ಗದಗ

ಮಳೆ ಅರ್ಭಟ: ಜನ ತತ್ತರ

Published On :

ನರಗುಂದ: ತಾಲೂಕಿನಲ್ಲಿ ಈ ವರ್ಷ ಮುಂಗಾರು ಮಳೆ ಅರ್ಭಟಕ್ಕೆ ಜನತೆ ತತ್ತರಿಸುವಂತಾಗಿದ್ದು, ಸೋಮವಾರ ಸಂಜೆ ಗುಡುಗು, ಸಿಡಿಲು, ಮಳೆ, ಗಾಳಿ ಅರ್ಭಟಕ್ಕೆ ಜನತೆ ತೀವ್ರ ತೊಂದರೆ ಅನುಭವಿಸಿದ್ದಾರೆ. ಅಲ್ಲದೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ 50ಕ್ಕೂ ಹೆಚ್ಚು ಮನೆಗಳ ಹಂಚು (ತಗಡು) ಗಾಳಿ ಅರ್ಭಟಕ್ಕೆ ಹಾರಿ ಹೋಗಿವೆ. ಬೃಹತ್ ಮರಗಳು, ವಿದ್ಯುತ್ ಕಂಬಗಳು ಕಾರು, ಬೈಕ್, ಮನೆಗಳ ಮೇಲೆ ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಕಷ್ಟ ಕೇಳುವವರಿಲ್ಲ: 15 ದಿನಗಳ ಹಿಂದೆ ಇದೇ ರೀತಿ ಅಬ್ಬರದ ಮಳೆ, ಗಾಳಿ, ಸಿಡಿಲಿನಿಂದಾಗಿ ಸಾರ್ವಜನಿಕರ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದ್ದವು. ಅದೇ ರೀತಿ ಈ ಬಾರಿಯೂ ತಾಲೂಕಿನ ಹದಲಿ ಗ್ರಾಮದಲ್ಲಿ ನಿಪ್ಪಾಣಿ ಭಾಗದ ಕುರಿಗಾಯಿ ಆನಂದ ಹಳ್ಳದಕೇರಿ ಎಂಬುವವರಿಗೆ ಸೇರಿದ 25ಕ್ಕೂ ಅಧಿಕ ಕುರಿಗಳು ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ರಭಸದ ಮಳೆಯಿಂದಾಗಿ ಮಧ್ಯರಾತ್ರಿ ಹಲವು ಮನೆಗಳಿಗೆ ನೀರು ಹೊಕ್ಕು ರಾತ್ರಿಯಿಡಿ ಜನತೆ ಜಾಗರಣೆ ಮಾಡುವ ಪರಿಸ್ಥಿತಿ ಎದುರಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಜನರ ಆಸ್ತಿ ನಷ್ಟವಾಗಿದ್ದರೂ ಇಲ್ಲಿವರೆಗೂ ಅಧಿಕಾರಿಗಳು ಆಗಮಿಸಿ ಜನರ ಸಂಕಷ್ಟ ಆಲಿಸಿಲ್ಲ.
ಕತ್ತಲಲ್ಲಿ ಗ್ರಾಮಗಳು: ಹಿಂದಿನ ಮಳೆ ಅರ್ಭಟಕ್ಕೆ ವಿದ್ಯುತ್ ಕಂಬಗಳು ಬಿದ್ದು ಅವುಗಳನ್ನು ದುರಸ್ತಿಗೊಳಿಸುವ ಕಾರ್ಯ ಇನ್ನೂ ಪೂರ್ಣವಾಗಿಲ್ಲ. ಅಷ್ಟರಲ್ಲಿಯೇ ಮತ್ತೆ ಮಳೆಯಿಂದಾಗಿ ತಾಲೂಕಿನ ಕೊಣ್ಣೂರು, ಶಿರೋಳ, ಕಪ್ಪಲಿ, ಕಲ್ಲಾಪುರ, ಭೈರನಹಟ್ಟಿ, ವಾಸನ, ಬೆಳ್ಳಿರಿ, ಲಕಮಾಪುರ ಇನ್ನೂ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಧರೆಗುಳಿದ ಪರಿಣಾಮ ಗ್ರಾಮಗಳೇ ಕತ್ತಲಲ್ಲಿ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ.
ಕಂದಾಯ ಇಲಾಖೆ 15 ದಿನಗಳ ಹಿಂದೆ ಸುರಿದ ಭಾರಿ ಮಳೆ, ಗಾಳಿಗೆ ಜನತೆ ಅಪಾರ ನಷ್ಟ ಅನುಭವಿಸಿದ್ದಾರೆ. ಆದರೆ, ಇಲಾಖೆ ಸಿಬ್ಬಂದಿ ಸರಿಯಾಗಿ ಸರ್ವೇ ಮಾಡದಿರುವುದರಿಂದ ನಷ್ಟದ ಪ್ರಮಾಣ ನಿಖರವಾಗಿ ಗೊತ್ತಾಗದೇ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ತಾಲೂಕಿನಲ್ಲಿ ಮಳೆಗೆ ಹಾಳಾದ ನಷ್ಟದ ಕುರಿತು ನಿಖರ ಮಾಹಿತಿ ಪಡೆದುಕೊಂಡು ಅರ್ಹರಿಗೆ ಪರಿಹಾರ ಕಲ್ಪಿಸುವರೋ ಕಾದು ನೋಡಬೇಕಿದೆ.
ಆಕ್ರೋಶ: ನಗರದ ಜನತಾ ಕಾಲೋನಿಯ ನಿವಾಸಿಗಳಾದ ಮಹ್ಮದಸಾಬ ಮುಲ್ಲಾ, ಬಸರಸಬಾ ಕಿಲ್ಲೇದಾರ, ರಫೀಕ್ ಮುಲ್ಲಾ, ಮಕ್ತಮಸಾಬ ಮುಲ್ಲಾ, ರಾಜಸಾಬ, ಮಹಮ್ಮದ ನಾಲಬಂದ, ಹುಸೇನಬಿ ಮುಲ್ಲಾ, ಸಲೀಂ ಪಠಾಣ ಮಾತನಾಡಿ, ಕೆಲವು ದಿನಗಳಿಂದ ಸುರಿದ ಮಳೆ-ಗಾಳಿಗೆ ಇಷ್ಟೆಲ್ಲ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾದರೂ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಭೇಟಿ ನೀಡಿ ಪರಿಶೀಲಿಸದಿರುವುದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.