ಗುಲ್ಬರ್ಗಾ

ಸಸಿ ನೆಡುವ ಕಾರ್ಯಕ್ರಮ

Published On :

ಚಿತ್ತಾಪುರ: ತಾಲೂಕಿನ ಅಳ್ಳಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಯಾದಗಿರಿ ವಿಶೇಷ ಪೊಲೀಸ್ ಠಾಣೆಯ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಇಲಾಖೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಜರುಗಿತು. ಗ್ರಾಪಂ ಅಧ್ಯಕ್ಷ ಶರಣಪ್ಪ ಕೋಣಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಪಿಐ ಶಿವಲಿಂಗ ಆರಾಧ್ಯ, ಗ್ರಾಪಂ ಸದಸ್ಯ ದೇವಿಂದ್ರಪ್ಪ ಹಾದಿಮನಿ, ಮುಖಂಡರಾದ ಬಸಣ್ಣ ದೊಡ್ಮನಿ, ದೇವರಾಜ ಗೌಡ, ಸಾಹೇಬರೆಡ್ಡಿ, ಶ್ರೀಶೈಲ್ ಗುತ್ತೇದಾರ, ಭೀಮಣ್ಣ ದಂಡಗುಂಡ, ನಾಗರಡ್ಡಿ ನಾಚವಾರ್, ಹಂಪಣ್ಣ ಉಳ್ಳಾಗಡ್ಡಿ, ಗೌಡಪ್ಪ ಪಿಸಿ, ಸಣ್ಣಕೇಪ್ಪ ಪಿಸಿ. ಶಿಕ್ಷಕರಾದ ಶರಣಪ್ಪ, ನಾಗರಾಜ, ಸುಭಾಷ, ಬಸವರಾಜ, ಮಡಿವಾಳಪ್ಪ ಉಪಸ್ಥಿತರಿದ್ದರು.
ದಂಡೋತಿ; ಪೈಕಾ, ದಸರಾ ಕ್ರೀಡಾಕೂಟ
ಗುಲ್ಬರ್ಗ: ಪ್ರಸಕ್ತ ಸಾಲಿನ ಚಿತ್ತಾಪುರ ತಾಲೂಕು ಮಟ್ಟದ ಪೈಕಾ ಕ್ರೀಡಾಕೂಟ ಅ.6 ರಂದು ಹಾಗೂ ದಸರಾ ಕ್ರೀಡಾಕೂಟ ಆ.7 ರಂದು ತಾಲೂಕಿನ ದಂಡೋತಿ ಸರ್ಕಾರಿ ಫ್ರೌಢಶಾಲೆಯ ಆಟದ ಮೈದಾನದಲ್ಲಿ ನಡೆಯಲಿವೆ. ಪೈಕಾ ಕ್ರೀಡಾಕೂಟದಲ್ಲಿ ಖೋ- ಖೋ, ಕಬ್ಬಡ್ಡಿ, ಕುಸ್ತಿ, ವಾಲಿಬಾಲ್ ಹಾಗೂ ಅಥ್ಲೇಟಿಕ್ ಸ್ಪರ್ಧೆಗಳು ಹಾಗೂ ದಸರಾ ಕ್ರೀಡಾಕೂಟದಲ್ಲಿ ಖೋ-ಖೋ, ಕಬ್ಬಡ್ಡಿ, ವಾಲಿಬಾಲ್ ಹಾಗೂ ಅಥ್ಲೇಟಿಕ್ ಸ್ಪರ್ಧೆಗಳು ನಡೆಯಲಿದ್ದು, ಆಸಕ್ತಿಯುಳ್ಳ ಕ್ರೀಡಾಪಟುಗಳು ಆಯಾ ದಿನ ಬೆಳಿಗ್ಗೆ 9ಕ್ಕೆ ಆಟದ ಮೈದಾನದಲ್ಲಿ ಹಾಜರಾಗುವಂತೆ ಕ್ರೀಡಾ ಇಲಾಖೆಯ ಸ. ನಿರ್ದೇಶಕರು ತಿಳಿಸಿದ್ದಾರೆ.
