ಗದಗ

ವಾಹನ ಕಾಟ: ಗ್ರಾಹಕರ ಪರದಾಟ

Published On :

ನರೇಗಲ್ಲ: ನರೇಗಲ್ಲನಲ್ಲಿ ಇಕ್ಕಟ್ಟಾಗಿರುವ ರಸ್ತೆಯಲ್ಲಿ ನಡೆಯುತ್ತಿರುವ ಸಂತೆಯಿಂದಾಗಿ ಸಾರ್ವಜನಿಕರು, ಮಹಿಳೆಯರು ಸಂತೆ ಮಾಡಲು ಹರಸಾಹಸ ಪಡುವ ಸ್ಥಿತಿ ಎದುರಾಗಿದೆ. ಅಲ್ಲದೆ ಸಂತೆಯೊಳಗೆ ಟಂಟಂ ಕಾಯಿಪಲ್ಲೆ ವ್ಯವಹಾರಕ್ಕೆ ಬಳಸುವುದರಿಂದ ಜನತೆ ಸಂತೆಗೆ ಆಗಮಿಸಲು ಹಿಂದೇಟು ಹಾಕುತ್ತಿರುವ ಪ್ರಸಂಗ ನಿರ್ಮಾಣವಾಗಿದೆ.
ಇಲ್ಲಿ ಸಂತೆ ಪ್ರಾರಂಭವಾಗುವ ಮೊದಲೆ ಸಂಜೆ 5 ಗಂಟೆಗೆ ವಾಹನ ಸವಾರರು ಸಂಜೆ 6.30ರಿಂದ 7ರ ವರೆಗೂ ಹೋಗಿ ಬರುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮೊದಲೇ ಕಿರಿದಾದ ಜಾಗೆಯಲ್ಲಿ ಜನತೆ ಸಂಚರಿಸುವುದು ದುಸ್ತರವಾಗಿದ್ದರಿಂದ ವಾಹನಗಳ ಸಂಚಾರ ಗ್ರಾಹಕರಿಗೆ ತೊಂದರೆಯಾಗಿದೆ.
ಪಟ್ಟಣದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ಈ ಸಂತೆ ಸುತ್ತಲಿನ ಹತ್ತಾರು ಹಳ್ಳಿಗಳಿಗೆ ದೊಡ್ಡ ಸಂತೆಯಾಗಿದ್ದು, ತಮ್ಮ ದಿನ ನಿತ್ಯದ ಅನೇಕ ಪರಿಕರಗಳನ್ನು ಕೊಳ್ಳಲು ಜನತೆ ಆಗಮಿಸುತ್ತಾರೆ. ನೆರೆಯ ಗ್ರಾಮಗಳಾದ ಕೋಡಿಕೊಪ್ಪ, ತೋಟಗಂಟಿ, ಕೋಚಲಾಪುರ, ದ್ಯಾಂಪುರ ಅಲ್ಲದೇ ಜಕ್ಕಲಿ, ಹಾಲಕೆರೆ, ನಿಡಗುಂದಿಕೊಪ್ಪ, ಯಲಬುರ್ಗಾ ತಾಲೂಕಿನ ತೊಂಡಿಹಾಳ, ಬಂಡಿಹಾಳ ಜನರೂ ಇಲ್ಲಿನ ಸಂತೆಗೆ ಆಗಮಿಸುತ್ತಿರುವುದು ವಿಶೇಷ. ಹಿಂದೆ ಈಗಿನ ಸಂತೆ ಸ್ಥಳವನ್ನು ಜಕ್ಕಲಿ ರಸ್ತೆಯಲ್ಲಿನ ಎಪಿಎಂಸಿಗೆ ಸ್ಥಳಾಂತರಿಸಬೇಕೆಂದು ಪಟ್ಟಣ ಪಂಚಾಯಿತಿ ನಿರ್ಧರಿಸಿತ್ತು. ಆದರೆ, ಅಲ್ಲಿಗೆ ಸಾರ್ವಜನಿಕರು ಹೋಗಲು ನಿರಾಕರಿಸಿದ್ದರಿಂದ ಆ ಜಾಗ ಕೈ ಬಿಡಲಾಯಿತು. ನಂತರ ದತ್ತಾತ್ರೇಯ ದೇವಸ್ಥಾನ ಬಳಿಯಿರುವ ಹಿರೇಬಾವಿ ಮುಚ್ಚಿದರೆ ದೊಡ್ಡ ಬಯಲು ನಿರ್ಮಾಣವಾಗುತ್ತದೆ. ಸಂತೆ ಊರ ಮಧ್ಯದಲ್ಲಿ ನಡೆದಂತಾಗುತ್ತದೆ ಎಂಬ ಯೋಚನೆ ಇತ್ತಾದರೂ ಅದು ಯಾಕೋ ಹಾಗೆ ನಿಂತಿತು. ಹೀಗಾಗಿ ಈಗ ಅನಿವಾರ್ಯವಾಗಿ ಮೂಲ ಸ್ಥಳದಲ್ಲಿಯೇ ಸಂತೆ ನಡೆಯುತ್ತಿರುವದು ಜನತೆಗೆ ಸಮಸ್ಯೆ ತಂದೊಡ್ಡಿದೆ.
