ಜನರ ಗೋಳು ಕೇಳೋರಿಲ್ಲ
ಕನ್ನಡಪ್ರಭ ವಾರ್ತೆ ಚಿಂಚೋಳಿ ಆ.1
ಸ್ಥಳೀಯ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು 5 ತಿಂಗಳು ಗತಿಸಿದರೂ ಈವರೆಗೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನಡೆಸಿಲ್ಲ, ನೂತನವಾಗಿ ಚುನಾಯಿತಗೊಂಡ ಸದಸ್ಯರು ತಮ್ಮ ವಾರ್ಡುಗಳಲ್ಲಿರುವ ಜನರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಸಾರ್ವಜನಿಕರು ತೊಂದರೆ ಪಡುವಂತಾಗಿದೆ.
ಸ್ಥಳೀಯ ಪಪಂ.ನ ಒಟ್ಟು 18 ವಾರ್ಡುಗಳಿಗೆ ಕಳೆದ ಮಾರ್ಚ್ನಲ್ಲಿ ಚುನಾವಣೆ ನಡೆಸಲಾಗಿದೆ. 18 ವಾರ್ಡಗಳಲ್ಲಿ ಆಡಳಿತರೂಢ ಕಾಂಗ್ರೆಸ್ 10 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಕೆಜೆಪಿ 6 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದು, ಇನ್ನು 2 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಗೊಂಡಿದ್ದಾರೆ.
ಕುಡಿವ ನೀರು, ವಿದ್ಯುತ್ತಿಲ್ಲ: ಪಟ್ಟಣದಲ್ಲಿ ಕಳೆದ ಮೂರು ತಿಂಗಳಿಂದ ಹಲವು ಬಡಾವಣೆಗಳಲ್ಲಿ ವಿದ್ಯುತ್ ದೀಪಗಳು ಹಾಳಾಗಿವೆ. ಕಲ್ಯಾಣಗಡ್ಡಿ, ಮೋಮಿನಪುರ, ಜೋಶಿ ಗಲ್ಲಿ, ಚಂದಾಪುರ ಆಶ್ರಯ ಕಾಲೋನಿ, ಬೆಳ್ಳಿ ಬೆಳಕು ಹಾಗೂ ಪೊಲೀಸ್ ಕ್ವಾರ್ಟರ್ಸ್ ಮುಂತಾದ ಕಡೆಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಕೆಲ ಕಡೆಗಳಲ್ಲಿ ನೀರಿನ ಪೈಪುಗಳು ಒಡೆದಿವೆ. ಆದರೆ ಈವರೆಗೂ ದುರಸ್ತಿ ಕಂಡಿಲ್ಲ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.
ತುಂಬಿರುವ ಚರಂಡಿ: ಪಟ್ಟಣದ ಧನಗರ ಗಲ್ಲಿ, ಕಲ್ಯಾಣಗಡ್ಡಿ, ಮಹಾಂತೇಶ್ವರ ಮಠ, ಚೋಟಿ ದರ್ಗಾ, ಬಡಿದರ್ಗಾ ಹಾಗೂ ಹರಿಜನವಾಡಗಳಲ್ಲಿ ಚರಂಡಿಗಳು ಹೊಲಸು ತುಂಬಿ ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಪಟ್ಟಣದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ.
ಪಟ್ಟಣದಲ್ಲಿ ಹಲವು ಮಹಿಳೆಯರಿಗೆ ಶೌಚಾಲಯವಿಲ್ಲ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಮಹಿಳಾ ಶೌಚಾಲಯಗಳು ದುಸ್ಥಿತಿಯಲ್ಲಿದ್ದು ಮಹಿಳೆಯರಿಗೆ ಗಿಡಮರಗಳೇ ಆಸರೆಯಾಗಿವೆ. ಸರ್ಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಕೋಟ್ಯಂತರ ಅನುದಾನ ಮಂಜೂರಾಗಿದೆ. ಆದರೆ ಅನವಶ್ಯಕವಾಗಿ ಖರ್ಚು ಮಾಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ.
ದುರ್ನಾತ: ಪಟ್ಟಣದಲ್ಲಿ ಎಸ್ಬಿಎಚ್ ಬ್ಯಾಂಕ್ ಬಳಿಯ ಮೂತ್ರಾಲಯ ವಾಸನೆಯಿಂದ ನಾರುತ್ತಿದೆ. ಪಪಂ ಇತ್ತ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದಲ್ಲಿ ವಿದ್ಯುತ್ ದೀಪ, ಕುಡಿವ ನೀರು, ಮಹಿಳೆಯರಿಗೆ ಶೌಚಾಲಯ ಸಮಸ್ಯೆ, ಚರಂಡಿಗಳು ಹೊಲಸು ವಾಸನೆ ನಾರುತ್ತಿದೆ. ಬ್ಲಿಚಿಂಗ್ ಪೌಡರ್ ಹಾಕಿಲ್ಲ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಸ್ಪಂದಿಸಿಲ್ಲವೆಂದು ಪಪಂ ಸದಸ್ಯ ಮಲ್ಲಮ್ಮ ಜಾಬಶೆಟ್ಟಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ ಅವರು ಇನ್ನೆರಡು ದಿನಗಳ ಕಾಲಾವಕಾಶ ಕೇಳಿದ್ದಾರೆ. ಅವರು ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ ಎಂದು ಪಪಂ ಸದಸ್ಯ ಅಬ್ದುಲ್ ಬಾಸಿತ್ ತಿಳಿಸಿದ್ದಾರೆ.
ಪಪಂ ಸದಸ್ಯರಾಗಿ ಆಯ್ಕೆಗೊಂಡು 5 ತಿಂಗಳು ಕಳೆದಿವೆ. ಪಟ್ಟಣದಲ್ಲಿ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿವೆ. ಚರಂಡಿಗಳು ತುಂಬಿ ತುಳಕುತ್ತಿವೆ. ವಿದ್ಯುತ್ ವ್ಯವಸ್ಥೆಯಿಲ್ಲ, ಮುಖ್ಯಾಧಿಕಾರಿಗಳಿಗೆ ತಿಳಿಸಿದರೆ ಅವರು ಗಮನ ಹರಿಸುತ್ತಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳೂ ನಡೆಯುತ್ತಿಲ್ಲ. ಕಾಂಗ್ರೆಸ್ ಆಡಳಿತ ಪಟ್ಟಣದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಪಪಂ ಕೆಜೆಪಿ ಸದಸ್ಯ ವೀರಣ್ಣ ಬಬಲಾದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