ನಾಳೆ ಶ್ರಾವಣ ಕಾರ್ಯಕ್ರಮಗಳಿಗೆ ಚಾಲನೆ
ಗುಲ್ಬರ್ಗ: ಜಿಲ್ಲೆಯ ಸುಕ್ಷೇತ್ರ ನಾಲವಾರ ಸದ್ಗುರು ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಆ.6ರ ನಾಗರ ಅಮವಾಸ್ಯೆಯಂದು ಶ್ರಾವಣ ಮಾಸದ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. 6ರಂದು ನಾಗರ ಅಮಾವಾಸ್ಯೆಯ ಅಂಗವಾಗಿ ಪೀಠಾಧಿಪತಿ ಡಾ. ಸಿದ್ದತೋಟೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸನ್ನಿಧಿಯಲ್ಲಿ ಮಾಸಿಕ ಶಿವಾನುಭವ ಚಿಂತನ ಹಾಗೂ ಶ್ರಾವಣ ಮಾಸಿಕ ಶಿವಾನುಭವ ಚಿಂತನ ಹಾಗೂ ಶ್ರಾವಣ ಮಾಸದ ತಿಂಗಳ ಪರ್ಯಂತರ ನಡೆಯುವ ವಿಶೇಷ ಪೂಜೆ, ಅಭಿಷೇಕ, ಧಾರ್ಮಿಕ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನೆರವೇರಲಿದೆ ಎಂದು ಶ್ರಾವಣ ಮಾಸ ಉತ್ಸವ ಸಮಿತಿ ತಿಳಿಸಿದೆ. ಶ್ರಾವಣ ತಿಂಗಳ ಪರ್ಯಂತರ ಕರ್ತೃ ಸದ್ಗುರು ಕೋರಿಸಿದ್ದೇಶ್ವರ ಶಿವಯೋಗಿಗಳ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಲಿದೆ. ಡಾ. ಸಿದ್ದ ತೋಟೇಂದ್ರ ಮಹಾಸ್ವಾಮಿಗಳ ಇಷ್ಟಲಿಂಗ ಸಹಿತ ಸಾರ್ವಜನಿಕ ಮಹಾಪಾದಪೂಜೆ ಸಂಭ್ರಮದಿಂದ ನಡೆಯಲಿದೆ. ಇದರಲ್ಲಿ ನಾಡಿನ, ಹೊರನಾಡಿನ ಅಪಾರ ಭಕ್ತರು ಭಕ್ತಿಯಿಂದ ಭಾಗವಹಿಸುವರು. ಪ್ರತಿದಿನ ರಾತ್ರಿ ಭಜನಾ ಮಂಟಪದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳ ಭಜನಾ ಮಂಡಳಿಗಳಿಂದ ಸೇವೆ ನಡೆಯಲಿದೆ ಹಾಗೂ ವಿಶೇಷ ಧಾರ್ಮಿಕ ಪ್ರವಚನ ಸಭೆಗಳೂ ನಡೆಯಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಬೇಕೆಂದು ಕೋರಲಾಗಿದೆ.
ಝಾನ್ಸಿ ಕೈಯಲ್ಲಿ ಹುಕ್ಕಾ: ಎನ್ಸಿಇಆರ್ಟಿ ಕೃತ್ಯ - ಆರೋಪ
ಗುಲ್ಬರ್ಗ: ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಬಲಿದಾನ ಮಾಡಿದ ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರನ್ನು 'ಹುಕ್ಕಾ ಪೈಪ್ ಹಿಡಿದಂತೆ' ಕಾಣುವ ಚಿತ್ರ 5ನೇ ತರಗತಿಯ ಪಠ್ಯಪುಸ್ತಕದಲ್ಲಿ ಅಚ್ಚುಹಾಕಿ ಪ್ರಕಟಿಸಿದ ಎನ್‌ಸಿಇಆರ್‌ಟಿಯ ಹೇಯಕೃತ್ಯ ಎಂದು ಕರ್ನಾಟಕ ಜನತಾ ಪಕ್ಷದ ಮಹಾನಗರ ಜಿಲ್ಲಾ ಘಟಕ ಅಧ್ಯಕ್ಷ ಬಸವರಾಜ ಇಂಗಿನ್ ಆರೋಪಿಸಿದ್ದಾರೆ. 