ಗಣೇಶ ದೇವಸ್ಥಾನ ಬಯಲಿನಲ್ಲಿ ಮಾತ್ರ ನಡೆಯುತ್ತಿದ್ದ ಸಂತೆ ದಿನಗಳೆದಂತೆ ಬೀದಿಗುಂಟ ಡಾ. ಕಾಳೆಯವರ ದವಾಖಾನೆಯವರೆಗೂ ಬಂತು. ಇನ್ನೊಂದು ಹೆಜ್ಜೆ ಮುಂದು ಹೋಗಿ ನರೇಗಲ್ಲ-ಗಜೇಂದ್ರಗಡದ ಮುಖ್ಯರಸ್ತೆಗೆ ಬಂದಿದೆ. ಮುಖ್ಯರಸ್ತೆಯಿಂದ ಗಣೇಶ ಗುಡಿವರೆಗಿನ ಬೀದಿಯೂ ವಿಶಾಲವಾಗಿಲ್ಲ. ಬೀದಿಯ ಎರಡೂ ಕಡೆಗಳಲ್ಲಿ ಮಾರಾಟಗಾರರು ಸಂತೆ ಹಚ್ಚುವುದರಿಂದ ಜನತೆಗೆ ಅಡ್ಡಾಡಲು ಚಿಕ್ಕ ಜಾಗ ಉಳಿಯುತ್ತದೆ. ಇಲ್ಲಿ ಜನತೆ ಅಲೆದಾಡಿ ಸಂತೆ ಮಾಡಬೇಕಾದ ಅನಿವಾರ್ಯತೆ ಇದೆ. ಸಂತೆ ನಡೆದಾಗ ವಾರಕ್ಕೊಮ್ಮೆ ಈ ಬೀದಿಯುದ್ದಕ್ಕಿರುವ ಮನೆಯವರು ಮನೆಗಳಿಗೆ ಹೋಗಲು, ತಮ್ಮ ಎತ್ತು, ಚಕ್ಕಡಿ, ವಾಹನಗಳನ್ನು ತೆಗೆದುಕೊಂಡು ಹೋಗಲು ಪ್ರಯಾಸಪಡುತ್ತಿದ್ದಾರೆ. ಡಾ. ಕಾಳೆಯವರ ದವಾಖಾನೆ ಸಂತೆ ಮಧ್ಯ ಇರುವುದರಿಂದ ತುರ್ತು ರೋಗಿಗಳು ತುರ್ತಾಗಿ ಬಂದರೆ ದವಾಖಾನೆಗೆ ಸೇರಿಸಲೂ ತುಂಬಾ ತೊಂದರೆ ಪಡಬೇಕಾಗುತ್ತದೆ.
ನರೇಗಲ್ಲ ಸಂತೆ ತುಂಬಾ ಚಿಕ್ಕದಾಗಿದ್ದು, ಜನಸಂಖ್ಯೆ ಬೆಳೆದಂತೆ ಸೌಲಭ್ಯ ಲಭ್ಯವಾಗಬೇಕಿತ್ತು. ಆದರೆ, ಈ ಕಾರ್ಯವಾಗಿಲ್ಲ. ಸಂತೆ ಮಾಡಲು ವೃದ್ದರು ಬರುವುದರಿಂದ ಟಂಟಂ ತಗುಲಿ ಬಿದ್ದ ಪ್ರಸಂಗಗಳುಂಟು. ಕಾರಣ ಈ ಮಾರುಕಟ್ಟೆಯಲ್ಲಿ ಸಂಜೆ ಸಂತೆ ಪ್ರಾರಂಭವಾದ ಮೇಲೆ ವಾಹನ ಸಂಚರಿಸದಂತೆ ನೋಡಿಕೊಳ್ಳುವ ಅಥವಾ ಸಂತೆ ಸ್ಥಳಾಂತರಿಸುವ ಕಾರ್ಯ ತ್ವರಿತವಾಗಿ ಆದಲ್ಲಿ ನೆಮ್ಮದಿಯಿಂದ ಸಂತೆ ಮಾಡಲು ಸಾಧ್ಯ.
- ವಿನಾಯಕ ಗ್ರಾಮಪುರೋಹಿತ, ನರೇಗಲ್ಲ ನಾಗರಿಕ


-ನಿಂಗರಾಜ ಬೇವಿನಕಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.