ಗದಗ

ದಿಂಗಾಲೇಶ್ವರಮಠ ಲೋಕಾರ್ಪಣೆ

Published On :

ಲಕ್ಷ್ಮೇಶ್ವರ: ಮಧುಮಗಳಂತೆ ಬಾಲೆಹೊಸೂರು ಗ್ರಾಮವು ಭರದಿಂದ ಶೃಂಗಾರಗೊಳ್ಳುತ್ತಿರುವುದನ್ನು ನೋಡಲು ಕಣ್ಣುಗಳಿಗೆ ಹಬ್ಬ. ಒಂದು ಕಾಲದಲ್ಲಿ ಕುಗ್ರಾಮವಾಗಿದ್ದ ಬಾಲೆಹೊಸೂರು ಗ್ರಾಮವು ಇಂದು ವಸಂತ ಮಾಸದಲ್ಲಿ ನಳನಳಿಸುವ ಸುಂದರ ಹೂದೋಟದಂತೆ ಭಾಸವಾಗುತ್ತದೆ. ಬಾಲೆಹೊಸೂರಿನ ಕುಮಾರ ದಿಂಗಾಲೇಶ್ವರ ಮಠ ಹಾಗೂ ದಾಸೋಹದ ಮನೆಯ ಲೋಕಾರ್ಪಣೆಯ ಮೇ 23, 24 ಮತ್ತು 25 ರಂದು ಜರುಗಲಿದೆ.
ಬಾಲೆಹೊಸೂರ ಗ್ರಾಮದಲ್ಲಿ ಸುಮಾರು 3 ಶತಮಾನಗಳ ಹಿಂದೆ ಸ್ಥಾಪನೆಗೊಂಡ ದಿಂಗಾಲೇಶ್ವರ ಮಠವು ಅತ್ಯಂತ ಕಿರಿದಾಗಿ ಇಕ್ಕಟ್ಟಿನಿಂದ ಕೂಡಿತ್ತು, ಶ್ರೀಮಠದ ಪ್ರಸ್ತುತ 6ನೇ ಪಟ್ಟಾಧ್ಯಕ್ಷರಾಗಿರುವ ಕುಮಾರ ದಿಂಗಾಲೇಶ್ವರ ಶ್ರೀಗಳು ಸಾಕಷ್ಟು ಶ್ರಮವಹಿಸಿ ತಮ್ಮ ಭಕ್ತರ ಆಸೆಯಂತೆ ಶ್ರೀಮಠವನ್ನು ಬೃಹತ್ತಾಗಿ ನಿರ್ಮಾಣ ಮಾಡುವ ಸಾಹಸಕ್ಕೆ ಕೈಹಾಕಿ ಅದರಲ್ಲಿ ಯಶಸ್ವಿಯಾಗಿದ್ದಾರೆ.
20 ವರ್ಷಗಳ ಹಿಂದೆ ಬಾಲೆಹೊಸೂರಿನ ಶ್ರೀಮಠದ ಪಟ್ಟ ವಹಿಸಿಕೊಂಡ ನಂತರ ದಿಂಗಾಲೇಶ್ವರ ಶ್ರಿಗಳು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನಾಡನ್ನು ಹಾಗೂ ಸಮಾಜವನ್ನು ಕಟ್ಟುವು ಕಾರ್ಯ ಮಾಡುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಕುಮಾರ ದಿಂಗಾಲೇಶ್ವರ ಸ್ವಾಮಿಗಳು ತಮ್ಮ ಪ್ರಖಂಡ ವಾಗ್ಝರಿಯಿಂದ ಮತ್ತು ಅಸ್ಖಲಿತ ವಾಣಿಯಿಂದ ಜೀವನ ದರ್ಶನ ಎನ್ನುವ ಪ್ರವಚನ ಕಾರ್ಯಕ್ರಮಗಳನ್ನು ನೀಡುತ್ತ ನಾಡಿನ ಲಕ್ಷಾಂತರ ಭಕ್ತರ ಮನಸ್ಸನ್ನು ಗೆಲ್ಲುವಲ್ಲಿ ಹಾಗೂ ಅವರ ಜೀವನಕ್ಕೆ ಹೊಸ ದಿಕ್ಕು ತೋರಿಸವಲ್ಲಿ ಸಫಲರಾಗಿದ್ದಾರೆ.