5ನೇ ತರಗತಿ ಪಠ್ಯಪುಸ್ತಕದಲ್ಲಿ ಮುದ್ರಿತವಾದ ಈ ಚಿತ್ರಕ್ಕೆ ಸಂಬಂಧಿಸಿದವರು ಕೂಡಲೇ ಹಂಚಿಕೆಯಾದ ಎಲ್ಲ ಪಠ್ಯಪುಸ್ತಕಗಳನ್ನು ಹಿಂದಕ್ಕೆ ಪಡೆದು ಈ ಚಿತ್ರವನ್ನು ಪಠ್ಯಪುಸ್ತಕದಿಂದ ತೆಗೆದುಹಾಕಬೇಕು. ಇಂತಹ ಅಪಚಾರ ಎಸಗಿದ ಎನ್‌ಸಿಇಆರ್‌ಟಿ ಕೂಡಲೇ ಸಾರ್ವಜನಿಕರ ಕ್ಷಮೆ ಯಾಚಿಸಬೇಕು ಹಾಗೂ ಸರ್ಕಾರ ಇಂತಹ ಕೃತ್ಯ ಎಸಗಿದ ಎನ್‌ಸಿಇಆರ್‌ಟಿ ಸಮಿತಿ ಹಾಗೂ ಅಧಿಕಾರಿಗಳನ್ನು ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇದೇ ಪಠ್ಯಪುಸ್ತಕದಲ್ಲಿ ರಾಹುಲ್ ಗಾಂಧಿಯಂತಹ ಒಬ್ಬ ಸಂಸದನ ಕಥೆ ಮುದ್ರಿಸಿ ಸೇರಿಸಿದೆ. ಒಬ್ಬ ಸಂಸದ ಹಾಗೂ ಒಂದು ರಾಷ್ಟ್ರೀಯ ಪಕ್ಷ ಉಪಾಧ್ಯಕ್ಷರ ವಿಷಯ ಪಠ್ಯಪುಸ್ತಕದಲ್ಲಿ ಸೇರಿಸುವುದು ಆ ಪಕ್ಷದ ಹಾಗೂ ಆ ವ್ಯಕ್ತಿಯ ಪ್ರಚಾರಕ್ಕಾಗಿ ಮುದ್ರಿಸಲಾಗಿದೆ. ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ರಾಹುಲ್‌ಗಾಂಧಿ ವಿಷಯ ಸೇರಿಸಿರುವುದು ಸಮಂಜಸವಲ್ಲ. ಆದ್ದರಿಂದ ಇದನ್ನು ಸರ್ಕಾರ ಹಿಂಪಡೆದು ಸಂಬಂಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕುಟುಂಬಕ್ಕೊಂದು ಶೌಚಾಲಯ: ಗುತ್ತೇದಾರ
ಗುಲ್ಬರ್ಗ: ಕುಟುಂಬಕ್ಕೊಂದು ಶೌಚಾಲಯ ನಿರ್ಮಿಸಿದರೆ ಬಯಲು ಮಲ ವಿಸರ್ಜನೆ ಪದ್ಧತಿಯನ್ನು ತೊಡೆದು ಹಾಕಲು ಸಾಧ್ಯ ಎಂದು ನಿರ್ಮಲ ಭಾರತ ಅಭಿಯಾನದ ಜಿಲ್ಲಾ ಸಂಯೋಜಕ ಸುಭಾಷ ಗುತ್ತೇದಾರ ಕರೆ ನೀಡಿದರು. ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಗುಲ್ಬರ್ಗ, ಜಿಪಂ ನಿರ್ಮಲ ಭಾರತ ಅಭಿಯಾನ ಘಟಕ, ಶಿಶು ಅಭಿವೃದ್ಧಿ ಯೋಜನೆ ಸಾರ್ವಜನಿಕ ಶಿಕ್ಷಣ ಇಲಾಖೆ, ಸಹರಾ ಸ್ವಯಂ ಸೇವಾ ಸಂಸ್ಥೆ, ರೆಹನುಮಾ ಸಹಾಯ ಮತ್ತು ಸಬಲೀಕರಣ ಕೇಂದ್ರ ಗುಲ್ಬರ್ಗ ಇವರ ಸಂಯುಕ್ತಾಶ್ರಯದಲ್ಲಿ ಸಣ್ಣೂರ ಗ್ರಾಮದಲ್ಲಿ ನಿರ್ಮಲ ಭಾರತ ಅಭಿಯಾನ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ನಿರ್ಮಲ ಭಾರತ ಅಭಿಯಾನದ ಜಿಲ್ಲಾ ಸಂಯೋಜಕ ಸುಭಾಷ ಅಲ್ದಿ ಮಾತನಾಡಿದರು. ಸತ್ಯವ್ವ ನಾರಾಯಣಕರ್, ತಾಪಂ ಸದಸ್ಯ ಮಲ್ಲಿಕಾರ್ಜುನ ವಕೀಲರು, ಗ್ರಾಪಂ ಸದಸ್ಯರಾದ ಭೀಮರಾಯ ತಳವಾರ, ಆರ್. ಪಾಟೀಲ ಅತಿಥಿಗಳಾಗಿ ಭಾಗವಹಿಸಿದ್ದರು. ಕ್ಷೇತ್ರ ಪ್ರಚಾರ ಸಹಾಯಕ ಶಿವಶರಣಪ್ಪ ಕಿಣಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಸಹ ಶಿಕ್ಷಕರು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.