ಉಪ ಚುನಾವಣೆ; ಮುನ್ನಾಗೆ ಗೆಲವು
ಗುಲ್ಬರ್ಗ/ಶಹಾಬಾದ್: ಭಂಕೂರ ಗ್ರಾಮದ ವಾರ್ಡ್ 6ರ ಸದಸ್ಯನ ಮರಣದಿಂದ ತೆರವಾದ ಸ್ಥಾನಕ್ಕೆ ನಡೆದು ಉಪ ಚುನಾವಣೆಯಲ್ಲಿ ಮುನ್ನಾ ಪಟೇಲ್ 56 ಮತಗಳ ಅಂತರದಿಂದ ಗೆಲವು ಸಾಧಿಸಿದರು. ಭಾನುವಾರದಂದು ಚುನಾವಣೆ ನಡೆದು ಬುಧವಾರ ಚಿತ್ತಾಪುರ ತಹಸೀಲ್ ಕಚೇರಿಯಲ್ಲಿ ಮತ ಎಣಿಕೆ ನಡೆದು ಮುನ್ನಾ ಪಟೇಲ್ 310 ಮತ ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಮಹ್ಮದ್ ಮತೀನ್ ಅವರಿಗಿಂತ 56 ಮತಗಳ ಅಂತರದಿಂದ ಗೆಲವು ಸಾಧಿಸಿದರು. ಪಟೇಲ್ರ ಗೆಲವಿಗೆ ಅವರ ಬೆಂಗಲಿಗರು ಗ್ರಾಮದಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಅಚರಿಸಿದರು. ವಿಜಯೋತ್ಸವದಲ್ಲಿ ಸುರೇಶ ಮೆಂಗನ್, ಮಹ್ಮದ್ ನದೀಮ್, ತೇಜಸ್ ಧನ್ನಾ, ಮರೆಪ್ಪ ಮುಸಲಿ, ತಿಪ್ಪಣ್ಣ ಕುಂಬಾರ, ಮುನೀರ್ ಕೊಟನೂರ ಹುಲೆಪ್ಪ, ಬಸವರಾಜಗೌಡ, ಬಾಬಾ ಪಟೇಲ್, ಮಕ್ಬೂಲ್, ಮತೀನ್ ಇದ್ದರು.
ನೇತ್ರ ತಪಾಸಣಾ ಶಿಬಿರ ಯಶಸ್ವಿ
ಗುಲ್ಬರ್ಗ: ಜಿಲ್ಲೆಯ ಕಮಲಪುರ ಪಟ್ಟಣದ ಹೈ.ಕ. ಶಿಕ್ಷಣ ಸಂಸ್ಥೆಯ ಐಟಿಐ ವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 380 ಜನರ ಕಣ್ಣುಗಳನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಲಾಯಿತು.
ಕಮಲಪುರ ಸುತ್ತ ಮುತ್ತಲಿನ ಗ್ರಾಮದ 27 ಪುರುಷರು, 24 ಮಹಿಳೆಯರು ಮತ್ತು 3 ಮಕ್ಕಳು ಒಟ್ಟು 54 ಬಡ ಹಿರಿಯ ನಾಗರಿಕರ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಬಸವೇಶ್ವರ ಆಸ್ಪತ್ರೆಯಲ್ಲಿ ನೆರವೇರಿಸಿ ಕೃತ್ರಿಮ ಮಸೂರ ಅಳವಡಿಸಲಾಯಿತು.
ಜರ್ಮನಿಯ ಹಮಾರ ಬಂಧನ ಸ್ವಯಂ ಸೇವಾ ಸಂಸ್ಥೆ ಹಾಗೂ ಹೈ.ಕ. ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಈ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕ್ಯಾಟರ್ಯಾಕ್ಸ್ ಸರ್ಜರಿಗೆ ಒಳಪಟ್ಟು 54 ಫಲಾನುಭವಿಗಳಿಗೆ ಬಿಡುಗಡೆಯ ದಿನ ಹೈ.ಕ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಅವರು ಪ್ರತಿಯೊಬ್ಬ ರೋಗಿಯನ್ನು ಭೇಟಿ ಮಾಡಿ ಅವರ ಯೋಗಕ್ಷೇವುವನ್ನು ವಿಚಾರಿಸಿದರು. ರೋಗಿಗಳಿಗೆ ಉಚಿತವಾಗಿ ಕನ್ನಡಕ ಮತ್ತು ಕಣ್ಣಿನ ಔಷಧವನ್ನು ವಿತರಿಸಿದರು.
