ಗುಲ್ಬರ್ಗಾ

'ಗುರುಮಠಕಲ್ ಅಭಿವೃದ್ಧಿಗೆ ಮುದ್ನಾಳ ಗೆಲ್ಲಿಸಿ'

Published On :

ಕನ್ನಡಪ್ರಭ ವಾರ್ತೆ, ಗುರುಮಠಕಲ್, ಏ.17
ಅಭಿವೃದ್ಧಿ ಸಂಕಲ್ಪದಿಂದ ಯಾದಗಿರಿ ಜಿಲ್ಲೆ ಘೋಷಣೆ ಮಾಡಿದೆ. ಈಗ ಗಡಿ ಭಾಗದಲ್ಲಿ ಅನಾಥವಾಗಿರುವ ಗುರುಮಠಕಲ್ ಅನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುತ್ತೇನೆ. ಅದಕ್ಕಾಗಿ ಕೆಜೆಪಿ ಅಭ್ಯರ್ಥಿಯನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕೆಂದು ಮಾಜಿ ಸಿಎಂ ಯಡಿಯೂರಪ್ಪ ಮನವಿ ಮಾಡಿದರು.
  ಪಟ್ಟಣದ ಜವಾಹರಲಾಲ್ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಕೆಜೆಪಿ ಅಭ್ಯರ್ಥಿ ವೆಂಕಟರಡ್ಡಿ ಮುದ್ನಾಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿ ಇಲ್ಲದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಳೆ ಹೋಗುತ್ತಿದ್ದಾರೆ. ಇದನ್ನು ನಿವಾರಿಸಲು ಈ ಕ್ಷೇತ್ರದಲ್ಲಿ ಸಂಪೂರ್ಣ ನೀರಾವರಿ ವ್ಯವಸ್ಥೆ ಒದಗಿಸಲಾಗುವುದು. ಯುವಕರಿಗೆ ಕೈಗಾರಿಕೆ ಸ್ಥಾಪನೆ ಮಾಡಲಾಗುವುದು, ಭೀಮಾ ನದಿ ಯೋಜನೆಯನ್ನು ಅನ್ನದಾತರು ಸಂಪೂರ್ಣವಾಗಿ ಲಾಭ ಪಡೆಯುವಂತೆ ಮಾಡಲಾಗುವುದು. ಗುರುಮಠಕಲ್ ಕ್ಷೇತ್ರ ನನ್ನ ಕ್ಷೇತ್ರವೆಂದು ನಂಬಿ ವೆಂಕಟರಡ್ಡಿ ಮುದ್ನಾಳರನ್ನು ಗೆಲ್ಲಿಸಿರಿ ಎಂದು ಹೇಳಿದರು.
ಗುಲಾಮಗಿರಿ ಪಂಜರದಿಂದ ಹೊರಬನ್ನಿ: ಕಳೆದ 5 ದಶಕಗಳಿಂದ ಇಲ್ಲಿ ಕಾಂಗ್ರೆಸ್‌ಗೆ ಮತ ನೀಡುತ್ತ ಬಂದಿದ್ದೀರಿ. ಆದರೆ ಈ ಕ್ಷೇತ್ರವು ಅಭಿವೃದ್ಧಿಯಿಂದ ದೂರವಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು, ಒಬ್ಬ ವ್ಯಕ್ತಿಯನ್ನು ನಾವು ಆಯ್ಕೆ ಮಾಡುವಾಗ ವ್ಯಕ್ತಿಯ ಚಿಂತನೆ ಮತ್ತು ಆಲೋಚನೆಯ ಜೊತೆಯಲ್ಲಿ ಬದಲಾವಣೆಯ ಗುರಿ ಬಗ್ಗೆ ತಿಳಿದುಕೊಂಡಿರಬೇಕು. ಎಲ್ಲಿಯವರೆಗೆ ನೀವು ಗುಲಾಮರಾಗಿ ಇರಲು ಬಯಸುತ್ತೀರಿ ಎಂದು ಪ್ರಶ್ನಿಸಿದ ಅವರು, ಈ ಪಂಜರದಿಂದ ಹೊರಗೆ ಬನ್ನಿ. ವೆಂಕಟರೆಡ್ಡಿ ಮುದ್ನಾಳ ಹುಮ್ಮಸ್ಸಿನ ಯುವಕರಾಗಿದ್ದು, ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ಎಂದರು.
ಬಿಎಸ್‌ವೈ ಕೈ ಬಲಪಡಿಸಿ: ಕ್ಷೇತ್ರದ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪನವರು ತಮ್ಮ ಅವಧಿಯಲ್ಲಿ ಮಾಡಿರುವ ಜನಪರ ಕಾರ್ಯಕ್ರಮಗಳು ಇನ್ನೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಅದರಲ್ಲೂ ಯಾದಗಿರಿ ಜಿಲ್ಲೆಗೆ ಅವರ ಕೊಡುಗೆ ಅಪಾರ. ನುಡಿದಂತೆ ನಡೆಯುವ ವ್ಯಕ್ತಿ ಅವರಾಗಿದ್ದು, ಕೆಜೆಪಿಯನ್ನು ಬೆಂಬಲಿಸುವ ಮೂಲಕ ಗುರುಮಠಕಲ್ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು ಎಂದು ಮನವಿ ಮಾಡಿದರು.
  ನಾಗರತ್ನ ಕುಪ್ಪಿ, ಡಾ. ಶರಣಭೂಪಾಲರೆಡ್ಡಿ ನಾಯ್ಕಲ್, ಸುಭಾಷ ಬಿರಾದಾರ, ವೆಂಕಟರೆಡ್ಡಿ ವಡವಟ್, ಖಂಡೆಪ್ಪ ದಾಸನ್, ಶರಣಗೌಡ ಬಾಡಿಯಾಳ, ಮಹಾದೇವಪ್ಪ ಯಲ್ಲಸತ್ತಿ, ಚಂದೂಲಾಲ್ ಚೌದ್ರಿ, ವೆಂಕಟಪ್ಪ ಅವಂಗಪುರ, ರಾಜೇಂದ್ರ ಕಲಾಲ, ನಾರಾಯಣರೆಡ್ಡಿ ಪೊಲೀಸ್ ಪಾಟೀಲ, ವಿಶ್ವನಾಥ ದೇಶಮುಖ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.