ಗುಲ್ಬರ್ಗಾ

ಧರ್ಮ ಪಾಲನೆಯಿಂದ ಶಾಂತಿ

Published On :

ಯಾದಗಿರಿ: ಜೀವನ ಭಗವಂತ ಕೊಟ್ಟ ಕೊಡುಗೆ. ಆದರ್ಶ ಜೀವನ ನಡೆಸಬೇಕಾದರೆ ಬದುಕಿನಲ್ಲಿ ಧರ್ಮ ಪರಿಪಾಲನೆಯಿಂದ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದು ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿ ನುಡಿದರು.
  ತಾಲೂಕಿನ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಸುಕ್ಷೇತ್ರ ಅಬ್ಬೆತುಮಕೂರ ಸಿದ್ಧಸಂಸ್ಥಾನ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಡಾ. ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮಹಾರುದ್ರಯಾಗಕ್ಕೆ ಗುರುವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.
 ಯುಗಾದಿ ಹೊಸ ಸಂವತ್ಸರ ದಿನದಂದು ನಡೆಯುತ್ತಿರುವ ಈ ಮಹಾರುದ್ರಯಾಗದಿಂದ ಬರಗಾಲದಿಂದ ತತ್ತರಿಸಿರುವ ನಾಡಿನಲ್ಲಿ ಹೆಚ್ಚಿನ ಮಳೆಯಾಗಿ ದೇಶದ ಬೆನ್ನಲುಬುವಾಗಿರುವ ರೈತರ ಸಂಕಷ್ಟ ದೂರವಾಗಿ ಸಮೃದ್ಧ ಬೆಳೆ ಬೆಳೆಯಲಿ. ಮಾರುಕಟ್ಟೆಯಲ್ಲಿ ಅದಕ್ಕೆ ಸೂಕ್ತ ಬೆಲೆ ಸಿಗಲಿ ಎಂದು ಹಾರೈಸಿದರು.
ಧರ್ಮ ಕವಚ: ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ವೀರಶೈವ ಧರ್ಮ ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂದ ಸಾಧನೆ, ಕಾರ್ಯಕ್ಕಿಂತ ಕಾಯಕಕ್ಕೆ, ದಾನಕ್ಕಿಂತ ದಾಸೋಹಕ್ಕೆ, ಚರಿತ್ರೆಗಿಂತ ಚಾರಿತ್ರ್ಯಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿದೆ. ವಿಶ್ವರಾಧ್ಯರು ಕಠಿಣ ತಪಸ್ವಿಗಳಾಗಿ, ಜ್ಞಾನಿಗಳಾಗಿ ಜನಮನದ ಅಜ್ಞಾನ ಪರಿಹರಿಸಿದ ಹರಿಕಾರರು. ಅವರ ಆಶೀರ್ವಾದ ಎಲ್ಲರಿಗೂ ಧರ್ಮ ಕವಚವಾಗಿ ಕಾಪಾಡಲಿ ಎಂದು ಹೇಳಿದರು.
  ಸ್ಪರ್ಧಾತ್ಮಕ ಯುಗದಲ್ಲಿ ನಾವೆಲ್ಲರೂ ಒಡ್ತಡ ಜೀವನ ಸಾಗಿಸುತ್ತಿದ್ದೇವೆ. ಬದುಕಿನ ಸ್ವಲ್ಪ ಸಮಯ ಅಧ್ಯಾತ್ಮದತ್ತ ಮೀಸಲಿಟ್ಟರೆ ಮಾತ್ರ ಶಾಂತಿ, ಸಮಾಧಾನ, ಸಾಮರಸ್ಯ ಮೂಡಿ ಸದ್ಭಾವನೆಯಿಂದ ಜೀವನ ಸಾಗಿಸಿ ಇತರರಿಗೆ ಮಾದರಿಯಾಗಬಹುದು ಎಂದರು.
ಬದಲಾವಣೆ ಸಂಕೇತ: ಇಲ್ಲಿನ ಶ್ರೀಗಳು ಧಾರ್ಮಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಶಿಕ್ಷಣಕ್ಕೆ ಆದ್ಯತೆ ನೀಡಿರುವುದು ಬದಲಾವಣೆಯ ಸಂಕೇತ ಎಂದರು.
  ವೇದಿಕೆ ಮೇಲೆ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಇದ್ದರು.
  ದುದನಿಯ ಉದ್ಯಮಿ ಶಂಕರ ಮೇತ್ರೆ ಜಗದ್ಗುರುಗಳ ವಿಶೇಷ ಪಾದ ಪೂಜೆ ನೆರವೇರಿಸಿದರು. ಜಗದ್ಗುರುಗಳು ಅಬ್ಬೆತುಮಕೂರ ಗ್ರಾಮ ಪ್ರವೇಶಿಸುತ್ತಿದಂತೆ ಅವರನ್ನು ಅಪಾರ ಭಕ್ತರು ಪೂರ್ಣ ಕುಂಭ ಮೇಳದೊಂದಿಗೆ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಲಿಂಗನಗೌಡ ಮಲ್ಹಾರ್, ನ್ಯಾಯವಾದಿ ಎಸ್.ಬಿ. ಪಾಟೀಲ್, ಪರಮಣ್ಣಗೌಡ, ಚನ್ನಪ್ಪ ಸಾಹುಕಾರ, ಮಲ್ಲಣಗೌಡ ಮಲ್ಕಾಪೂರ, ವಿಶ್ವನಾಥರಡ್ಡಿ ಪಾಟೀಲ್ ಅಬ್ಬೆತುಮಕೂರ, ಎಸ್.ಎನ್. ಮಿಂಚನಾಳ, ಅಮೀನರಡ್ಡಿ ಹತ್ತಿಕುಣಿ, ಸುರೇಶ ಬಾಡದ, ರಾಚೋಟಿ ಸ್ವಾಮಿ ಎಣ್ಣಿ, ಸಿದ್ರಾಮರಡ್ಡಿ ಖಂಡ್ರೆ, ರವಿ ಬಾಪುರೆ, ರಮೇಶ ದೊಡ್ಮನಿ, ಬಸವರಾಜ ರಾಜಾಪೂರ, ಚನ್ನಪ್ಪಗೌಡ ಮೋಸಂಬಿ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.