ಲಕ್ಷ್ಮಣ ದಸ್ತಿ ಹೇಳಿಕೆಗೆ ಬಡಿಗೇರ ಖಂಡನೆ
ಗುಲ್ಬರ್ಗ: ಭಾಷಾವಾರು ರಚನೆ ಬಳಿಕ ಕರ್ನಾಟಕ ರಾಜ್ಯ ನಿರ್ಮಾಣವಾಗಿದೆ. ಹೈ-ಕ ಜನರು ಅಖಂಡ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದಾರೆ. ಕೇವಲ ಪ್ರಚಾರಕ್ಕಾಗಿ ಜನಪರ ಸಂಘರ್ಷ ಸಮಿತಿಯ ಮುಖಂಡ ಲಕ್ಷ್ಮಣ ದಸ್ತಿ ಅವರು ಸ್ವಾತಂತ್ರ್ಯೋತ್ಸವ ದಿನದಂದು ಪ್ರತ್ಯೇಕ ಧ್ವಜಾರೋಹಣ ಮಾಡುವುದಾಗಿ ಹೇಳಿಕೆ ನೀಡಿರುವುದು ದೇಶದ್ರೋಹಿಯ ಕಾರ್ಯ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ ಖಂಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಂವಿಧಾನದ ಬದ್ಧವಾಗಿ ಆ.15ರಂದು ರಾಷ್ಟ್ರ ಧ್ವಜವನ್ನು ದೇಶದ ಎಲ್ಲೆಡೆ ಹಾರಿಸುವುದು ಭಾರತೀಯ ನಾಗರಿಕರ ಆದ್ಯ ಕರ್ತವ್ಯ. ಇಂತಹ ಸಂದರ್ಭದಲ್ಲಿ ನಮಗೆ ಪ್ರತ್ಯೇಕ ರಾಜ್ಯ ಬೇಕು ಎಂದು ಹೇಳಿಕೆ ನೀಡಿರುವುದು ತೀವ್ರ ಖಂಡನೀಯವಾಗಿದೆ ಎಂದು ತಿಳಿಸಿದ್ದಾರೆ. ತೆಲಂಗಾಣ ರಾಜ್ಯ ನಿರ್ಮಾಣವಾಗಿದ್ದು ಅವರಿಗೆ ಅನಿವಾರ್ಯವಾಗಿರಬಹುದು. ಅಂತಹ ಪ್ರತ್ಯೇಕ ರಾಜ್ಯದ ಅನಿವಾರ್ಯತೆ ನಮಗಿಲ್ಲ. ಸಮಗ್ರ ಅಭಿವೃದ್ಧಿಗಾಗಿ ಸಂವಿಧಾನದ 371ನೇ(ಜೆ) ತಿದ್ದುಪಡಿಯಾಗಿ ಅನುಷ್ಠಾನಕ್ಕೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿರುವುದು ಸಮಂಜಸವಲ್ಲ. ಒಂದು ವೇಳೆ ಪ್ರತ್ಯೇಕ ರಾಜ್ಯದ ಧ್ವಜಾರೋಹಣಕ್ಕೆ ಕೈಹಾಕಿದರೆ ಮುಂದಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಬಡಿಗೇರ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
'ಪಠ್ಯದೊಂದಿಗೆ ಕ್ರೀಡೆ ಅಗತ್ಯ'
ಚಿತ್ತಾಪುರ: ಪ್ರತಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಜಿಪಂ ಸದಸ್ಯ ರಮೇಶ ಮರಗೋಳ ಅವರು ಕರೆ ನೀಡಿದರು. ತಾಲೂಕಿನ ದಂಡೋತಿಯಲ್ಲಿ ಪ್ರಸಕ್ತ ಸಾಲಿನ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಸೋಲು-ಗೆಲವು ಮುಖ್ಯವಲ್ಲ, ಕ್ರೀಡೆಯಲ್ಲಿ ಆಸಕ್ತಿ ವಹಿಸಿ ಭಾಗವಹಿಸುವುರಿಂದ ಕ್ರೀಡಾ ಮನೋಭಾವನೆ ಬೆಳೆಯುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ರಸೀದಮಿಯ್ಯ ಪಠಾಣ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಗ್ರಾಪಂ ಅಧ್ಯಕ್ಷ ಸಾಬಣ್ಣ ಕೊಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶರಣಬಸವೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಭೀಮರಾಯ ತೋಟದ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಲಕ್ಷ್ಮಣ ಲೋಡ್ಡನೋರ್, ದೇವಿಂದ್ರರಡ್ಡಿ ದುಗನೂರ, ರಾಜಶೇಖರ ತಮ್ಮನಾಯಕ ಇತರರಿದ್ದರು.
