ಪ್ರಶಾಂತ ಸೋಲು: ಕೈ ತಳಮಳ
ವಿಧಾನಸಭೆ ಚುನಾವಣೆಯಲ್ಲಿ ಸೋತು ಹೈರಾಣಾಗಿದ್ದ ಬಿಜೆಪಿ ಲೋಕಸಭೆ ಚುನಾವಣೆ ಗೆದ್ದು ಬೀಗುತ್ತಿದೆ. ಆದರೆ, ಆ ಗೆಲವಿನ ಸಂಭ್ರಮದಲ್ಲೇ ಇದ್ದ ಕಾಂಗ್ರೆಸ್ ಈ ಸೋಲಿನಿಂದ ಕಂಗೆಟ್ಟಿದೆ. ಅಷ್ಟೆ ಅಲ್ಲ, ಪಕ್ಷದ ಗೆಲವಿಗಾಗಿ ದುಡಿಯದ ಮುಖಂಡರ ಮೇಲೆ ತೂಗುಕತ್ತಿ ನೇತಾಡುತ್ತಿದೆ. ಹೀಗಾಗಿ ಕೆಲ ಕಾಂಗ್ರೆಸ್ ಮುಖಂಡರು ತಳಮಳಗೊಂಡಿದ್ದಾರೆ.
ಬಿಜೆಪಿಯ ಅನಂತಕುಮಾರ ಹೆಗಡೆ ಅವರ ಗೆಲವಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಪ್ರಮುಖ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅದರ ಜತೆಗೆ ಕಾಂಗ್ರೆಸ್ನ ಕೆಲ ಮುಖಂಡರ ಪರೋಕ್ಷ ಸಹಕಾರವೂ ಇದೆ ಎನ್ನುವುದು ಕಟುಸತ್ಯದ ಸಂಗತಿ.
ಪರೋಕ್ಷ ಎಚ್ಚರಿಕೆ: ಜಿಲ್ಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಚುನಾವಣೆ ಮುಗಿಯುತ್ತಿದ್ದಂತೆ ಒಂದು ಸುತ್ತು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಪಕ್ಷಕ್ಕೆ ನಿಷ್ಠೆ ಇಲ್ಲದ ಕೆಲ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದರು. ಫಲಿತಾಂಶದಲ್ಲಿ ಏನಾದರೂ ಏರು-ಪೇರಾದರೆ ಪರಿಸ್ಥಿತಿ ಕಷ್ಟಕರವಾದೀತು ಎಂಬ ಪರೋಕ್ಷ ಎಚ್ಚರಿಕೆಯೂ ದೇಶಪಾಂಡೆ ಅವರ ಈ ವರಸೆಯ ಹಿಂದಿತ್ತು.
ಕಂಗೆಟ್ಟ ನಾಯಕರು: ಈಗ ಫಲಿತಾಂಶ ಬಂದಿದೆ ಅಷ್ಟೆ ಅಲ್ಲ, ಕಾಂಗ್ರೆಸ್ನವರು ಮೈಪರಚಿಕೊಳ್ಳಬೇಕಾದ ಫಲಿತಾಂಶ ಇದಾಗಿದೆ. 1,40,700 ಮತಗಳ ಅಂತರದಿಂದ ಸೋಲು ಅನುಭವಿಸಿರುವುದು ಮುಖಂಡರನ್ನು ಕಂಗೆಡಿಸಿದೆ. ತಮ್ಮ ಮಗನನ್ನು ಶತಾಯಗತಾಯ ಗೆಲ್ಲಿಸಲೇಬೇಕೆಂದು ಪಣತೊಟ್ಟಿದ್ದ ದೇಶಪಾಂಡೆ ತಿಂಗಳ ಕಾಲ ಕ್ಷೇತ್ರಾದ್ಯಂತ ಸಂಚರಿಸಿ, ಪ್ರಚಾರ ನಡೆಸಿದ್ದರು. ಪಕ್ಷ ಹಾಗೂ ಪಕ್ಷ ಬೆಂಬಲಿತ ಪಕ್ಷೇತರ ಶಾಸಕರನ್ನೂ ಪ್ರಚಾರ ಕಾರ್ಯದಲ್ಲಿ ತೊಡಗಿಸಿದ್ದರು. ಆದರೆ, ಫಲಿತಾಂಶ ಅವರನ್ನು ಕಂಗೆಡಿಸಿದೆ.
