ಶ್ರಾವಣ ಚಿಂತನ- ಮಂಥನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಆ.6
ಶ್ರಾವಣ ಮಾಸದ ನಿಮಿತ್ತ 40 ದಿನಗಳ ಕಾಲ ದಾಸೋಹ ಅಂಗಳದಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಂಗಳವಾರ ನಾಗರ ಅಮವಾಸ್ಯೆಯಂದು ಚಾಲನೆ ನೀಡಲಾಯಿತು.
ನಗರದ ಶರಣಬಸವೇಶ್ವರ ಸಂಸ್ಥಾನದಲ್ಲಿ ಶರಣಬಸವೇಶ್ವರ ಪುರಾಣ ಪ್ರವಚನ ಮತ್ತು ಖ್ಯಾತ ಸಂಗೀತ ಕಲಾವಿದರಿಂದ ವಚನಾಂಜಲಿ ನಡೆಸುವ ಮೂಲಕ ಸಂಗೀತ ಕಾರ್ಯಕ್ರಮಕ್ಕೆ ಮತ್ತು ಸಾಂಸ್ಕೃತಿಕ ಶಿಭಾನುವಭ ಉಪನ್ಯಾಸ ಮಾಲಿಕೆಯ ವಿಶೇಷ ಕಾರ್ಯಕ್ರಮಗಳಿಗೆ ಗಣ್ಯರು ಹಸಿರು ನಿಶಾನೆ ತೋರಿದರು.
ಜಿಲ್ಲೆಯ ಜನರ ಭಕ್ತಿ ಪ್ರಧಾನವಾದ ನಗರದ ಶರಣಬಸವೇಶ್ವರ ದೇವಸ್ಥಾನಕ್ಕೆ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಸಾವಿರಾರು ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ದರ್ಶನ ಪಡೆದು ಪೂಜೆ ಪುನಾಸ್ಕಾರದಲ್ಲಿ ತೊಡಗಿರುವುದು ಕಂಡು ಬಂದಿತ್ತು.
ವಚನಾಂಜಲಿ: ಸಂಜೆ 5.30ರಿಂದ 6.30ರವರೆಗೆ ಡಾ. ಸೀಮಾ ಪಾಟೀಲ್, ಡಾ. ಕಲಾವತಿ ದೊರೆ, ಪ್ರೊ. ಛಾಯಾ ಭರತನೂರ್, ಪ್ರೊ. ಎಂ.ಎಸ್. ಪಾಟೀಲ್, ಪ್ರೊ. ರೇವಯ್ಯ ವಸ್ತ್ರದಮಠ ಮತ್ತು ವಿಜಯಲಕ್ಷ್ಮೀ ಕೆಂಗನಾಳ ಹಾಗೂ ರೇವಣಸಿದ್ದಪ್ಪ ಹೂಗಾರ ಅವರು ವಚನಾಂಜಲಿ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಜೆ 6.30ಕ್ಕೆ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಹಾಗೂ ಪುರಾಣ ಪ್ರವಚನ ಪ್ರವೀಣ ಡಾ. ಶಿವರಾಜ ಶಾಸ್ತ್ರೀ ಹೇರೂರ ಅವರು ದಾಸೋಹ ಭಂಡಾರಿ ಶರಣಬಸವೇಶ್ವರರ ಜನಪದ ಮಹಾಕಾವ್ಯದ ಪ್ರವಚನ ಆರಂಭಿಸಿದರು. ಸಂಜೆ 7.30ಕ್ಕೆ ಸಾಂಸ್ಕೃತಿಕ ಶಿವಾನುಭವ ಉಪನ್ಯಾಸ ಮಾಲಿಕೆಯ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಾದರಿ ಶಿಕ್ಷಣ ಸಂಸ್ಥೆ: ಗುವಿವಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಬಸವರಾಜ ಸಬರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಲ್ಲಿನ ಪ್ರತಿಷ್ಠಿತ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯು ಅನ್ನ ದಾಸೋಹದೊಂದಿಗೆ ಅಕ್ಷರ ಮತ್ತು ಜ್ಞಾನ ದಾಸೋಹ ನೀಡುವ ಮೂಲಕ ರಾಜ್ಯದಲ್ಲಿಯೇ ಮಾದರಿ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು.
ಹಲವಾರು ಮಠಗಳು ಇನ್ನೂ ಗುರುಕುಲ ಪದ್ಧತಿಯಲ್ಲಿಯೇ ಶಿಕ್ಷಣ ನೀಡುತ್ತಿವೆ. ಆದರೆ, ಈ ಸಂಸ್ಥೆಯು ಪ್ರಸ್ತುತ ನೆಲೆಗಟ್ಟಿನಲ್ಲಿ ಶರಣ ಸಂಸ್ಕೃತಿಯ ಜೊತೆಗೆ ವೈಜ್ಞಾನಿಕವಾಗಿ ಶಿಕ್ಷಣ ನೀಡುತ್ತ, ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿದೆ ಎಂದರು.
ವ್ಯಕ್ತಿ ಸಾಧನೆಯ ಕೊನೆಯ ಹಂತ ಜ್ಞಾನ ದಾಸೋಹ ಎಂಬುದನ್ನು ಮನಗಂಡಿರುವ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರು ಅನ್ನ ದಾಸೋಹ, ಅಕ್ಷರ ದಾಸೋಹದ ಜೊತೆಗೆ ಜ್ಞಾನ ದಾಸೋಹ ನೀಡುತ್ತಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಡಾ. ಎಸ್.ಜಿ. ಡೊಳ್ಳೆ ಅಧ್ಯಕ್ಷತೆ ವಹಿಸಿದ್ದರು. ಪ್ರವಚನಕಾರ ಹಾಗೂ ಸಂಸ್ಥೆಯ ಉಪನ್ಯಾಸಕ ಡಾ. ಶಿವರಾಜ ಶಾಸ್ತ್ರಿ ಹೇರೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ನಿರ್ಮಲಾ ಮಂಟೂರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಕೆ.ಎಸ್. ನಾಯಕ ಅತಿಥಿಗಳನ್ನು ಪರಿಚಯಿಸಿದರು. ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

