287 ಅಂಚೆ ಮತ ಚಲಾವಣೆ
ಕನ್ನಡಪ್ರಭ ವಾರ್ತೆ ಚಿಂಚೋಳಿ ಏ.29
ಪಟ್ಟಣದ ಚಂದಾಪುರ ನಗರದಲ್ಲಿರುವ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಚುನಾವಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಗೆ ಅಂಚೆ ಮತಪತ್ರ ಚಲಾಯಿಸುವ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 408 ಸಿಬ್ಬಂದಿಗಳಲ್ಲಿ ಕೇವಲ 287 ಸಿಬ್ಬಂದಿ ತಮ್ಮ ಅಂಚೆ ಮತಪತ್ರ ಮೂಲಕ ಮತ ಚಲಾಯಿಸಿದರು.
ಗುಲ್ಬರ್ಗ ಗ್ರಾಮೀಣ-31, ಗುಲ್ಬರ್ಗ ದಕ್ಷಿಣ-14, ಗುಲ್ಬರ್ಗ ಉತ್ತರ-7, ಅಫಜಲ್ಪುರ-3, ಜೇವರ್ಗಿ-5, ಚಿತ್ತಾಪುರ-2, ಆಳಂದ-3, ಸೇಡಂ-1, ಚಿಂಚೋಳಿ- 217 ಮತಗಳು ಚಲಾಯಿಸಲಾಗಿದೆ ಎಂದು ತಾಲೂಕು ಚುನಾವಣಾಧಿಕಾರಿ ಡಿ. ಮಂಜುನಾಥ ತಿಳಿಸಿದರು.
ಅಂಚೆ ಮತಪತ್ರ ಹೊಂದಿದ ಚುನಾವಣಾ ಕರ್ತವ್ಯ ಸಿಬ್ಬಂದಿ ಬೆಳಗ್ಗೆ 9 ರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮತ ಚಲಾಯಿಸಲು ಆಗಮಿಸಿದರು. ಮತದಾನ ಕೇಂದ್ರಕ್ಕೆ ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ರಮೇಶ ಯಾಕಾಪುರ, ಕಾಂಗ್ರೆಸ್ ಅಭ್ಯರ್ಥಿ ಡಾ. ಉಮೇಶ ಜಾಧವ, ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಭೇಟಿ ನೀಡಿ ಮತಯಾಚಿಸಿದರು.
ಮತದಾನ ಕೇಂದ್ರದಲ್ಲಿ ಹೆಚ್ಚಿನ ಅವ್ಯವಸ್ಥೆಯಾಗಿತ್ತು. ಎಲ್ಲ ಅಧಿಕಾರಿಗಳ ಮುಂದೆ ವಿವಿಧ ಪಕ್ಷಗಳ ಮುಖಂಡರು ಕಾರ್ಯಕರ್ತರು ತಮ್ಮ ಪಕ್ಷಗಳಿಗೆ ಮತ ನೀಡುವಂತೆ ಕೇಂದ್ರ ಹತ್ತಿರವೇ ಪ್ರಚಾರ ನಡೆಸಿದರು.
ವಿವಿಧ ಕಾರ್ಯಕರ್ತರು ಮತದಾನ ಕೇಂದ್ರದ ಹತ್ತಿರ ಭಾರಿ ಗದ್ದಲ ಜನ ಜಂಗುಳಿ ಹೆಚ್ಚಾಗಿರುವುದರಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಅಲ್ಲಿಂದ ಹೊರ ಹಾಕಿದರು. ನಂತರ ಶಾಂತಿಯುತ ಮತದಾನ ನಡೆಯಿತು. ತಾಲೂಕು ಚುನಾವಣಾಧಿಕಾರಿ ಡಿ. ಮಂಜುನಾಥ, ಸಹಾಯಕ ಚುನಾವಣಾಧಿಕಾರಿ ಮೋಹನ ಜೆ. ಜೋಶಿ, ತಹಸೀಲ್ದಾರ್ ಜಗನ್ನಾಥರೆಡ್ಡಿ ಇತರ ಅಧಿಕಾರಿಗಳು ಪರಿಶೀಲಿಸಿದರು.