ಇಂದು ಪ್ರತಿಷ್ಠಾಪನೆ
ಗುಲ್ಬರ್ಗ: ಗುರುರಾಜ ಸೇವಾ ಸಮಿತಿ ಮತ್ತು ಗುರುಸಾರ್ವಭೌಮ ಭಜನಾ ಮಂಡಳಿಗಳ ಸಂಯುಕ್ತಾಶ್ರಯದಲ್ಲಿ ಆ.8 ರಂದು ಜಗತ್ನಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಶೇಷದೇವರ (ನಾಗರಾಜ) ಪ್ರತಿಷ್ಠಾಪನೆ ನಡೆಯಲಿದೆ. ನಾಗದೇವರ ಪ್ರತಿಮೆಯನ್ನು ಬೆಂಗಳೂರಿನ ಶ್ವೇತಾ ರಾಮಪ್ರಸಾದ ಮುದಲಿಯಾರ ಮತ್ತು ಗುಲ್ಬರ್ಗದ ಮೊದಲಿಯಾರ ಪರಿವಾರದವರು ಸಮರ್ಪಿಸಲಿದ್ದಾರೆ. ಬೆಳಿಗ್ಗೆ 8ಕ್ಕೆ ಶೇಷದೇವರ ಪ್ರತಿಷ್ಠಾಪನೆ ನಡೆಯುವುದು. 11ಕ್ಕೆ ಪಂಡಿತ ಪ್ರಸನ್ನ ಆಚಾರ ಜೋಶಿ ಪ್ರವಚನ ನೀಡಲಿದ್ದಾರೆ. ಪತ್ರಕರ್ತ ಜಯತೀರ್ಥ ಪಾಟೀಲ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಂಜೆ 6ಕ್ಕೆ ರಾಘವೇಂದ್ರ ಬಡಶೇಷಿ, ಕೆ.ಎಂ. ಕುಲಕರ್ಣಿ ಮತ್ತು ರವಿ ಎಂ. ಕುಲಕರ್ಣಿ ದಾಸವಾಣಿ ಕಾರ್ಯಕ್ರಮ ನಡೆಸಿ ಕೊಡುವರು. ಉದ್ಯಮಿಗಳಾದ ರಾಘವೇಂದ್ರ ಕೆ. ಮೈಲಾಪುರ, ಮಹೇಶ ಮುದಲಿಯಾರ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬಡಾವಣೆಯ ನಾಗರಿಕರು ಭಾಗವಹಿಸಬೇಕೆಂದು ಕೋರಲಾಗಿದೆ.