ಮಹಾರುದ್ರಯಾಗ ಪ್ರಾರಂಭ..
ಯಾದಗಿರಿ: ಜಿಲ್ಲೆಯ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಸುಕ್ಷೇತ್ರ ಅಬ್ಬೆತುಮಕೂರ ಸಿದ್ದಸಂಸ್ಥಾನ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಡಾ.ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿದ ಮಹಾರುದ್ರಯಾಗ ಭಕ್ತಿ ಭಾವದೊಂದಿಗೆ ಪ್ರಾರಂಭಗೊಂಡಿತು.
  ಬೆಳಗ್ಗೆ ಶ್ರೀಶೈಲದ ಚಂದ್ರಶೇಖರ ಸ್ವಾಮೀಜಿ ಶಿಷ್ಯ ವೃಂದ 60ಕ್ಕೂ ಹೆಚ್ಚಿನ ವೈದಿಕ ತಂಡ ಮಹಾರುದ್ರ ಯಾಗಕ್ಕೆ ಮಠದ ಆವರಣದಲ್ಲಿ ಎಲ್ಲಾ ಸಿದ್ಧತೆಗಳನ್ನು ಪೂರೈಸಿತ್ತು. ಉಜ್ಜನಿಯ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಆಗಮಿಸಿ ಚಾಲನೆ ನೀಡಿದರು.
  ಈ ಯಾಗದಲ್ಲಿ 11 ಅಗ್ನಿಕುಂಡದ ಸುತ್ತ ಒಟ್ಟು 88 ದಂಪತಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.
  ಮಹಾರುದ್ರಯಾಗದ ಋತ್ವಿಜರು ಗಂಗಾಪೂಜೆ, ಅಖಂಡ ಧರ್ಮ ದೀಪ ಪ್ರಜ್ವಲನಾ, ಗೌರಿ ಗಣಪತಿ ಪೂಜೆ, ರಕ್ಷಾ ಕಂಕಣ ಧಾರಣೆ, ಸಪ್ತ ದೇವತಾಪೂಜೆ, ಏಕಾದಶ ರುದ್ರ, ಕಲಶ ಪೂಜೆ, ಮಹಾ ರುದ್ರಾಭಿಷೇಕ ನೇರವೇರಿಸಿ ಮಹಾ ಮಂಗಳಾರತಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.