ಮೇ 2ರವರೆಗೆ ವಿಸ್ತರಣೆ
ಗುಲ್ಬರ್ಗ: ಅಂಚೆ ಮೂಲಕ ಮತದಾನ ಮಾಡುವ ಮತದಾರರಲ್ಲಿ ಮಾಹಿತಿಯ ಗೊಂದಲವಿರುವ ಹಿನ್ನೆಲೆಯಲ್ಲಿ ಅಂಚೆ ಮತ ಚಲಾಯಿಸುವ ಅವಧಿಯನ್ನು ಮೇ 2ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಜಗದೀಶ ತಿಳಿಸಿದ್ದಾರೆ. ಜಿಲ್ಲೆಯ ಸುಮಾರು 12 ಸಾವಿರ ಸಿಬ್ಬಂದಿಗೆ ಏ.28ರಂದು ಅಂಚೆ ಮೂಲಕ ಮತ ಚಲಾಯಿಸುವ ಅವಕಾಶ ನೀಡಲಾಗಿತ್ತು. ಫಾರ್ಮ-12ನ್ನು ಭರ್ತಿ ಮಾಡಿ ಒದಗಿಸಲು ತಿಳಿಸಲಾಗಿತ್ತು. ಆಯೋಗದ ನಿರ್ದೇಶನದಂತೆ ಫಾರ್ಮ-12ನ್ನು ಭರ್ತಿ ಮಾಡದ ಕಾರಣ ಗೊಂದಲ ಉಂಟಾಗಿತ್ತು. ಇದಕ್ಕಾಗಿ ಅವಧಿಯನ್ನು ವಿಸ್ತರಿಸಲಾಗಿದೆ.
ಹೈಟೆಕ್ ಪ್ರಚಾರಕ್ಕೆ ಚಾಲನೆ
ಗುಲ್ಬರ್ಗ: ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಶೀಲ್ ನಮೋಶಿ ಅವರು ಹೈಟೆಕ್ ಪ್ರಚಾರಕ್ಕೆ ಸೋಮವಾರ ಚಾಲನೆ ನೀಡಿದರು. ನಮೋಶಿ ಅವರ ವ್ಯಕ್ತಿತ್ವ, ಬಿಜೆಪಿ ಸರ್ಕಾರದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಕೈಗೊಂಡಿರುವ ಜನಪರ ಯೋಜನೆಗಳ, ಕಾಮಗಾರಿಗಳ ಸಮಗ್ರ ಚಿತ್ರಣ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವಾರು ಪಕ್ಷದ ಗಣ್ಯರು ನಮೋಶಿ ಪರ ಮತಯಾಚನೆ ಮಾಡುವ ಕುರಿತು ಮತ್ತು ಕ್ಷೇತ್ರದ ಜನಾಭಿಪ್ರಾಯಗಳನ್ನು ಚಿತ್ರಿಕರಿಸಿದ ದೃಶ್ಯಗಳನ್ನು ಹೊಂದಿರುವ ವೀಡಿಯೋ ಸಿಡಿ ಮೂಲಕ ಟಿವಿ ಪರದೆಯಲ್ಲಿ ತೋರಿಸುವ ವ್ಯವಸ್ಥೆ ಹೊಂದಿರುವ ನಾಲ್ಕು ಸಂಚಾರಿ ವಾಹನಗಳಿಗೆ ಸೋಮವಾರ ಚಾಲನೆ ನೀಡಲಾಯಿತು. ಈ ನಾಲ್ಕು ವಾಹನಗಳ ಮೂಲಕ ಹೈಟೆಕ್ ಪ್ರಚಾರ ನಡೆಸಲಾಗುವುದು. ಈಗಾಗಲೇ ಕ್ಷೇತ್ರಾದ್ಯಂತ ಮೊದಲ ಸುತ್ತಿನ ಪ್ರಚಾರ ಕಾರ್ಯ ಸಂಪೂರ್ಣಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಹೈಟೆಕ್ ಪ್ರಚಾರಕ್ಕೆ ಚಾಲನೆ ನೀಡಲಾಗಿದ್ದು, ಇದು ಮತದಾರರನ್ನು ಪ್ರಭಾವಿತಗೊಳಿಸಲಿದೆ ಎಂದು ನಮೋಶಿ ಅವರು ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆ ಸದಸ್ಯ ಸಿದ್ದಾರ್ಥ ಪಟ್ಟೇದಾರ ಹಲವಾರು ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