ಜನರನ್ನು ದುಶ್ಚಟಗಳಿಂದ ದೂರ ಮಾಡುವ ಸಲುವಾಗಿ ನಾಡಿನ 116 ಗ್ರಾಮಗಳಲ್ಲಿ ಪಾದಯಾತ್ರೆಯ ಮೂಲಕ ಸಂಚಾರ ಮಾಡುತ್ತ, ಯುವಕರನ್ನು ದುಶ್ಚಟಗಳಿಂದ ಮುಕ್ತಗೊಳಿಸಿ, ಅವರ ಕಷ್ಟಗಳನ್ನು ದೂರ ಮಾಡುವಲ್ಲಿ ಯಶಸ್ವಿಯಾದ ಶ್ರೀಗಳ ಕಾರ್ಯ ಗಮನಾರ್ಹವಾಗಿದೆ. ಮಠ ಕಟ್ಟುವುದು ಭಕ್ತರ ಕೆಲಸ, ಸಮಾಜ ಕಟ್ಟುವುದು ಸಾಮಿಗಳ ಕೆಲಸವಾಗಿದೆ ಎಂದು ಹೇಳುವ ಶ್ರೀಗಳು ಎರಡನ್ನು ಏಕಕಾಲದಲ್ಲಿ ಮಾಡಿರುವುದು ಶ್ಲಾಘನೀಯ.
ಮಠದಿಂದ ಘಟವಲ್ಲ, ಘಟದಿಂದ ಮಠ ಎನ್ನುವ ಹಾನಗಲ್ ಕುಮಾರ ಸ್ವಾಮಿಗಳು ವಾಣಿಯಂತೆ ಬಾಲೆಹೊಸೂರಿನಲ್ಲಿ 16940 ಚದುರ ಅಡಿ ವಿಸ್ತೀರ್ಣದಲ್ಲಿ ಅಮೃತಶಿಲೆಯ ಕಲ್ಲುಗಳಿಂದ ದಿಂಗಾಲೇಶ್ವರ ಮಠವನ್ನು ಹಾಗೂ 6500 ಚದುರ ಅಡಿಯಲ್ಲಿ ದಾಸೋಹ ಭವನ ನಿರ್ಮಾಣ ಮಾಡಿರುವುದು ಶ್ರೀಗಳ ಕರ್ತೃತ್ವ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.
ಭಕ್ತರ ಮನಸ್ಸನ್ನು ಗೆದ್ದು ಅವರ ಸಹಾಯ, ಸಹಕಾರದಿಂದ ಭವ್ಯವಾದ ಮಠವನ್ನು ನಿರ್ಮಾಣ ಮಾಡಿ ಲೋಕ ಕಲ್ಯಾಣಕ್ಕೆ ಅರ್ಪಿಸುತ್ತಿರುವುದು ಈ ಭಾಗಕ್ಕೆ ಶ್ರೀಗಳು ನಿಡಿರುವುದು ದೊಡ್ಡ ಕೊಡುಗೆಯಾಗಿದೆ.
ಗ್ರಾಮದ ಪ್ರತಿಯೊಂದು ರಸ್ತೆಯು ಡಾಂಬರೀಕರಣಗೊಳ್ಳುತ್ತಿದ್ದು, ಪ್ರತಿ ಮನೆಯು ಶೌಚಾಲಯವನ್ನು ಹೊಂದುವಂತೆ ಮಾಡಲಾಗುತ್ತಿದೆ. ಶ್ರೀಮಠದ ಪಕ್ಕದಲ್ಲಿದ್ದ ಕೆರೆಗೆ ಕಾಯಕಲ್ಪ ನೀಡಿ ಮಾಡಿ ಅಂತರ್ಜಲ ಹೆಚ್ಚಳವಾಗುವಂತೆ ಮಾಡಲಾಗುತ್ತಿದೆ. ನಾಡಿನ ಹಲವು ಶರಣರು, ಸಂತರು, ದಾರ್ಶನಿಕರು, ರಾಜಕೀಯ ನಾಯಕರು, ಮತ್ತು ಹಲವು ಪಕ್ಷಗಳ ಮುಖಂಡರಗಳು ಆಗಮಿಸಿ, ಶ್ರೀಮಠವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.