,019, ಕಾಂಗ್ರೆಸ್ಗೆ 59,724 ಮತಗಳು ಲಭ್ಯವಾಗಿವೆ. ಇನ್ನು ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರ ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು ಅಲ್ಲಿಯೂ ಬಿಜೆಪಿ 13,600 ಮತಗಳ ಲೀಡ್ಪಡೆದಿದೆ.
40 ಸಾವಿರ ಲೀಡ್ನ ಗುಟ್ಟೇನು?: ಒಂದು ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 3 ಶಾಸಕರು 10 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು (ಶಿರಹಟ್ಟಿ ಹೊರತುಪಡಿಸಿ). ಆದರೆ, ವರ್ಷ ಪೂರ್ಣಗೊಳ್ಳುವುದರೊಳಗೆ ಅವರ ಮತ ಕಸಿಯಲು ಬಿಜೆಪಿ ಹೇಗೆ ಯಶಸ್ವಿಯಾಯಿತು? (4 ಕ್ಷೇತ್ರಗಳಲ್ಲಿ) ಎನ್ನುವುದು ಕಾಡುತ್ತಿರುವ ಪ್ರಶ್ನೆ. ಕಾಂಗ್ರೆಸ್ ಕಾರ್ಯಕರ್ತರೇ ಹೇಳುವಂತೆ ಶಾಸಕರು ಮತ್ತು ಅವರ ಹಿಂಬಾಲಕರ ವರ್ತನೆಯೇ ಸೋಲಿಗೆ ಪ್ರಮುಖ ಕಾರಣ. ಶಾಸಕರಾದವರು ಕಾರ್ಯಕರ್ತರ ಕೈಗೆ ಸಿಗದಿರುವುದು, ಕಳೆದ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಅದ್ಯಾವ ಭರವಸೆಯನ್ನೂ ವರ್ಷ ಮುಗಿದರೂ ಈಡೇರಿಸದೇ ಇರುವುದು ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿನ ಹೊಂದಾಣಿಕೆಯ ಕೊರತೆ ಹಾಗೂ ದೇಶಾದ್ಯಂತ ಬೀಸಿದ ಮೋದಿ ಅಲೆಯೂ ಇದಕ್ಕೆ ಕಾರಣ ಎಂದು ಜಿಲ್ಲೆಯ ಹಿರಿಯ ರಾಜಕೀಯ ವಿಶ್ಲೇಷಕರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
ಸೋಲು ಯಾರ ಹೆಗಲಿಗೆ?: ಹಾವೇರಿ ಕ್ಷೇತ್ರದಲ್ಲಿ ಸಲೀಂ ಅಹ್ಮದ್ ಗೆಲುವು ಖಚಿತ ಎಂದು ಪ್ರಚಾರದ ವೇಳೆ ಹೇಳುತ್ತಿದ್ದ ಕಾಂಗ್ರೆಸ್ನ ಪ್ರತಿಯೊಬ್ಬ ನಾಯಕರಿಗೂ ಇದು ದೊಡ್ಡ ಪಾಠವೇ ಸರಿ. ರಾಜ್ಯದಲ್ಲಂತೂ ಮೋದಿ ಅಲೆಯೇ ಇಲ್ಲ, ಅದೆಲ್ಲ ಮಾಧ್ಯಮಗಳ ಸೃಷ್ಟಿ. ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿದ್ದು, 7 ಶಾಸಕರಿದ್ದಾಗಲೇ ಸಲೀಂ ಅಹ್ಮದ್ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದಾರೆ.
ಈ ಬಾರಿ ನಮ್ಮ ಪಕ್ಷದವರೇ 7 ಶಾಸಕರಿದ್ದಾರೆ. ಹಾಗಾಗಿ ನಮ್ಮ ಗೆಲುವು ಖಚಿತ, ಅದರಲ್ಲಿಯೂ ವಿಶೇಷವಾಗಿ ಹಾವೇರಿಯಲ್ಲಿ ಮೋದಿ ಮೋಡಿ ನಡೆಯುವುದಿಲ್ಲ, ಇಲ್ಲೇನಿದ್ದರೂ 1 ವರ್ಷದ ಕಾಲ ನಮ್ಮ ಸರ್ಕಾರ ಮಾಡಿದ ಅಭಿವೃದ್ಧಿ ಅಲೆ ಇದೆ ಎಂದು ಪ್ರಚಾರದುದ್ದಕ್ಕೂ ಮಾಧ್ಯಮಗಳ ಮೇಲೆಯೇ ಹರಿಹಾಯುತ್ತಿದ್ದ ನಾಯಕರಲ್ಲಿ ಯಾರು ಸಲೀಂ ಅಹ್ಮದ ಅವರ ಸೋಲಿನ ಹೊಣೆಯನ್ನು ಹೊರುತ್ತಾರೆ ಕಾದು ನೋಡಬೇಕು.
ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