3.69 ಕೋಟಿ ಬೆಳೆಹಾನಿ ಪರಿಹಾರ
ಆಳಂದ: 2012-13ನೇ ಸಾಲಿನಲ್ಲಿ ಮಳೆ ಕೊರತೆಯಿಂದ ಬೆಳೆಹಾನಿ ಉಂಟಾಗಿದ್ದು, ವಿಪತ್ತು ನಿಧಿಯಿಂದ ತಾಲೂಕಿನ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಿಗೆ 3.69 ಕೋಟಿ ಪರಿಹಾರ ಮಂಜೂರಾಗಿದ್ದು, ವಿತರಣೆ ಕಾರ್ಯ ಆರಂಭಿಸಲಾಗಿದೆ ಎಂದು ತಹಸೀಲ್ದಾರ್ ಪರಮೇಶ್ವರ ಸ್ವಾಮಿ ತಿಳಿಸಿದ್ದಾರೆ. ತಾಲೂಕಿನಲ್ಲಿ ಸಣ್ಣ ಮತ್ತು ಅತಿಸಣ್ಣ 45 ಸಾವಿರ ರೈತರಿದ್ದು, ಇವರುಗಳಿಗೆ 500 ಗಳಿಂದ 2 ಸಾವಿರ ವರೆಗೆ ಹಣ ನೀಡಲಾಗುತ್ತಿದ್ದು, ಗ್ರಾಮಲೇಖಾಪಾಲಕರು ತಮ್ಮ ಗ್ರಾಮಗಳಲ್ಲಿ ರೈತರಿಗೆ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಸುವರ್ಣ ಭೂಮಿ ಲಾಟರಿ ಮೂಲಕ ಆಯ್ಕೆಗೊಂಡ ರೈತರಿಗೆ ಹೊರತುಪಡಿಸಿ ಉಳಿದ ರೈತರಿಗೆ ಪರಿಹಾರದ ಹಣ ನೀಡಲಾಗುತ್ತಿದೆ. ಈಗಾಗಲೇ 67.16 ಲಕ್ಷ ವಿತರಿಸಲಾಗಿದೆ ಎಂದು ವಿವರಿಸಿದ್ದಾರೆ.
ಇಂದು ಸನ್ಮಾನ
ಚಿಂಚೋಳಿ: ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಶಾಮಸುಂದರ ಪವಾರ ಅವರ ಪದಗ್ರಹಣ ಕಾರ್ಯಕ್ರಮ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಕುಮಾರ ಪಾಟೀಲ್ಗೆ ಸನ್ಮಾನ ಸಮಾರಂಭವನ್ನು ಆ.8 ರಂದು ನಡೆಯಲಿದೆ ಎಂದು ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀಧರ ಪಾಟೀಲ್ ಮತ್ತು ಬಿಜೆಪಿ ಹಿರಿಯ ಮುಖಂಡ ಮಧುಸೂಧನ ಕಾಟಾಪುರ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಚಿರ ರೇವುನಾಯಕ ಬೆಳಮಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಧಾನಪರಿಷತ್ ಸದಸ್ಯರಾದ ರಘುನಾಥ ಮಲ್ಕಾಪುರೆ ಇತರ ಮುಖಂಡರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದ್ದಾರೆ.
ರಾಷ್ಟ್ರ ಪ್ರಶಸ್ತಿಗೆ ಅರ್ಜಿ
ಗುಲ್ಬರ್ಗ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2013ನೇ ಸಾಲಿಗೆ ಅಂಗವಿಲತೆಯುಳ್ಳ ವ್ಯಕ್ತಿಗಳ ಕಾರ್ಯಚಟುವಟಿಕೆ ಪ್ರೋತ್ಸಾಹಿಸುವ ಹಿತದೃಷ್ಟಿಯಿಂದ ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರ ಪ್ರಶಸ್ತಿಗಾಗಿ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಆ.12ರಂದು ಗುಲ್ಬರ್ಗ, ಬೀದರ್, ಯಾದಗಿರಿ ಜಿಲ್ಲೆಯ ಜಿಲ್ಲಾ ವಿಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಚೇರಿಯಲ್ಲಿ ತಮ್ಮ ಸ್ವ ವಿವರಗಳೊಂದಿಗೆ ಸಲ್ಲಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