ಅಸಮಾಧಾನ: ಹಾಗೆ ನೋಡಿದರೆ ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಭದ್ರವಾದ ಅಡಿಪಾಯ ಇತ್ತು. ಈ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭೆ ಕ್ಷೇತ್ರಗಳಲ್ಲಿ 4ರಲ್ಲಿ ಅಂದರೆ ಕುಮಟಾ, ಹಳಿಯಾಳ, ಯಲ್ಲಾಪುರ ಹಾಗೂ ಕಿತ್ತೂರಿನಲ್ಲಿ ಕಾಂಗ್ರೆಸ್ ಶಾಸಕರೆ ಇದ್ದರು. ಕಾರವಾರ ಹಾಗೂ ಭಟ್ಕಳದಲ್ಲಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಶಾಸಕರಿದ್ದರು. ಜಿಲ್ಲಾ ಪಂಚಾಯಿತಿಯೂ ಕಾಂಗ್ರೆಸ್ ಕೈನಲ್ಲೇ ಇತ್ತು. ವಿಧಾನ ಪರಿಷತ್ ಸದಸ್ಯರೂ ಕಾಂಗ್ರೆಸ್ನವರೇ ಆಗಿದ್ದರು. ಹೀಗಿದ್ದರೂ ಕಾಂಗ್ರೆಸ್ನ ಪ್ರಶಾಂತ ದೇಶಪಾಂಡೆ ಭಾರಿ ಅಂತರದಲ್ಲಿ ಸೋತಿರುವುದರಿಂದ ಈಗ ಆರ್.ವಿ. ದೇಶಪಾಂಡೆ ತೀವ್ರ ಅಸಮಾಧಾನಗೊಂಡಿದ್ದಾರೆ.
ಟಿಕೆಟ್ ಪಡೆಯುವಿಕೆ ಪ್ರತಿಷ್ಠೆ: ದೇಶಪಾಂಡೆ ಸದ್ಯ ಬಹಿರಂಗವಾಗಿ ಏನೂ ಹೇಳದಿದ್ದರೂ ಪಕ್ಷದಲ್ಲಿ ಏನೇನು ಬದಲಾವಣೆಗಳಾಗಲಿವೆ. ಅವರು ಕೈಗೊಳ್ಳುವ ಕ್ರಮಗಳೇನು ಎನ್ನುವ ಬಗ್ಗೆ ಪಕ್ಷದ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಪಕ್ಷದಲ್ಲಿ ಹಿಂದಿನಿಂದ ದೇಶಪಾಂಡೆ ಹಾಗೂ ಆಳ್ವ ಬಣಗಳು ಸಕ್ರಿಯವಾಗಿ ಇರುವುದು ಬಹಿರಂಗ ಸತ್ಯ. ಟಿಕೆಟ್ ಪಡೆಯುವಾಗಲೂ ಆಳ್ವ ಬಣದ ನಿವೇದಿತ್ ಆಳ್ವ ಹಾಗೂ ಪ್ರಶಾಂತ ದೇಶಪಾಂಡೆ ನಡುವೆ ತೀವ್ರ ಸ್ಪರ್ಧೆ ಉಂಟಾಗಿತ್ತು. ಈ ಭಾರಿ ಪೈಪೋಟಿಯಲ್ಲೂ ಆರ್.ವಿ. ದೇಶಪಾಂಡೆ ತಮ್ಮ ಮಗ ಪ್ರಶಾಂತ ದೇಶಪಾಂಡೆಗೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದರು. ಮಾರ್ಗರೇಟ್ ಆಳ್ವ ಬಣದಲ್ಲಿ ಇದು ಇರುಸುಮುರುಸು ಉಂಟು ಮಾಡಿತ್ತು. ಟಿಕೆಟ್ ನೀಡಿಕೆಯಲ್ಲಿ ಜಿಲ್ಲೆಯಲ್ಲಿ ಪ್ರಬಲ ಸಮಾಜವಾದ ನಾಮಧಾರಿಗಳನ್ನು ಕಡೆಗಣಿಸಿರುವುದು ಸಹ ಅಸಮಾಧಾನಕ್ಕೆ ಕಾರಣವಾಗಿತ್ತು.
ಒಟ್ಟಿನಲ್ಲಿ ಮೋದಿ ಅಲೆ ಅನಂತಕುಮಾರ ಹೆಗಡೆ ಅವರ ಗೆಲವಿಗೆ ಪ್ರಮುಖ ಪಾತ್ರ ವಹಿಸಿದ್ದರೂ ಕಾಂಗ್ರೆಸ್ನಲ್ಲಿ ಬೇರೆ ಬೇರೆ ಲೆಕ್ಕಾಚಾರಗಳು ಹರಿದಾಡುತ್ತಿವೆ. ಈಗ ಆರ್.ವಿ. ದೇಶಪಾಂಡೆ ಪಕ್ಷದಲ್ಲಿನ ವಿದ್ಯಮಾನಗಳ ಬಗ್ಗೆ ಯಾವ ನಿಲುವು ತಳೆಯಲಿದ್ದಾರೆ. ಅದು ಯಾವ ರೂಪದಲ್ಲಿ ಪ್ರಕಟವಾಗಲಿದೆ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

