ಗದಗ

ಅಪೂರ್ಣ ಮಾಹಿತಿ: ಆಕ್ಷೇಪ

Published On :

ಲಕ್ಷ್ಮೇಶ್ವರ:  ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಮಂಗಳವಾರ ಆಡಳಿತ ಮಂಡಳಿಯ ಸದಸ್ಯರ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು.
2011-12-13ನೇ ಸಾಲಿನ ಎಸ್‌ಎಫ್‌ಸಿ ಅನುದಾನದ ಪ್ರೋತ್ಸಾಹಕ ಅನುದಾನ ಮತ್ತು 13ನೇ ಹಣಕಾಸು ಯೋಜನೆ ಸಾಮಾನ್ಯ ಮೂಲ ಅನುದಾನ ಹಾಗೂ 2011-12-13ನೇ ಸಾಲಿನ ಸಾಮಾನ್ಯ ಕಾರ್ಯಾಧಾರಿತ ಅನುದಾನದ ಕಾಮಗಾರಿಗಳಿಗೆ ಅನುಮೋದನೆ ನೀಡುವ ಹಾಗೂ 2013-14ನೇ ಸಾಲಿನ ಎಸ್‌ಎಫ್‌ಸಿ ಅನುದಾನದ ಕಾಮಗಾರಿಗೆ ಅನುಮೋದನೆ ನೀಡುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು. ಆದರೆ ಸದಸ್ಯರ ಆಕ್ಷೇಪದಿಂದ ಸಭೆಯನ್ನು ಒಂದು ಗಂಟೆ ಕಾಲ ಮುಂದೂಡಲಾಯಿತು.
ಅನುದಾನಗಳ ಅನುಮೋದನೆ ಕೊಡುವ ಕುರಿತು ಚರ್ಚೆ ಪ್ರಾರಂಭವಾದಾಗ ಮಹೇಶ ಹೊಗೆಸೊಪ್ಪಿನ ಸಭೆಯ ಬಗ್ಗೆ ಆಕ್ಷೇಪಣೆ ತೆಗೆದು, ಚರ್ಚಿಸಬೇಕಾದಂತಹ ವಿಷಯಗಳ ಕುರಿತು ಸದಸ್ಯರಿಗೆ ಸರಿಯಾದ ಮಾಹಿತಿ ನೀಡಲಾಗಿಲ್ಲ. ಅಪೂರ್ಣಮಾಹಿತಿಯೊಂದಿಗೆ ಚರ್ಚಿಸುವದು ಸೂಕ್ತವಲ್ಲ. ಸಭೆಯನ್ನು ಒಂದು ಗಂಟೆ ಮುಂದೂಡಿ, ಪೂರ್ಣ ಮಾಹಿತಿಯೊಂದಿಗೆ ಮತ್ತೆ ಆರಂಭಿಸಿ ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ ಮ್ಯಾಗೇರಿ ಕೂಡ ಆಕ್ಷೇಪಣೆ ವ್ಯಕ್ತಪಡಿಸಿ, ಮಾಹಿತಿ ನೀಡದೇ ಸಭೆಯನ್ನು ಏಕೆ ಕರೆಯುತ್ತೀರಾ? ಎಂದು ಮುಖ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು. ಟೆಂಡರ್‌ಗಳ ಬಗ್ಗೆ ಮಾಹಿತಿ ನೀಡುವಂತೆ ಅರ್ಜಿ ನೀಡಿದ್ದರೂ ಮಾಹಿತಿ ನೀಡುತ್ತಿಲ್ಲ, ಕೆಲಸ ಮಾಡುವವರು ಯಾರು ಎಂದು ತಿಳಿಯದಂತಾಗಿದೆ. ಕೂಡಲೇ ಎಲ್ಲ ಸದಸ್ಯರಿಗೆ ಇಂದಿನ ಸಭೆಯ ಬಗ್ಗೆ ಸರಿಯಾದ ಮಾಹಿತಿ ನೀಡಿ ಎಂದು ಆದೇಶಿಸಿದರು. ಕೊನೆಗೆ 1 ಗಂಟೆ ಸಭೆಯನ್ನು ಮುಂದೂಡಲಾಯಿತು.
ಅನಂತರ ಸಭೆ ಸೇರಿದಾಗ, ಸಭೆ ಸೇರಿದ ಮೇಲೆ ಮಾಹಿತಿ ನೀಡುವುದು ಏಕೆ? ಆ ಕಾರಣಕ್ಕಾಗಿ ಅಧಿಕಾರಿಗಳ ಮೇಲೆ ಅಧ್ಯಕ್ಷರು ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸದಸ್ಯ ಲೆಂಕಪ್ಪ ಶೆರಸೂರಿ ಪ್ರಶ್ನಿಸಿದರು. ಈ ಹಂತದಲ್ಲಿ ಮಹೇಶ ಹೊಗೆಸೊಪ್ಪಿನ ಅವರು, ಹಳೆ ಕಾಮಗಾರಿಗಳು ಬಾಕಿ ಉಳಿದುಕೊಂಡಿದ್ದು, ಅವುಗಳನ್ನು ಮೊದಲು ಮುಗಿಸಿ. ಅನಂತರ ಹೊಸ ಕಾಮಗಾರಿಗಳಿಗೆ ಅನುಮೋದನೆ ನೀಡಿ ಎಂದು ಆಗ್ರಹಿಸಿದರು. ಅಲ್ಲದೇ ಹಿಂದಿನ ಸಭೆಯಲ್ಲಿ ನಿರ್ಧರಿಸಿದಂತೆ ಕೆಲವು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಹೇಳಲಾಗಿತ್ತು, ಆದರೆ ಅದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ಆರೋಪಿಸಿದರು. ಕೊನೆಗೆ ಚರ್ಚೆ ಬಳಿಕ ಅನುಮೋದನೆ ನೀಡಲಾಯಿತು.
ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಆರ್. ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ ಮ್ಯಾಗೇರಿ, ವಿ.ಜಿ. ಪಡಗೇರಿ, ರಾಜು ಕುಂಬಿ, ದಾದಾಪೀರ ಮುಚಾಲೆ, ಅನಿಲ ಮುಳಗುಂದ, ಗಣೇಶ ಬೇವಿನಮರದ, ಗುರುಪುತ್ರ ಮೆಡ್ಲೇರಿ, ಲೆಂಕೆಪ್ಪ ಶೆರಸೂರಿ, ಬಸವರಾಜ ಓದಾನವರ, ನಾಗಪ್ಪ ಓಂಕಾರಿ, ಸುತಾರ, ರಾಮಣ್ಣ ರಿತ್ತಿ, ಜಯಕ್ಕ ಕಳ್ಳಿ, ಮುಖ್ಯಾಧಿಕಾರಿ ಉಮೇಶ ಗುಡ್ಡದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.